Advertisement
ಇಂಥ ಸಂದರ್ಭದಲ್ಲಿ ನಮಗೆಲ್ಲ, ನಾಗಾಲ್ಯಾಂಡ್‌ನ ಯುವಕ ಜೆಂಪು ರೋಂಗೆ¾„ನ ಸಾಹಸದ ಬದುಕು ಮಾದರಿಯಾಗಬೇಕು. ಈತನ ತಮ್ಮ ಡೇವಿಡ್, ಡ್ರಗ್ಸ್ ಸೇವನೆಯ ಕಾರಣಕ್ಕೆ ಸತ್ತುಹೋದ. ಪ್ರೀತಿಯ ತಮ್ಮನನ್ನು ಕಳೆದುಕೊಂಡ ಜೆಂಪು ಆಮೇಲೆ ಏನು ಮಾಡಿದ ಗೊತ್ತೆ? ಡ್ರಗ್ಸ್ ನ ದಾಸರಾಗಿದ್ದ ಯುವಕರನ್ನು ಆ ದುಶ್ಚಟದಿಂದ ಪಾರು ಮಾಡಲು ಟೊಂಕಕಟ್ಟಿ ನಿಂತ. ಓದು ನಿಲ್ಲಿಸಿದ್ದ ಮಕ್ಕಳ ಮನವೊಲಿಸಿ ಅವರನ್ನೆಲ್ಲ ಶಾಲೆ-ಕಾಲೇಜಿಗೆ ಕಳಿಸಿದ. ಅಷ್ಟೇ ಅಲ್ಲ, 1000ಕ್ಕೂ ಹೆಚ್ಚು ಮಂದಿಗೆ ನೌಕರಿಯನ್ನೂ ಕೊಡಿಸಿದ!
***
“ನಮ್ಮ ತಂದೆಗೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಅರೆಕಾಲಿಕ ನೌಕರಿಯಿತ್ತು. ಅಮ್ಮ ಗೃಹಿಣಿ. ನಾವು ಐವರು ಮಕ್ಕಳು. ಅಪ್ಪ, ಮನೆ ಖರ್ಚಿಗೆ ನಯಾ ಪೈಸೆಯನ್ನೂ ಕೊಡುತ್ತಿರಲಿಲ್ಲ. ಸಂಬಳದ ಹಣವನ್ನೆಲ್ಲ ಕುಡಿತಕ್ಕೇ ಖರ್ಚು ಮಾಡುತ್ತಿದ್ದರು. ಹಾಗಂತ ಉಪವಾಸ ಇರಲು ಸಾಧ್ಯವೆ? ಅಮ್ಮ, ಮಾರ್ಕೆಟ್‌ನಿಂದ ತರಕಾರಿ ತಂದು, ಅದನ್ನು ಬೀದಿಬದಿಯಲ್ಲಿ ಮಾರಾಟ ಮಾಡಿ ಮನೆಯವರಿಗೆಲ್ಲ ಅನ್ನಕ್ಕೆ ದಾರಿ ಮಾಡಿದ್ದಳು. ಪ್ರತೀ ದಿನವೂ ವ್ಯಾಪಾರ ಆಗುತ್ತದೆ ಎಂಬ ಗ್ಯಾರಂಟಿ ಇರಲಿಲ್ಲ. ಆಗೆಲ್ಲ ಬಂಧುಗಳು, ಪರಿಚಯದವರು ಹಾಗೂ ಪರಿಚಿತರ ಬಳಿ-“ನಾಲ್ಕು ಕಾಸು ಕೊಡ್ರಪ್ಪ, ಮನೆ ಖರ್ಚಿಗೆ ಹಣವಿಲ್ಲ’ ಎಂದು ದೀನಳಾಗಿ ಪ್ರಾರ್ಥಿಸುತ್ತಿದ್ದಳು.
