Advertisement
ಕೆಲವು ವರ್ಷಗಳ ಹಿಂದಿನ ತನಕ ಸುಬ್ರಹ್ಮಣ್ಯಕ್ಕೆ ಬಸ್‌ಗಳ ಸಂಖ್ಯೆ ಕಡಿಮೆಯಿತ್ತು. ಮುಖ್ಯ ರಸ್ತೆಯೇ ನಿಲ್ದಾಣವಾಗಿತ್ತು. ಈಗ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಳವಾಗಿ ಬಸ್‌ಗಳ ಸಂಚಾರದಲ್ಲಿ ಏರಿಕೆಯಾಗಿದೆ. ನಿತ್ಯವೂ ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಲಕ್ಷಾಂತರ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಿದ್ದು, ಯಾತ್ರಿಕರ ಅನುಕೂಲತೆಗಾಗಿ ಸುಸಜ್ಜಿತ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ನಿಲ್ದಾಣಕ್ಕೆ ತೆರಳುವ ರಸ್ತೆ ಸರಿಯಿಲ್ಲದಾಗಿದೆ.
ಪ್ರಸ್ತುತ ಎರಡು ನಿಲ್ದಾಣಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೇಲಿನ ನಿಲ್ದಾಣಕ್ಕೆ ತೆರಳುವ ರಸ್ತೆಯದು ಇಲ್ಲಿ ದೊಡ್ಡ ಸಮಸ್ಯೆ. ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅತ್ಯಲ್ಪ ದೂರದ ರಸ್ತೆಯುದ್ದಕ್ಕೂ ಹೊಂಡಗಳೇ ಇವೆ. ರಸ್ತೆಗೆ ಎಂದೋ ಹಾಕಿದ ಡಾಮರು ಸಂಪೂರ್ಣ ಕಿತ್ತು ಹೋಗಿದೆ. ಅಸಂಖ್ಯ ಬಸ್‌ಗಳು ಇಲ್ಲಿ ಸಂಚರಿಸುವ ವೇಳೆ ಎದ್ದೇಳುವ ಧೂಳು ನಿಲ್ದಾಣಕ್ಕೆ ಹೋಗಿ ಬರುವ ಪ್ರಯಾಣಿಕರ ಬಟ್ಟೆ ಹಾಗೂ ಮೈಬಣ್ಣವನ್ನೇ ಬದಲಿಸುತ್ತದೆ. ಪಕ್ಕದ ಹೊಟೇಲ್, ಅಂಗಡಿಗಳಿಗೂ ಧೂಳು ನುಗ್ಗುತ್ತದೆ. ನಡೆಯಲೂ ಕಷ್ಟ
ಇಕ್ಕಟ್ಟಾದ ಗುಂಡಿಗಳಿಂದ ಕೂಡಿದ ಈ ರಸ್ತೆ ನಡೆದು ಹೋಗುವುದಕ್ಕೂ ಸಾಧ್ಯವಿಲ್ಲದಷ್ಟು ಕೆಟ್ಟಿದೆ. ಇಲ್ಲಿ ಬಸ್‌ಗಳು ತೂರಾಡುತ್ತ ಸಾಗುತ್ತಿವೆ, ಎದುರಿನಿಂದ ವಾಹನ ಬಂದರೆ ಸೈಡ್ ಕೊಡಲೂ ಜಾಗವಿಲ್ಲ. ಹೀಗಾಗಿ ತಾಸು ಹೊತ್ತು ಟ್ರಾಫಿಕ್ ಜಾಮ್ ಆಗುತ್ತಿದೆ. ಯಾತ್ರಾರ್ಥಿಗಳು ಈ ಮಾರ್ಗದಲ್ಲಿ ನಡೆದು ನಿಲ್ದಾಣಕ್ಕೆ ತೆರಳುವಾಗಲೂ ಸಂಕಟ ಅನುಭವಿಸುತ್ತಿರುತ್ತಾರೆ. ಹೊಸ ನಿಲ್ದಾಣದಲ್ಲಿ ಉಪ್ಪಿನಂಗಡಿ, ಪುತ್ತೂರು, ಸುಳ್ಯ, ಕಾಸರಗೋಡು, ಧರ್ಮಸ್ಥಳ, ಮಂಗಳೂರು ಮುಂತಾದ ನಗರ ಹಾಗೂ ಹರಿಹರ, ಐನಕಿದು, ಕಲ್ಮಕಾರು, ಪಂಜ, ಬೆಳ್ಳಾರೆ, ಕಾಣಿಯೂರು ಇತ್ಯಾದಿ ಗ್ರಾಮೀಣ ಭಾಗಕ್ಕೆ ಸಂಚರಿಸುವ ಬಸ್ಸುಗಳು ನಿಲ್ಲುತ್ತಿವೆ. ಹಳೆಯ ನಿಲ್ದಾಣದಲ್ಲಿ ಬೆಂಗಳೂರು, ಮೈಸೂರು, ಮಡಿಕೇರಿ, ಹುಬ್ಬಳ್ಳಿ, ಬೆಳಗಾವಿ, ಗೋಕರ್ಣ, ಕಡೂರು ಕಡೆ ತೆರಳುವ ಬಸ್ ನಿಲ್ಲುತ್ತಿವೆ.
Related Articles
ಕ್ಷೇತ್ರದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಜಾಸ್ತಿಯಾದಂತೆ ಟ್ರಾಪಿಕ್ ಜಾಮ್ ಸಮಸ್ಯೆ ಉದ್ಭವಿಸಿತು. ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ ನಿವೇಶನ ಒದಗಿಸಿತು. ಕೆಎಸ್‌ಆರ್‌ಟಿಸಿ 2004ರಲ್ಲಿ 63.04 ಲಕ್ಷ ರೂ. ವೆಚ್ಚದಲ್ಲಿ 903.62 ಚ.ಮೀ. ವಿಸ್ತೀರ್ಣದ ಬಸ್ ನಿಲ್ದಾಣವನ್ನು ನಿರ್ಮಿಸಿತು.
Advertisement
ಈಗ ದಿನವೊಂದಕ್ಕೆ ಬಂದು ಹೋಗುವ ಸಾರಿಗೆ ಬಸ್‌ಗಳ ಸಂಖ್ಯೆ 205. ನಿತ್ಯ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಆಗಮಿಸುತ್ತಾರೆ. ಬೆಂಗಳೂರಿಗೆ ಸಾರಿಗೆ, ಕರ್ನಾಟಕ ವೈಭವ, ರಾಜಹಂಸ, ಹವಾನಿಯಂತ್ರಿತ ರಹಿತ, ಐರಾವತ ಬಸ್ ಸಂಚಾರವಿದೆ. ಉಳಿದಂತೆ ಧರ್ಮಸ್ಥಳಕ್ಕೆ ಪ್ರತಿ 15 ನಿಮಿಷ ಮತ್ತು ಮಂಗಳೂರಿಗೆ ಅರ್ಧ ತಾಸಿಗೆ ಒಂದರಂತೆ ಬಸ್ ವ್ಯವಸ್ಥೆ ಇದೆ.
