Advertisement

ಪಬ್ಲಿಕ್ ಪ್ರಾವಿಡೆಂಟ್ ಫಂಡ್: ದುಡಿಯುವ ವರ್ಗಕ್ಕೊಂದು ವರದಾನ

12:09 PM Oct 29, 2018 | Team Udayavani |

ಜನಸಾಮಾನ್ಯರು ತಾವು ಕಷ್ಟಪಟ್ಟು  ಸಂಪಾದಿಸಿ ಉಳಿಸುವ ಹಣವನ್ನು  ದೀರ್ಘಾವಧಿಗೆ ಹೂಡಿಕೆ ಮಾಡಿ ಗರಿಷ್ಠ ಲಾಭ ಪಡೆಯುವಂತಾಗಲು ಸರಕಾರವೇ ರೂಪಿಸಿರುವ ಸುಭದ್ರ ಮತ್ತು ಆಕರ್ಷಕ ಯೋಜನೆಗಳು ಕೆಲವಿವೆ. ಅವುಗಳಲ್ಲಿ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಂದು.

Advertisement

ಟಾಪ್ ಟೆನ್ ಹೂಡಿಕೆ ಅವಕಾಶಗಳಲ್ಲಿ  ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಅತ್ಯಾಕರ್ಷಕವಾಗಿದ್ದು ಇದು ಮಧ್ಯಮ ವರ್ಗದ, ತಿಂಗಳ ಸಂಬಳದ ಆದಾಯ ಹೊಂದಿರುವ ನೌಕರ ವರ್ಗಕ್ಕೆ ದೊಡ್ಡ ವರದಾನದ ರೂಪದಲ್ಲಿ ಸರಕಾರ ರೂಪಿಸಿರುವ 15 ವರ್ಷಗಳ ದೀರ್ಘಾವಧಿಯ ಯೋಜನೆಯಾಗಿದೆ ಎನ್ನುವುದು ಗಮನಾರ್ಹ. 

ಈ ಯೋಜನೆಯ ವಿಶೇಷತೆ ಎಂದರೆ ಇದರಲ್ಲಿ ಹೂಡಲ್ಪಡುವ ಹಣದ ಮೇಲಿನ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ. ಯೋಜನೆಯಡಿ ಸಾಗುತ್ತಾ ವರ್ಷಗಳು ಉರುಳಿದಂತೆ ಬಡ್ಡಿ ಆದಾಯ ಅಸಲಿನೊಡನೆ ಸೇರಿಕೊಂಡು ದೊಡ್ಡ ಮೊತ್ತಕ್ಕೆ ಬೆಳೆಯುವ ಪರಿ ಅನನ್ಯವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಯಲ್ಲಿ  ಜನ ಸಾಮಾನ್ಯರು, ಉದ್ಯೋಗ ವರ್ಗದವರು ಹೂಡುವ ಅಸಲು ಮತ್ತು ಬಡ್ಡಿಗೆ ಸರಕಾರದ ಭದ್ರತೆ ಇದೆ. ಇದನ್ನೇ ಸಾವರೀನ್ ಗ್ಯಾರಂಟಿ ಎಂದು ಹೇಳುವುದು. ಹಾಗಾಗಿ ಈ ಯೋಜನೆಯು ಆಕರ್ಷಕ, ಸುಭದ್ರ ಮತ್ತು ಹೂಡಿಕೆದಾರನಿಗೆ ನಿಶ್ಚಿಂತೆಯದ್ದಾಗಿದೆ. 

ಅಂದ ಹಾಗೆ ಗಮನಾರ್ಹ ಸಂಗತಿ ಎಂದರೆ ಕೇಂದ್ರ ಸರಕಾರದ ಹಣಕಾಸು ಸಚಿವಾಲಯವು ಪ್ರತೀ ತ್ರೈ ಮಾಸಿಕದಲ್ಲಿ ಪಿಪಿಎಫ್ ಮೇಲಿನ ಬಡ್ಡಿ ದರವನ್ನು ಪ್ರಕಟಿಸುತ್ತದೆ. 2018ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವಂತೆ ಪಿಪಿಎಫ್ ಮೇಲಿನ ಬಡ್ಡಿ ದರ ಈಗ ಶೇ.8.00 ಇದೆ. ಇದು ವಾರ್ಷಿಕ ನೆಲೆಯಲ್ಲಿ ಚಕ್ರಬಡ್ಡಿಯ ಇಳುವರಿಯನ್ನು ನೀಡುತ್ತದೆ. ಪ್ರತೀ ವರ್ಷ ಮಾರ್ಚ್ 31ರಂದು ಪಿಪಿಎಫ್ ಬಡ್ಡಿ ಹಣ ಪಾವತಿಯಾಗುತ್ತದೆ. 

