ದೇವನಹಳ್ಳಿ: ಕೊರೊನಾ ಮೂರನೇ ಅಲೆ ವ್ಯಾಪಿಸುತ್ತಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮ ಕೈಗೊಂಡು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಂಡು ಮೂರನೇ ಅಲೆಯನ್ನು ನಿಯಂತ್ರಿಸಲು ಪ್ರಯತ್ನಿ ಸಬೇಕು ಎಂದು ತಾಪಂ ಆಡಳಿತಾಧಿಕಾರಿ ರಮೇಶ್ ರೆಡ್ಡಿ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ ವತಿಯಿಂದ ಹಮ್ಮಿಕೊಂಡಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ವಿವಿಧ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ
ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ನಿಯಮ ಕಠಿಣವಾಗಿ ಜಾರಿಯಾಗುವಂತೆ ಅಗತ್ಯ ಕ್ರಮ ಅಧಿಕಾರಿಗಳು ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯುವಂತೆ ಆಗಬೇಕು. ಯಾರು ಲಸಿಕೆ ತೆಗೆದುಕೊಂಡಿರುವುದಿಲ್ಲ ಅಂತಹವರಿಗೆ ಲಸಿಕೆ ಹಾಕಿಸಬೇಕು ಎಂದರು.
ಕಾಮಗಾರಿ ಪೂರ್ಣಗೊಳಿಸಿ: ಎಲ್ಲ ಇಲಾಖೆಗಳಿಗೆ ಸರ್ಕಾರದಿಂದ ಬಂದಿರುವ ಎಲ್ಲ ಅನುದಾನಗಳನ್ನು ಫೆಬ್ರವರಿ 15ರ ಒಳಗಾಗಿ ಖರ್ಚು ಮಾಡಬೇಕು. ಸಮರ್ಪಕವಾಗಿ ಅನುದಾನವನ್ನು ಬಳಕೆ ಮಾಡಬೇಕು. ಬಂದಿರುವ ಅನುದಾನ ಸರ್ಕಾರಕ್ಕೆ ವಾಪಸ್ ಹೋಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು. ಯಾವುದೇ ಕಾಮಗಾರಿ ಕುಂಠಿತಗೊಂಡಿದ್ದರೆ ಅಂತಹ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪುವಂತೆ ಆಗಬೇಕು ಎಂದು ಸೂಚನೆ ನೀಡಿದರು.
ಬಿದ್ದ ಮನೆಗೆ ಪರಿಹಾರ: ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್. ಡಿ. ವಸಂತ್ ಕುಮಾರ್ ಮಾತನಾಡಿ, ಗ್ರಾಪಂಗಳಲ್ಲಿ 15ಕ್ಕೂ ಹೆಚ್ಚು ಸದಸ್ಯರಿರುವ ಕಡೆ ಮೂವತ್ತು ಮನೆ, 15ರಿಂದ 24 ಸದಸ್ಯರಿರುವ ಕಡೆಗಳಲ್ಲಿ 40 ಮನೆ, 25ಕ್ಕಿಂತ ಹೆಚ್ಚು ಇರುವ ಸದಸ್ಯರ ಕಡೆ ಮನೆಗಳು ಮಂಜೂರಾಗಿದ್ದು, ಅರ್ಹರನ್ನು ಗುರುತಿಸಿ ಹಂಚಿಕೆ ಮಾಡಬೇಕು. 1,835 ಹೆಕ್ಟೇರ್ ಮಳೆಗೆ ಬೆಳೆ ನಾಶವಾಗಿದ್ದು, ಒಂದು ಕೋಟಿ 24 ಸಾವಿರ ರೂ.ಗಳ ಪರಿಹಾರವನ್ನು ನೀಡಲಾಗಿದೆ. 179 ಮನೆಗಳು ಬಿದ್ದಿದ್ದವು. ಅದಕ್ಕೂ ಸಹ ಪರಿಹಾರವನ್ನು ನೀಡಲಾಗಿದೆ ಎಂದರು.
ಕ್ರಮ ಕೈಗೊಳ್ಳಲಾಗುತ್ತದೆ: ಆರು ಕಡೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆಗಬೇಕು. ನರೇಗಾ ಯೋಜನೆಯಡಿ ಉತ್ತಮ ಕೆಲಸ ಮಾಡಲಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಕಡೆ ಕೊಳವೆಬಾವಿ ಕೊರೆಸಿ ನೀರು ಕೊಡಲಾಗುವುದು. ಖಾಸಗಿ ಬೋರವೆಲ್ ಮೂಲಕ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ತಾಪಂ ಸಹಾಯಕ ನಿರ್ದೇಶಕ ಸುನಿಲ್, ಪ್ರಧಾನಮಂತ್ರಿ ರೋಜ್ ಗಾರ್ ಯೋಜನೆ ಸಹಾಯಕ ನಿರ್ದೇಶಕ ನಾರಾಯಣಪ್ಪ, ಕೃಷಿ ಸಹಾಯಕ ನಿರ್ದೇಶಕಿ ವೀಣಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಾಸಂತಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.