Advertisement

ಪಬ್ಲಿಕ್‌ ಶಾಲೆ ಸಂಖ್ಯೆ ಹೆಚ್ಚಿಸಲು ಮನವಿ ಮಾಡುವೆ: ಮಹೇಶ್‌

10:05 PM Jun 10, 2019 | Lakshmi GovindaRaj |

ಸಂತೆಮರಹಳ್ಳಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ ಆಂಗ್ಲ ಮಾಧ್ಯಮದ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ತೆರೆಯಲಾಗಿದೆ. ಇದಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಈ ಸಂಖ್ಯೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ, ಸಂಬಂಧಪಟ್ಟ ಮಂತ್ರಿಗಳ ಜೊತೆ ಮನವಿ ಮಾಡಲಾಗುವುದು ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ಯಳಂದೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗೆ ಚಾಲನೆ ನೀಡಿ ಮಾತನಾಡಿ, ಈ ಶಾಲೆಗಳಿಗೆ ಕೇವಲ 30 ಮಕ್ಕಳನ್ನು ಸೇರಿಸಿಕೊಳ್ಳಬೇಕೆಂಬ ನಿಯವಿದೆ. ಯಳಂದೂರು ಪಟ್ಟಣ ಸೇರಿದಂತೆ ಅನೇಕ ಕಡೆ ಇದಕ್ಕೆ ಅಭೂತಪೂರ್ವ ಸ್ಪಂದನೆ ದೊರಕಿದೆ ಎಂದರು.

ಹೆಚ್ಚಿನ ಅರ್ಜಿಗಳು ಬಂದಿದ್ದವು. ಹಾಗಾಗಿ ಲಾಟರಿ ಮೂಲಕ ವಿದ್ಯಾರ್ಥಿಗಳ ಆಯ್ಕೆಯಾಗಿದೆ. ಇದನ್ನು ಈ ಬಾರಿ ಸರ್ಕಾರ ಪ್ರಾಯೋಗಿಕವಾಗಿ ನಡೆಸುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಿದ್ದಲ್ಲಿ ಮುಂದಿನ ವರ್ಷದಿಂದ ಮತ್ತೂಂದು ಶಾಲೆಗೆ ಅನುಮತಿ ನೀಡುವಂತೆ ಸಂಬಂಧಪಟ್ಟ ಮಂತ್ರಿಗಳು, ಇಲಾಖೆಗೆ ನಾನು ಮನವಿ ಮಾಡುತ್ತೇನೆ ಎಂದರು.

ಪ್ರಯೋಗಾತ್ಮಕವಾಗಿ ಜಾರಿಗೆ: ರಾಜ್ಯಾದ್ಯಂತ ಈ ವರ್ಷ 1000 ಕರ್ನಾಟಕ ಪಬ್ಲಿಕ್‌ ಶಾಲೆಯ ತರಗತಿಗಳನ್ನು ಆರಂಭಿಸಲಾಗಿದೆ. ಇದರಲ್ಲಿ 176 ಪಬ್ಲಿಕ್‌ ಶಾಲೆಗಳು ಸೇರಿವೆ. ಇಂದು ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಸರ್ಕಾರಿ ಶಾಲೆಯಲ್ಲೂ ಇದೇ ಸೌಲಭ್ಯ ಸಿಕ್ಕರೆ ಮಕ್ಕಳು ಇಲ್ಲಿಗೂ ಆಗಮಿಸುತ್ತಾರೆ. ಸರ್ಕಾರ ಈ ವರ್ಷದಿಂದ ಇದನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತಂದಿದೆ.

ಹಂತ ಹಂತವಾಗಿ ಶಿಕ್ಷಕರ ಆಯ್ಕೆ: ಬಡ ಮಕ್ಕಳಿಗೂ ಉತ್ತಮ ಆಂಗ್ಲ ಮಾಧ್ಯಮದ ಶಿಕ್ಷಣ ದೊರಕಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ರಾಜ್ಯದಲ್ಲಿ 23 ಸಾವಿರ ಶಿಕ್ಷಕರ ಕೊರತೆ ಇದೆ ಕಳೆದ ಬಾರಿ 10 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿತ್ತು. ಇದರಲ್ಲಿ 3900 ಶಿಕ್ಷಕರು ಮಾತ್ರ ಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಯ್ಕೆಯಾಗಿದ್ದರು. ಮುಂದಿನ ದಿನಗಳಲ್ಲಿ ಪಬ್ಲಿಕ್‌ ಶಾಲೆಯೂ ಸೇರಿದಂತೆ ಶಿಕ್ಷಕರ ಆಯ್ಕೆ ಹಂತಹಂತವಾಗಿ ನಡೆಯಲಿದೆ ಎಂದರು.

Advertisement

ಜಿಪಂ ಸದಸ್ಯ ಜೆ. ಯೋಗೇಶ್‌ ಮಾತನಾಡಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ತೆರೆದಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ತೆರೆದಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಬಡ ಮಕ್ಕಳಿಗೂ ಶಿಕ್ಷಣ ಸಿಗುವಲ್ಲಿ ಇದರ ಸಂಖ್ಯೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಶಾಸಕರು ಸಂಬಂಧಪಟ್ಟ ಇಲಾಖೆಯ ಜೊತೆ ಸಂಪರ್ಕಿಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪಪಂ ಸದಸ್ಯ ಮಹಾದೇವನಾಯಕ, ತಹಶೀಲ್ದಾರ್‌ ವರ್ಷಾ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ತಿರುಮಲಾಚಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next