Related Articles
Advertisement
ಮನೆಮನೆಗೆ ಸೋಪು, ಶಾಂಪೂ ಪೂರೈಸುವ ಸೇಲ್ಸ್ ಬಾಯ್ ಕೆಲಸಕ್ಕೆ ಸೇರಿದೆ. ಅನಂತರ ದೂರಶಿಕ್ಷಣದಲ್ಲಿ 10ನೇ ತರಗತಿ ಪಾಸಾದೆ. ಈ ಸಂದರ್ಭದಲ್ಲಿಯೇ, ನಾವ್ಯಾರೂ ಊಹಿಸದಂಥ ಅನಾಹುತವೊಂದು ನಡೆದುಹೋಯಿತು. ಅಪ್ಪನ ಬೇಜವಾಬ್ದಾರಿ, ಅಮ್ಮನ ಅಸಹಾಯಕತೆ, ಮಕ್ಕಳ ಸಂಕಟ, ಮುಗಿಯದ ಬಡತನವನ್ನೆಲ್ಲ ನೋಡಿದ ನನ್ನ ತಮ್ಮ ಡೇವಿಡ್, ಡಿಪ್ರಶನ್‌ಗೆ ಹೋಗಿಬಿಟ್ಟ. ಅನಂತರ ಎಲ್ಲ ನೋವು ಮರೆಯುವ ಆಸೆಯಿಂದ ಡ್ರಗ್ಸ್ ನ ದಾಸನಾದ. ವಿಷಯ ತಿಳಿದಾಗ ನಾವೆಲ್ಲ ಹೌಹಾರಿದೆವು. ಅವನನ್ನು ಕೂರಿಸಿಕೊಂಡು ಬುದ್ಧಿ ಹೇಳಿದೆವು. ದುಶ್ಚಟಗಳನ್ನು ಬಿಡಿಸುವ ಕೇಂದ್ರಕ್ಕೆ ಸೇರಿಸಿದೆವು. ಅದಕ್ಕೆ ಹಣ ಹೊಂದಿಸಲು, ಹತ್ತಾರು ಕಡೆ ಸಾಲ ಮಾಡಿದೆವು.
ನಮ್ಮ ಕಳಕಳಿಯನ್ನು ಡೇವಿಡ್ ಅರ್ಥ ಮಾಡಿಕೊಂಡ. ಚಿಕಿತ್ಸೆ ಪಡೆದು ಹೊರಬಂದವನು-” ನಿಮಗೆಲ್ಲ ತುಂಬಾ ನೋವು ಕೊಟ್ಟೆ. ನನ್ನನ್ನು ಕ್ಷಮಿಸಿಬಿಡಿ. ನಾನು ಇನ್ಮೆàಲೆ ಬದಲಾಗ್ತೀನೆ. ಪೂರ್ತಿ ಹುಷಾರಾಗಿ ದುಡಿಯಲು ಹೋಗ್ತೀನೆ…!’ ಅಂದ. ಆದರೆ ಅನಂತರದ ಕೆಲವೇ ದಿನಗಳಲ್ಲಿ ಮತ್ತೆ ಡ್ರಗ್ಸ್ ನ ದಾಸನಾದ. ಮತ್ತೆ ಅವನಿಗೆ ಚಿಕಿತ್ಸೆ ಕೊಡಿಸಬೇಕು ಎಂದು ನಾವು ಯೋಚಿಸುತ್ತಿದ್ದಾಗಲೇ, 2007ರ ಒಂದು ದಿನ, ಡ್ರಗ್ಸ್ ಸೇವನೆಯ ಕಾರಣದಿಂದಲೇ ಡೇವಿಡ್ ಸತ್ತುಹೋದ…ನಾಗಾಲ್ಯಾಂಡ್‌ನಲ್ಲಿ ಡ್ರಗ್ಸ್ ಮತ್ತು ಡ್ರಿಂಕ್ಸ್ ನ ಹಾವಳಿ ವಿಪರೀತ. ಪ್ರತೀ ಮನೆಯಲ್ಲೂ ಡ್ರಗ್ಸ್ ವ್ಯಸನಿಗಳಿದ್ದಾರೆ/ಕುಡುಕರಿದ್ದಾರೆ. ಇದೇ ಕಾರಣಕ್ಕೆ ವಿಚ್ಛೇದನಗಳು ಹೆಚ್ಚಾಗಿವೆ. ದಾಂಪತ್ಯದಲ್ಲಿ ಕಲಹಗಳಾಗಿವೆ. ಡ್ರಗ್ಸ್ ಸೇವನೆಯಿಂದ ಸಾಯುವುದು “ಸಾಮಾನ್ಯ’ ಸಂಗತಿಯಾಗಿದೆ! ಇವೆಲ್ಲಾ ಅರ್ಥವಾಗುವ ವೇಳೆಗೆ ನಾನು ಪಿಯುಸಿ ಡ್ರಾಪ್ ಔಟ್ ಆಗಿದ್ದೆ. ಎನ್‌ಜಿಒ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಅಲ್ಲಿ, ಪ್ರತೀ ತಿಂಗಳೂ ಸಂಬಳ ಬರುತ್ತಿತ್ತು. ಅದನ್ನು ನೋಡಿದ ತತ್‌ಕ್ಷಣ, “ನಾನು ಇನ್ಮುಂದೆ ಬದಲಾಗ್ತಿನಣ್ಣಾ, ನನ್ನನ್ನು ಇದೊಂದ್ಸಲ ಉಳಿಸ್ಕೋ’ ಎಂದಿದ್ದ ನನ್ನ ತಮ್ಮ ಡೇವಿಡ್‌ನ ಮಾತು ನೆನಪಾಗುತ್ತಿತ್ತು. ನನ್ನ ತಮ್ಮನಂತೂ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟ. ಅವನು ಮತ್ತೆಂದೂ ನನಗೆ ಸಿಗಲಾರ. ಸುತ್ತಲೂ ಇರುವ ಹಲವು ಮಕ್ಕಳಲ್ಲಿ ಅವನ ಮುಖ ನೋಡಬಾರದೇಕೆ? ಡ್ರಗ್ಸ್ ಆಡಿಕ್ಟ್ ಆದವರನ್ನು, ಶಾಲೆ ಬಿಟ್ಟವರನ್ನು ಸರಿದಾರಿಗೆ ತರಬಾರದೇಕೆ? ಆ ಮೂಲಕ ಒಂದೊಂದು ಮನೆಯ ನೆಮ್ಮದಿ ಉಳಿಸಬಾರದೇಕೆ ಎಂಬ ಯೋಚನೆ ಬಂದದ್ದೇ ಆಗ. ನಾನು ತಡಮಾಡಲಿಲ್ಲ. ನಾನೇ ಒಂದು ಎನ್‌ಜಿಒ ಆರಂಭಿಸಲು ಮುಂದಾದೆ. ಹಲವರ ಸಲಹೆಯಂತೆ, ಅದಕ್ಕೆ Community Avenue Network (CAN) Youth ಎಂದು ಹೆಸರಿಟ್ಟೆ. ತಮಾಷೆಯೆಂದರೆ, ಹೀಗೆ ಎನ್‌ಜಿಒ ಆರಂಭಿಸಿದೆನಲ್ಲ; ಆಗ ನನ್ನ ಬಳಿ ಇದ್ದುದು ಬಿಡಿಗಾಸು ಮತ್ತು ಪಿಯುಸಿ ಡ್ರಾಪ್‌ಔಟ್ ಎಂಬ ಕ್ವಾಲಿಫಿಕೇಶನ್. ಇದನ್ನು ತಿಳಿದು ಹಲವರು ಗೇಲಿ ಮಾಡಿದರು. ಓಹ್, ಎನ್‌ಜಿಒ ಮಾಡ್ತಿದ್ದೀಯ? ಅಂದ್ರೆ ನೀನೂ ದುಡ್ಡು ಮಾಡಲು ದಾರಿ ಹುಡುಕಿದೆ ಅಂತ ಆಯ್ತು ಎಂದು ಆಡಿಕೊಂಡರು. ಇಂಥ ಯಾವ ಮಾತಿಗೂ ಕಿವಿಗೊಡಬಾರದು. ಈ ಸಮಾಜದಲ್ಲಿ ಒಂದು ಬದಲಾವಣೆ ತರಲೇಬೇಕು ಎಂದು ನನಗೆ ನಾನೇ ಹೇಳಿಕೊಂಡೆ. ಈ ಸಂದರ್ಭದಲ್ಲಿಯೇ ಹೊಸ ಎನ್‌ಜಿಒಗಳನ್ನು ಪ್ರೋತ್ಸಾಹಿ ಸಲು ನೀಡುವ 2 ಲಕ್ಷ ರೂ.ಗಳ ಫೆಲೋಶಿಪ್ ಸಿಕ್ಕಿತು. ಈ ಫೆಲೋಶಿಪ್ ಸಂಬಂಧವಾಗಿ ಸಂದರ್ಶನ ಮಾಡಿದವರು ಬಾಸ್ಕೋ ಇನ್‌ಸ್ಟಿಟ್ಯೂ ಟ್ ನ ಫಾದರ್ ಜೆರ್ರಿ ಥಾಮಸ್. “”ಈ ಹಣ ತಗೊಂಡು ಏನ್ಮಾಡ್ತೀಯ?” ಎಂದು ಕೇಳಿದರು. ಅವರಿಗೆ ನಮ್ಮ ಮನೆಯ ದುರಂತದ ಕಥೆ, ನನ್ನ ಅಸಹಾಯಕತೆ, ಈಗಿನ ಗುರಿ-ಉದ್ದೇಶವನ್ನು ಹೇಳಿಕೊಂಡೆ. “ವೆರಿ ಗುಡ್, ನಿನ್ನದು ತುಂಬಾ ಒಳ್ಳೆಯ ಯೋಚನೆ. ಜತೆಗೆ ನಾನಿರುತ್ತೇನೆ. ದೊಡ್ಡ ಸಾಧನೆ ಮಾಡು’ ಎಂದು ಹಾರೈಸಿದರು. ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ಮಾಡಿದರು. ಫೆಲೋಶಿಪ್‌ನ ಹಣದಿಂದ ಚಿಕ್ಕದೊಂದು ಆಫೀಸ್ ಮಾಡಿಕೊಂಡೆ. ಅನಂತರ ಕರಕುಶಲ ಕೆಲಸ ತಿಳಿದ ನಾಲ್ಕು ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಂಡೆ. ನಾನಿದ್ದ ಏರಿಯಾದ ಮನೆಮನೆಗೂ ಹೋಗಿ-ನಮ್ಮ ಮನೆಯ ಸಂಕಟದ ಕತೆ ಹೇಳಿಕೊಂಡೆ. ನಿಮ್ಮ ಮನೆಯ ಮಕ್ಕಳೂ ಹಸಿವು/ಬಡತನ/ನಿರುದ್ಯೋಗ/ಅಭದ್ರತೆಯ ಕಾರಣಕ್ಕೆ ಹಾಳಾಗು ವುದು ಬೇಡ. ಅವರನ್ನು ಶಾಲೆಗೆ ಕಳಿಸಿ. ಓದಲು ಇಷ್ಟವಿಲ್ಲ ಅಂದರೆ ಅನ್ನ ಸಂಪಾದನೆಯ ಕೆಲಸ ಕಲಿಸ್ತೇನೆ. ಮಕ್ಕಳನ್ನು ನನ್ನಲ್ಲಿಗೆ ಕಳಿಸಿ ಎಂದು ಕೈಮುಗಿದು ಬೇಡಿಕೊಂಡೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆದೊಯ್ದೆ. ಅವರ ಸ್ಕೂಲ್-ಕಾಲೇಜಿನ ಫೀ ಕಟ್ಟಿದೆ. ನಾನಿದ್ದ ಧಿಮಾಪುರ ಜಿಲ್ಲೆಯ ಅಂಗಡಿ, ಹೊಟೇಲ್, ಪೆಟ್ರೋಲ್ ಬಂಕ್‌ನ ಮಾಲಕರನ್ನು ಭೇಟಿ ಮಾಡಿ- “ನನ್ನ ಕಡೆಯ ಹುಡುಗರಿಗೆ ಸಣ್ಣದೊಂದು ನೌಕರಿ ಕೊಡಿ ಸಾರ್’ ಎಂದು ಪ್ರಾರ್ಥಿಸಿದೆ. ಸ್ವಂತ ಉದ್ಯಮ ಮಾಡ್ತೇವೆ ಅಂದವರಿಗೆ, ಹೆಣಿಗೆ, ಮರಗೆಲಸ, ಕುರ್ಚಿ ತಯಾರಿಕೆ, ಕುಂಬಾರಿಕೆ, ಎಲೆಕ್ಟ್ರೀಶಿಯನ್, ಟೈಲರಿಂಗ್ ಕೆಲಸದ ತರಬೇತಿ ಕೊಡಿಸಿದೆ. ಅದೃಷ್ಟಕ್ಕೆ, ನನ್ನ ಕಡೆಯಿಂದ ನೌಕರಿಗೆ ಸೇರಿದವರೆಲ್ಲ ಬದುಕಿನಲ್ಲಿ “ಸೆಟ್ಲ’ ಆಗಿಬಿಟ್ಟರು. ಈ ಸಂದರ್ಭದಲ್ಲಿಯೇ ಪರಿಚಯವಾದ ಐದಾರು ಮಂದಿ ಶಿಕ್ಷಕರು- ಉಚಿತವಾಗಿ ಕೋಚಿಂಗ್ ಕ್ಲಾಸ್ ನಡೆಸಲು ಒಪ್ಪಿದರು. ಪರಿಣಾಮ: ಕಡುಬಡವರ ಮನೆಯ ಮಕ್ಕಳಿಗೆಲ್ಲ ಉತ್ತಮ ಶಿಕ್ಷಣ ಕೊಡಲು ಸಾಧ್ಯವಾಯಿತು. ನನ್ನ CAN Youth ಸಂಸ್ಥೆಯ ಹೆಸರು ಅವರಿವರ ಮೂಲಕವೇ ನಾಗಾಲ್ಯಾಂಡ್‌ನ ಮೂಲೆಮೂಲೆಯನ್ನೂ ತಲುಪಿತು! ಹಾಗಂತ ನನಗೆ ಕಷ್ಟಗಳೇ ಬಂದಿಲ್ಲ ಎಂದು ಅರ್ಥವಲ್ಲ. ನನ್ನ ಯಶಸ್ಸಿನ ಹಿಂದೆ, ಪೂರ್ತಿ ಹತ್ತು ವರ್ಷಗಳ ಪರಿಶ್ರಮವಿದೆ. ಎಷ್ಟೋ ಬಾರಿ ಜನರ ಟೀಕೆ, ಚುಚ್ಚುಮಾತು, ಪದೇಪದೆ ಆದ ಅವಮಾನ, ಆರ್ಥಿಕ ತೊಂದರೆಯ ಕಾರಣದಿಂದ ಗಂಟೆಗಟ್ಟಲೆ ಅತ್ತಿದ್ದೇನೆ. ನಾಲ್ಕೈದು ಸಂದರ್ಭದಲ್ಲಿ, ಆತ್ಮಹತ್ಯೆ ಮಾಡಿಕೊಳ್ಳಲೂ ಯೋಚಿಸಿದ್ದೇನೆ. ಅಂಥ ಸಂದರ್ಭದಲ್ಲೆಲ್ಲ- ಅಣ್ಣಾ, ನೀನು ಸಾಯಬೇಡ. ಏನಾದರೂ ಸಾಧನೆ ಮಾಡು ಎಂದು ನನ್ನ ತಮ್ಮ ಡೇವಿಡ್ ಎಚ್ಚರಿಸಿದಂತೆ ಭಾಸವಾಗಿದೆ. ಈಗ ಏನೇನೆಲ್ಲ ಆಗಿಬಿಟ್ಟಿದೆ ಅಂದರೆ- ನನ್ನ ಎನ್ ಜಿ ಒ ಕಡೆಯಿಂದ ನೌಕರಿ ಪಡೆದವರ ಸಂಖ್ಯೆ 1,000 ದಾಟಿದೆ. ಪಿಯುಸಿ ಡ್ರಾಪ್‌ಔಟ್ ಆಗಿರುವ ನನ್ನ ಎನ್ ಜಿ ಒದಲ್ಲಿ ಪದವೀಧರರು, ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಕೆಲಸ ಮಾಡುತ್ತಿದ್ದಾರೆ! ನಂಬುತ್ತಿರಾ ? ನಮ್ಮ ಎನ್‌ಜಿಒ ಯಶೋಗಾಥೆಯ ಬಗ್ಗೆ ಬಿಬಿಸಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಿದೆ. ನನ್ನನ್ನು, “ಚೇಂಜ್ ಮೇಕರ್’ ಎಂದು ಗುರುತಿಸಲಾಗಿದೆ. ನಾಗಾಲ್ಯಾಂಡ್ ಸರಕಾರ ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಸಮಿತಿಗೆ ಕಾರ್ಯದರ್ಶಿ ಎಂದು ನೇಮಕ ಮಾಡಿದೆ. ದಾರಿಯಲ್ಲಿ ಸಿಕ್ಕ ಯುವಕರು- ನಿಮ್ಮಿಂದಾಗಿ ನಮ್ಮ ಬದುಕು ಹಸನಾಯಿತು ಎಂದು ಕೈಮುಗಿದಿದ್ದಾರೆ. ಅಪ್ಪ, “ನಾನಿನ್ನು ಕುಡಿಯೋದಿಲ್ಲ ಕಣೋ, ನಿನ್ನ ಜತೆಯಲ್ಲಿ ನಾನೂ ಕೆಲಸ ಮಾಡ್ತೇನೆ ಕಣೋ’ ಅನ್ನುತ್ತಾ ಕಣ್ತುಂಬಿಕೊಂಡಿದ್ದಾರೆ. ಆಗೆಲ್ಲ, ಇಂಥ ಖುಷಿಯನ್ನು ನೋಡಲಿಕ್ಕಾ ದರೂ ನನ್ನ ತಮ್ಮ ಡೇವಿಡ್ ಇರಬೇಕಿತ್ತು ಅನಿಸುತ್ತದೆ. ಅವನು ಜತೆಗಿಲ್ಲ ಎಂದು ಕೊರಗುವುದಕ್ಕಿಂತ, ಸುತ್ತಲಿನ ಮಕ್ಕಳಲ್ಲಿ ನನ್ನ ತಮ್ಮ ಇದ್ದಾನೆ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ…’ ಹೀಗೆ ಮುಗಿಯುತ್ತದೆ ಜೇಂಪು ರೋಂಗ್ ಮೈನ ಮಾತು. – ಎ.ಆರ್.ಮಣಿಕಾಂತ್