ಸೌರಾಷ್ಟ್ರ: ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ಬೌಲರ್ ಒಬ್ಬರ ಕುರಿತು ಮಾತನಾಡಿದ್ದಾರೆ. ಈತ ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದರೆ ನನಗೆ ಆಶ್ಚರ್ಯವಾಗುತ್ತದೆ ಎಂದು ಪೂಜಾರ ನುಡಿದಿದ್ದಾರೆ.
ಅಷ್ಟಕ್ಕೂ ಪೂಜಾರ ಮಾತನಾಡಿದ್ದು ಇದೇ ಮೊದಲ ಬಾರಿಗೆ ಸೌರಾಷ್ಟ್ರಕ್ಕೆ ರಣಜಿ ಟ್ರೋಫಿ ಗೆದ್ದ ನಾಯಕ ಜೈದೇವ್ ಉನಾದ್ಕತ್ ಬಗ್ಗೆ.
ಜೈದೇವ್ ಉನಾದ್ಕತ್ ಈ ರಣಜಿ ಋತುವಿನಲ್ಲಿ 67 ವಿಕೆಟ್ ಕಬಳಿಸಿದ್ದಾರೆ. ಇದು ರಣಜಿ ಇತಿಹಾಸದಲ್ಲಿ ಹೊಸ ದಾಖಲೆ. ಇದುವರೆಗೆ ಯಾವುದೇ ವೇಗದ ಬೌಲರ್ ಒಂದು ರಣಜಿ ಕೂಟದಲ್ಲಿ ಇಷ್ಟು ವಿಕೆಟ್ ಪಡೆದಿಲ್ಲ. ಅದರಲ್ಲೂ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದರು ಉನಾದ್ಕತ್.
ಇಡೀ ಸರಣಿಯಲ್ಲಿ ಜೈದೇವ್ ಅತ್ಯದ್ಭುತ ಬೌಲಿಂಗ್ ನಡೆಸಿದ್ದಾನೆ. ಆತ 67 ವಿಕೆಟ್ ಕಬಳಿಸಿದ್ದು, ಈ ದಾಖಲೆಯನ್ನು ಸದ್ಯಕ್ಕಂತೂ ಮುರಿಯಲು ಸಾಧ್ಯವಿಲ್ಲ. ಭಾರತ ತಂಡಕ್ಕೆ ಆಯ್ಕೆಯಾಗಲು ರಣಜಿ ಟ್ರೋಫಿಯ ಪ್ರದರ್ಶನ ಪ್ರಭಾವ ಬೀರುತ್ತದೆ ಎಂದು ಅನಾರೋಗ್ಯದ ಹೊರತಾಗಿಯೂ ಫೈನಲ್ ನಲ್ಲಿ ಅರ್ಧ ಶತಕ ಸಿಡಿಸಿದ್ದ ಚೇತೇಶ್ವರ ಪೂಜಾರ ಹೇಳಿದರು.
2010ರಲ್ಲಿ ಭಾರತೀಯ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಉನಾದ್ಕತ್ ಆಡಿದ್ದು ಅದೊಂದು ಟೆಸ್ಟ್ ಮಾತ್ರ. 2018ರಲ್ಲಿ ಬಾಂಗ್ಲಾ ವಿರುದ್ಧ ಟಿ20 ಪಂದ್ಯದಲ್ಲಿ ಕಡೆಯದಾಗಿ ಉನಾದ್ಕತ್ ಭಾರತ ಪರ ಆಡಿದ್ದರು.