Advertisement

ಜನಸಾಮಾನ್ಯರು ತಿಳಿದಿರುವಂತೆ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯನ್ನು ಕೇವಲ ಪೋಸ್ಟ್ ಆಫೀಸುಗಳಲ್ಲಿ ಮಾತ್ರವೇ ತೆರೆಯಬಹುದಾಗಿರುತ್ತದೆ. ಆದರೆ ವಾಸ್ತವದಲ್ಲಿ ಅದು ಹಾಗೇನೂ ಇಲ್ಲ. ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರವಲ್ಲದೆ ಇನ್ನೂ ಹಲವು ಬ್ಯಾಂಕುಗಳಲ್ಲಿ ಪಿಪಿಎಫ್ ಖಾತೆ ತೆರೆಯುವುದಕ್ಕೆ ಅವಕಾಶ ಇರುತ್ತದೆ.  

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ  ಪಿಪಿಎಫ್ ಖಾತೆದಾರರಿಗೆ ಅತ್ಯಾಕರ್ಷಕ ಬಡ್ಡಿ ಇದೆ. ಪ್ರಕೃತ ಅದು ವಾರ್ಷಿಕ ಶೇ.8.7ರ ಪ್ರಮಾಣದಲ್ಲಿದೆ. ಬಡ್ಡಿ ಆದಾಯವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುವುದರಿಂದ ಮತ್ತು ಇದು ಅಸಲಿನೊಡನೆ ಸೇರಿಕೊಳ್ಳುವುದರಿಂದ ಯೋಜನೆಯ 15 ವರ್ಷಗಳ ಅವಧಿಯಲ್ಲಿ ಇದು ಗಮನಾರ್ಹ ಮೊತ್ತಕ್ಕೆ ಬೆಳೆದಿರುತ್ತದೆ. 

SBI ಹಾಗೆ ಐಸಿಐಸಿ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮೊದಲಾದ ಬ್ಯಾಂಕುಗಳು ಪಿಪಿಎಫ್ ಗೆ ಆಕರ್ಷಕ ಬಡ್ಡಿ ನೀಡುತ್ತವೆ. 

ಪಿಪಿಎಫ್ ಯೋಜನೆಯ ಅವಧಿ 15 ವರ್ಷಗಳದ್ದಾಗಿರುತ್ತದೆ. ಆದರೆ ಹೂಡಿದ ಹಣ ಮೂರು ವರ್ಷ ಕಳೆದ ಬಳಿಕದಲ್ಲಿ ಆಂಶಿಕ ಮೊತ್ತ ಹಿಂಪಡೆತಕ್ಕೆ ಅವಕಾಶ ಇರುತ್ತದೆ. ವರ್ಷವೊಂದರಲ್ಲಿ 12 ಕಂತುಗಳಲ್ಲಿ ಈ ಯೋಜನೆಯಲ್ಲಿ ಹಣ ಹೂಡಬಹುದಾಗಿರುತ್ತದೆ. ವರ್ಷವೊಂದರಲ್ಲಿ ಕಡ್ಡಾಯವಾಗಿ ಕನಿಷ್ಠ 500 ರೂ. ಹೂಡಲೇ ಬೇಕಾಗಿರುತ್ತದೆ – ಖಾತೆಯನ್ನು ಚಾಲ್ತಿಯಲ್ಲಿಡಲು. 

ತಿಂಗಳ ಸಂಬಳದ ಉದ್ಯೋಗಿ ವರ್ಗದವರಿಗೆ ಈ ಯೋಜನೆಯಡಿ ವರ್ಷಕ್ಕೆ 1.50 ಲಕ್ಷ ರೂ. ವರೆಗಿನ ಹೂಡಿಕೆಗೆ ಸೆ.80ಸಿ ತೆರಿಗೆ ವಿನಾಯಿತಿ ಇರುತ್ತದೆ. 

ಪಿಪಿಎಫ್ ಖಾತೆಯಲ್ಲಿ ಹಣಕಾಸು ವರ್ಷವೊಂದರಲ್ಲಿ ಖಾತೆದಾರರು ಹೂಡಬಹುದಾದ ಗರಿಷ್ಠ ಮೊತ್ತ 1.50 ಲಕ್ಷ ರೂ ಆಗಿರುತ್ತದೆ. ಈ ಮಿತಿಯನ್ನು ಮೀರಿ ಹೂಡುವ ಹಣಕ್ಕೆ ಬಡ್ಡಿಯೂ ಸಿಗುವುದಿಲ್ಲ; ತೆರಿಗೆ ವಿನಾಯಿತಿಯೂ ಸಿಗುವುದಿಲ್ಲ ಎನ್ನುವುದನ್ನು ಅವಶ್ಯವಾಗಿ ತಿಳಿದಿರಬೇಕು.  

