ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಎದೆ ನಡುಗಿಸುವ ಚಳಿಯಲ್ಲಿ ದೇಶದ ಗಡಿ ಕಾಯುವ ಮತ್ತು ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಯೋಧರಿಗೆ ಈ ಬಾರಿ ವಿಶೇಷವಾಗಿ ಪಾಲಿ ಯುರೇಥೇನ್ ಫೋಮ್ ನಿಂದ ತಯಾರಿಸಲಾದ ಸುಧಾರಿತ ಮಾದರಿಯ ಟೆಂಟ್ ಗಳನ್ನು ಒದಗಿಸಲಾಗುವುದು ಎಂಬ ಮಾಹಿತಿಯನ್ನು ಭಾರತೀಯ ಸೇನಾ ಮೂಲಗಳು ನೀಡಿವೆ.
ಕೆಂದ್ರ ಸರಕಾರ ಈಗಾಗಲೇ ಈ ಮಾದರಿಯ ಸುಮಾರು 40 ಸುಲಭವಾಗಿ ರಚಿಸಬಹುದಾಗಿರುವ ಟೆಂಟ್ ಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಇರುವ ಖಾಸಗಿ ಮನೆಗಳನ್ನು ಮತ್ತು ಹೊಟೇಲುಗಳನ್ನು ಮುಂಬರುವ ಚಳಿಗಾಲದ ಅವಧಿಗೆ ದುರಸ್ತಿ ಮಾಡುವ ಬದಲಿಗೆ ಈ ರೀತಿಯ ಬೆಚ್ಚನೆಯ ಟೆಂಟ್ ಗಳನ್ನು ನಿರ್ಮಿಸುವುದು ಸೇನೆಯ ಪಾಲಿಗೆ ಸುಲಭವಾಗಲಿದೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಕಣಿವೆ ರಾಜ್ಯದಲ್ಲಿ ಚಳಿಗಾಲದ ಋತು ಪ್ರಾರಂಭವಾಗಿಲಿದೆ.
ಈ ಪಾಲಿ ಯುರೇಥನ್ ಫೋಮ್ ಹಟ್ ನಲ್ಲಿ ಚಳಿಗಾಳಿಯನ್ನು ತಡೆಯಬಲ್ಲ ವಿಶೇಷವಾದ ಫೋಮ್ ನ ಸಂರಚನೆಯನ್ನು ಹೊಂದಿದೆ. ಇದು ಜಮ್ಮ ಜವಾನರಿಗೆ ಚಳಿಯಿಂದ ವಿಶೇಷ ರಕ್ಷಣೆಯನ್ನು ನೀಡುತ್ತದೆ.
ಇದರೊಂದಿಗೆ ಜಮ್ಮು ಕಾಶ್ಮೀರದಲ್ಲಿ ಅರೆಸೇನಾ ಪಡೆಗಳನ್ನು ಇನ್ನಷ್ಟು ಕಾಲ ನಿಯೋಜಿಸುವ ಸಾಧ್ಯತೆಯನ್ನು ಕೇಂದ್ರ ಈ ಮೂಲಕ ನೀಡಿದಂತಾಗಿದೆ. ಹೆಚ್ಚಿನ ಹಿಮಬೀಳುವ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ಸೇನಾಪಡೆಗಳಿಗೆ ಮೊದಲ ಆದ್ಯತೆ ನೀಡಿ ಈ ಬೆಚ್ಚನೆಯ ಟೆಂಟ್ ಗಳನ್ನು ಒದಗಿಸಲಾಗುವುದು ಎಂದೂ ಸೇನಾಮೂಲಗಳ ಮಾಹಿತಿಗಳಿಂದ ತಿಳಿದುಬಂದಿದೆ.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೂ ಕೆಲವು ದಿನಗಳ ಮುಂಚೆ ಹೆಚ್ಚಿನ ಸಿ.ಆರ್.ಪಿ.ಎಫ್. ಪಡೆಗಳನ್ನು ಜಮ್ಮು ಕಾಶ್ಮೀರಕ್ಕೆ ರವಾನಿಸಲಾಗಿತ್ತು. ಬಳಿಕ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಲಾಗಿತ್ತು. ಜಮ್ಮು-ಕಾಶ್ಮೀರ ಮತ್ತು ಲಢಾಕ್ ಕೇಂದ್ರಾಡಳಿತ ಪ್ರದೇಶಗಳು ಅಕ್ಟೋಬರ್ 31ರಿಂದ ಕಾರ್ಯಾರಂಭ ಮಾಡಲಿವೆ.