Advertisement

ಪ್ರಸಾರಂಗದಿಂದ ಪಿಎಚ್‌ಡಿ ಪ್ರಬಂಧಗಳ ಪ್ರಕಟಣೆ

09:03 PM Nov 13, 2019 | Lakshmi GovindaRaju |

ಮೈಸೂರು: ಪ್ರಸಾರಂಗ ವತಿಯಿಂದ ಮೈಸೂರು ವಿವಿ ಸಂಶೋಧಕರು ಮಂಡಿಸಿದ ಪಿಎಚ್‌ಡಿ ಪ್ರಬಂಧಗಳನ್ನು ಪುಸ್ತಕವಾಗಿ ಪ್ರಕಟಿಸುವ ಚಿಂತನೆ ನಡೆಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಪ್ರಸಾರಂಗ ನಿರ್ದೇಶಕ ಪ್ರೊ.ಎಂ.ಜಿ. ಮಂಜುನಾಥ ತಿಳಿಸಿದರು.

Advertisement

ಮೈಸೂರು ವಿಶ್ವವಿದ್ಯಾಲಯ ಪ್ರಸಾರಂಗ ವತಿಯಿಂದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ 40 ಪುಸ್ತಕಗಳ ಲೋಕಾರ್ಪಣೆ ಹಾಗೂ ಪ್ರಚಾರೋಪನ್ಯಾಸ ಮಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಮೈಸೂರು ವಿವಿಯ ಸಂಶೋಧಕರು ಮಂಡಿಸಿದ ನೂರು ಪಿಎಚ್‌ಡಿ ಪ್ರಬಂಧಗಳನ್ನು ಪ್ರಸಾರಂಗ ಪುಸ್ತಕವನ್ನಾಗಿ ಪ್ರಕಟಿಸಿದೆ. ಇದರಿಂದ ಇತರೆ ವಿದ್ಯಾರ್ಥಿಗಳಿಗು ವಿಷಯವನ್ನು ತಲುಪಿಸಿದಂತಾಗುತ್ತದೆ. ಜೊತೆಗೆ ಸಂಗ್ರಹಿಸಿ ಇಡಲು ಸಹಕಾರಿ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಪ್ರಸಾರಂಗ ವತಿಯಿಂದ ಯೋಗ್ಯ ಪ್ರಬಂಧಗಳನ್ನು ಪುಸ್ತಕಗಳ ರೂಪದಲ್ಲಿ ಹೊರತರುವ ಚಿಂತನೆ ನಡೆಸಲಾಗಿದೆ. ಇದಕ್ಕೆ ಕುಲಪತಿಗಳು ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಪ್ರೋತ್ಸಾಹ: ಕಳೆದ ನಾಲ್ಕು ತಿಂಗಳಲ್ಲಿ ಪ್ರಸಾರಂಗದಿಂದ 20 ಪುಸ್ತಕಗಳನ್ನು ಪ್ರಕಟ ಮಾಡಲಾಗಿದೆ. ಇದುವರೆಗೆ 3 ಸಾವಿರ ಪುಸ್ತಕಗಳನ್ನು ಪ್ರಕಟಿಸಿ, ಹೊಸ ಬರಹಗಾರರಿಗೆ ಹಾಗೂ ವಿದ್ವಾಂಸರಿಗೆ ಪ್ರೋತ್ಸಹ ನೀಡಲಾಗಿದೆ. ಅಲ್ಲದೇ ಪ್ರಬುದ್ಧ ಕರ್ನಾಟಕ ಎಂಬ ಪುಸ್ತಕದ ವಿಶೇಷ ಸಂಚಿಕೆಯನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ವಿ. ವೆಂಕಟಾಚಲಶಾಸ್ತ್ರಿ ಮಾತನಾಡಿ, ಮೈಸೂರು ವಿವಿ ಹಾಗೂ ಪ್ರಸಾರಂಗಕ್ಕೆ ಪ್ರೊ.ಎನ್‌.ಎಸ್‌. ಸುಬ್ಬರಾಯರು, ಬಿಎಂಶ್ರೀ, ಜಿ. ಹನುಮಂತರಾಯರು ಹಾಗೂ ಕುವೆಂಪು ಅವರ ಕೊಡುಗೆ ಅಪಾರ. ಇವರು ಪ್ರಸಾರಂಗಕ್ಕೆ ಅಡಿಪಾಯ ಹಾಕುವಲ್ಲಿ ಶ್ರಮಿಸಿದ್ದಾರೆ. ಇವರೆಲ್ಲ ಹಾಕಿಕೊಟ್ಟ ದಾರಿಯಲ್ಲಿ ಪ್ರಸಾರಂಗದ ಕೆಲಸಗಳು ಸಾಗಬೇಕು. ಜೊತೆಗೆ ಜಿ. ಹನುಮಂತರಾಯರ ಸಮಗ್ರ ಸಾಹಿತ್ಯ ಲೇಖನ ಸಂಪುಟವನ್ನು ಪ್ರಕಟಿಸುವ ಕೆಲಸವನ್ನು ಪ್ರಸಾರಂಗ ಮಾಡಬೇಕು ಎಂದು ಹೇಳಿದರು.

Advertisement

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್‌.ಎಂ. ತಳವಾರ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯ ಹಾಗೂ ಪ್ರಸಾರಂಗಕ್ಕೆ ಸುದೀರ್ಘ‌ ಇತಿಹಾಸವಿದೆ. ಪ್ರಸಾರಂಗವು ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮರು ಮುದ್ರಣ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್‌, ಪ್ರಸಾರಂಗದ ಸಹಾಯಕ ನಿರ್ದೇಶಕ ಡಾ.ಬಿ.ಎಸ್‌. ಅನಿಲ ಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪುಸ್ತಕ ಮಾರಾಟಕ್ಕೆ ಶೇ.50 ರಿಯಾಯಿತಿ: ಪ್ರಸಾರಂಗ ಲಾಭದ ಉದ್ದೇಶವನ್ನು ಹೊಂದಿಲ್ಲ. ಬದಲಿಗೆ ಜ್ಞಾನ ಪ್ರಸರಣೆ ಇದರ ಪ್ರಮುಖ ಉದ್ದೇಶವಾಗಿದೆ. ಶೇ.50ರಷ್ಟು ರಿಯಾಯಿತಿ ದರದಲ್ಲಿ ವರ್ಷಕ್ಕೆ 50 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಐಎಸ್‌ಎಸ್‌ಎನ್‌ ಹಾಗೂ ಐಎಸ್‌ಬಿಎನ್‌ ಮಾನ್ಯತೆಗಳು ಪ್ರಸಾರಂಗಕ್ಕೆ ಶೀಘ್ರದಲ್ಲಿಯೇ ಸಿಗಲಿದೆ. ಕಳೆದ ವರ್ಷ ಕುಲಪತಿಗಳು ಇಲ್ಲದ ಕಾರಣ ಪ್ರಸಾರಂಗಕ್ಕೆ ಅನುದಾನ ಬಂದಿರಲಿಲ್ಲ. ಈ ವರ್ಷ ಅನುದಾನ ನೀಡಿದರೆ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಗಲಿದೆ ಎಂದು ಪ್ರಸಾರಂಗ ನಿರ್ದೇಶಕ ಪ್ರೊ.ಎಂ.ಜಿ. ಮಂಜುನಾಥ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next