ಮಂಗಳೂರು: ಎರಡು ವರ್ಷದ ಪಿಯುಸಿ ಶಿಕ್ಷಣ ವಿದ್ಯಾರ್ಥಿಗಳ ಬದುಕಿನಲ್ಲಿ ಬಹಳ ಮುಖ್ಯವಾದ ಘಟ್ಟವಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನವು ಪರಿಪೂರ್ಣ ರೀತಿಯಲ್ಲಿ ದೊರಕಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಬಲ್ಲುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ| ಕೆ.ಭೈರಪ್ಪ ಹೇಳಿದರು.
ವಿಕಾಸ್ ಪ.ಪೂ. ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಗುರುವಾರ ಮಂಗಳೂರು ಪುರಭವನ ದಲ್ಲಿ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ಶಿಸ್ತಿನಿಂದ ಬದುಕುವುದಕ್ಕೆ ಮಾರ್ಗದರ್ಶನ ಅಗತ್ಯ. ಈ ನಿಟ್ಟಿನಲ್ಲಿ ಮಂಗಳೂರಿನ ವಿಕಾಸ್ ಕಾಲೇಜು ಶಿಸ್ತುಬದ್ಧ ಶಿಕ್ಷಣದ ಮೂಲಕ ಉನ್ನತ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ, ಮಾಜಿ ಸಚಿವ ಹಾಗೂ ಕಾಲೇಜಿನ ಮುಖ್ಯಸ್ಥರಾದ ಜೆ. ಕೃಷ್ಣ ಪಾಲೆಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬದ್ಧತೆ ಮತ್ತು ಬಾಧ್ಯತೆ ಮುಖ್ಯ. ವೃತ್ತಿ ಮಾರ್ಗದರ್ಶನವನ್ನು ನೀಡುವುದರ ಮೂಲಕ ಒಳ್ಳೆಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುವ ಗುರಿ ನಮ್ಮದು. ಯಾವ ದಾರಿಯಲ್ಲಿ ಹೋಗಬೇಕು ಎನ್ನುವ ಸಂಪೂರ್ಣ ತಿಳಿವಳಿಕೆಯನ್ನು ಈ ಶಿಬಿರ ನೀಡುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿಕಾಸ್ ಎಜು ಸೊಲ್ಯುಶನ್ ಸಲಹೆ ಗಾರರಾದ ಡಾ| ಅನಂತ್ ಪ್ರಭು ಜಿ., ಪ್ರಾಂಶುಪಾಲ ಪ್ರೊ| ಟಿ. ರಾಜಾರಾಮ್ ರಾವ್, ವಿಕಾಸ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಜೆ. ಕೊರಗಪ್ಪ, ಸೂರಜ್ ಕುಮಾರ್ ಕಲ್ಯ ಉಪಸ್ಥಿತರಿದ್ದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಈ ಕಾರ್ಯಾಗಾರದಲ್ಲಿ ದಂತ ವೈದ್ಯಕೀಯ ಕ್ಷೇತ್ರದ ಬಗ್ಗೆ ಡಾ| ಸುಧೀಂದ್ರ ಪ್ರಭು, ಎಂಜಿನಿಯರಿಂಗ್ ಕ್ಷೇತ್ರದ ಬಗ್ಗೆ ರಕ್ಷಿತ್ ಶೆಟ್ಟಿ , ಐಎಸ್‌ಎಂಎಚ್ ಕ್ಷೇತ್ರದ ಬಗ್ಗೆ ಡಾ| ಪ್ರವೀಣ್‌ರಾಜ್, ಡಾ| ವನಿತಾ ಶೆಟ್ಟಿ, ಬಿಎಸ್‌ಸಿ, ವೆಟರ್ನರಿ, ಫಾರೆಸ್ಟರಿ ಆ್ಯಂಡ್ ಅಗ್ರಿಕಲ್ಚರ್ ಕ್ಷೇತ್ರದ ಬಗ್ಗೆ ಡಾ| ಶಿವಕುಮಾರ್ ಮಗಧ, ಭವಿಷ್ಯದ ಕೋರ್ಸುಗಳ ಬಗ್ಗೆ ಡಾ| ಅನಂತ್ ಪ್ರಭು ಜಿ., ಡಿಸೈನಿಂಗ್ ಕ್ಷೇತ್ರದ ಬಗ್ಗೆ ಶಾನ್ ಡೆಸಾ, ಫಿಸಿಯೋಥೆರಫಿ ಮತ್ತು ಫಾರ್ಮಾ ಕ್ಷೇತ್ರದ ಬಗ್ಗೆ ಡಾ| ಸಂಜ್ಯೋತ್ ಎಚ್.ಎಸ್., ಮೆಡಿಕಲ್, ನೀಟ್ ಕ್ಷೇತ್ರದ ಬಗ್ಗೆ ಜಿ.ಜಿ. ಲಕ್ಷ್ಮಣ್ ಪ್ರಭು ಮಾರ್ಗದರ್ಶನ ನೀಡಿದರು. ಉಪನ್ಯಾಸಕಿ ವೈಶಾಲಿ ವಂದಿಸಿದರು. ದೀಪಿಕಾ ಶೆಟ್ಟಿ ನಿರೂಪಿಸಿದರು.