ನಿತ್ಯವೂ ಪೈಪೋಟಿ ಸಾರಿಗೆ ಮತ್ತು ಬಾಡಿಗೆ ಖಾಸಗಿ ವಾಹನ ನಿಲುಗಡೆ ಸ್ಥಳ ಎದುರು ಬದುರಾಗಿದ್ದು, ಪ್ರಯಾಣಿಕರ ತುಂಬಿಸುವ ವಿಚಾರದಲ್ಲಿ ಎರಡೂ ಕಡೆಯವರ ನಡುವೆ ಇಲ್ಲಿ ಸ್ಪರ್ಧೆ ಏರ್ಪಡುತ್ತಿದೆ. ಸಾರಿಗೆ ಮತ್ತು ಬಾಡಿಗೆ ವಾಹನಗಳು ತಾಸುಗಟ್ಟಲೆ ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ ನಡೆಸುತ್ತವೆ. ಇದರಿಂದ ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ. ರೈಲ್ವೆ ಸ್ಟೇಶನ್‌ಗೆ ತೆರಳುವ ಪ್ರಯಾಣಿಕರ ಹೊತ್ತೂಯ್ಯುವ ಬಸ್‌ಗಳು ನಿಲ್ದಾಣ ಬಿಟ್ಟು ಮುಖ್ಯ ರಸ್ತೆ ತನಕ ಹೋಗಿ ಪೇಟೆಯಲ್ಲೆ ಪಾರ್ಕಿಂಗ್ ಮಾಡಿ ಪ್ರಯಾಣಿಕರ ತುಂಬಿಸಿಕೊಳ್ಳುತ್ತಿರುವುದರಿಂದ ಮತ್ತಷ್ಟೂ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದೆ. ಏಕೆ ಈ ಪರಿಯ ನಿರ್ಲಕ್ಷ್ಯ?
ನಗರದ ಮುಖ್ಯ ರಸ್ತೆ ವಿಸ್ತರಣೆ ವೇಳೆ ಕಾಯಕಲ್ಪ ಆಗಲಿದೆ ಎಂಬ ನೆಪವೊಡ್ಡಿ ರಸ್ತೆಯನ್ನು ಕಚ್ಚಾರಸ್ತೆಯಾಗಿ ಉಳಿಸಿಕೊಳ್ಳಲಾಗಿದೆ. ಅಲ್ಲಿ ತನಕ ಕಾಯದೆ ಕನಿಷ್ಠ ಕಿತ್ತು ಹೋದ ರಸ್ತೆಗೆ ತೇಪೆ ಹಾಕುವ ಕೆಲಸವನ್ನಾದರೂ ಮಾಡಬೇಕಿತ್ತು. ಸುಧಾರಣೆಯಾಗುವ ಬದಲು ಸಮಸ್ಯೆ ಜಟಿಲವಾಗಿದೆ. ನಿತ್ಯ ಸಂಚಾರದಲ್ಲಿ ಇಲ್ಲಿ ಉಂಟಾಗುವ ತಾಪತ್ರಯ ನಿವಾರಿಸಲು ಏಕಿಷ್ಟು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಪ್ರಯಾಣಿಕರ ಪ್ರಶ್ನೆಗೆ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕು. ಮುಖ್ಯ ರಸ್ತೆ ಜತೆಗೆ
ನಗರದ ಮುಖ್ಯ ರಸ್ತೆ ವಿಸ್ತರಣೆ ವೇಳೆ ಈ ರಸ್ಯೆ ಅಭಿವೃದ್ಧಿಯೂ ಆಗುತ್ತದೆ. ಒಂದು ವೇಳೆ ಈಗ ಇಲ್ಲಿನ ರಸ್ತೆ ಅಭಿವೃದ್ಧಿ ಪಡಿಸಿದಲ್ಲಿ ರಸ್ತೆ ಕಾಮಗಾರಿ ನಡೆಸುವಾಗ ತೆರವು ಮಾಡಬೇಕಾಗುತ್ತದೆ. ಈ ಕಾರಣದಿಂದ ಸಮಸ್ಯೆ ಹಾಗೆ ಉಳಿದುಕೊಂಡಿದೆ.
– ಸುಬ್ರಹ್ಮಣ್ಯ ಭಟ್, ಸಂಚಾರ
ನಿಯಂತ್ರಕ, ಸುಬ್ರಹ್ಮಣ್ಯ ಬಸ್ ನಿಲ್ದಾಣ ಬಾಲಕೃಷ್ಣ ಭೀಮಗುಳಿ