ಈ ಹಿನ್ನೆಲೆಯಲ್ಲಿ ನೋಡಿದಾಗ ಪಿಪಿಎಫ್ ಗಿಂತ ಇಎಲ್ಎಸ್ಎಸ್ (ಈಕ್ಟಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್) ಹೆಚ್ಚು ಆಕರ್ಷಕವೂ ಅನುಕೂಲಕರವೂ ಆಗಿರುವುದನ್ನು ನಾವು ಗಮನಿಸಬಹುದು. ಏಕೆಂದರೆ ಈಕ್ಟಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಹೂಡಿಕೆದಾರ ಹಣಕಾಸು ವರ್ಷವೊಂದರಲ್ಲಿ ಹೂಡಬಹುದಾದ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ.

1.50 ಲಕ್ಷ ರೂ.ವರೆಗಿನ ಹೂಡಿಕೆಗೆ ಮಾತ್ರವೇ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುವುದು ನಿಜವೇ ಆದರೂ ಇದನ್ನು ಮೀರುವ ಮೊತ್ತದ ಹೂಡಿಕೆಯು ಪಡೆಯುವ ಇಳುವರಿಗೆ ಯಾವುದೇ ಚ್ಯುತಿ ಇರುವುದಿಲ್ಲ. ಹಾಗಿದ್ದರೂ ಶಾರ್ಟ್ ಟರ್ಮ್ (ಶೇ.15) ಮತ್ತು ಲಾಂಗ್ ಟರ್ಮ್ (ಶೇ.10) ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಇರುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ !

ಬ್ಯಾಂಕ್ ನಿರಖು ಠೇವಣಿ (ಎಫ್ ಡಿ)

ಟಾಪ್ ಟೆನ್ ಹೂಡಿಕೆ ಅವಕಾಶಗಳಲ್ಲಿ ಐದನೇ ಕ್ರಮಾಂಕದಲ್ಲಿ ನಾವು ಪಿಪಿಎಫ್ ಯೋಜನೆಯನ್ನು ತಿಳಿದುಕೊಂಡೆವು; ಈಗ ಆರನೇ ಕ್ರಮಾಂಕದಲ್ಲಿ ಬ್ಯಾಂಕ್ ಎಫ್ ಡಿ ಯನ್ನು ನಾವು ಗುರುತಿಸಬಹುದು. 

ಬ್ಯಾಂಕ್ ಎಫ್ ಡಿ ಬಡ್ಡಿದರಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀತಿಗೆ ತಕ್ಕಂತೆ ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ ಎನ್ನುವುದು ಗಮನಾರ್ಹ. ಹಣದುಬ್ಬರ ಏರಿದರೆ ಅದನ್ನು ನಿಯಂತ್ರಿಸಲು ಆರ್ಬಿಐ ರಿಪೋ ಮತ್ತು ರಿವಸ್ ರಿಪೋ ದರಗಳನ್ನು ಏರಿಸುತ್ತಿದೆ.

ರಿಪೋ ದರ ಎಂದರೆ ಬ್ಯಾಂಕುಗಳು ಆರ್ಬಿಐ ನಿಯಮದ ಪ್ರಕಾರ ಕಡ್ಡಾಯವಾಗಿ ಆರ್ಬಿಐ ನಲ್ಲಿ ಇರಿಸಬೇಕಾದ ಠೇವಣಿಯ ಮೇಲೆ ಕೊಡಲ್ಪಡುವ ಬಡ್ಡಿ ದರ. ರಿವರ್ಸ್ ರಿಪೋ ಎಂದರೆ ಬ್ಯಾಂಕುಗಳು ಆರ್ಬಿಐ ನಿಂದ ಪಡೆಯುವ ಸಾಲ ಮೊತ್ತದ ಮೇಲೆ ಪಾವತಿಸಬೇಕಿರುವ ಬಡ್ಡಿ ದರ. 

ಹಣದುಬ್ಬರ ನಿಯಂತ್ರಿಸಲು ಆರ್ಬಿಐ ರಿಪೋ ದರ ಏರಿಸಿದರೆ ಬ್ಯಾಂಕ್ ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿದರಗಳೂ ಏರುತ್ತವೆ. ಜನರ ಕೈಯಲ್ಲಿನ ನಗದು ಪ್ರಮಾಣದ ಹರಿವನ್ನು ತಡೆದು ಉಳಿತಾಯ ಪ್ರೇರೆಪಿಸಲು ಆರ್ಬಿಐ ಕೈಗೊಳ್ಳುವ ಈ ಕ್ರಮದಿಂದ ಬ್ಯಾಂಕ್ ಠೇವಣಿ ದರಗಳು ಏರುವುದು ಅರ್ಥ ವ್ಯವಸ್ಥೆಯಲ್ಲಿನ ಕಸರತ್ತಾಗಿದೆ. 


 

Advertisement

Udayavani is now on Telegram. Click here to join our channel and stay updated with the latest news.

Next