ಉಪ್ಪುಂದ: ನಾಗೂರು ರಾ.ಹೆದ್ದಾರಿ 66ರ ಆಂಜನೇಯ ದೇವಸ್ಥಾನದ ಎದುರು ಇರುವ ಯು ಟರ್ನ್ ಬಂದ್ ಮಾಡಲು ಸ್ಥಳೀಯ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಚತುಷ್ಪಥ ಕಾಮಗಾರಿ ಕಂಪನಿ ಅಧಿಕಾರಿಗಳು ಗುರುವಾರ ಬೆಳಗ್ಗೆ ಸಿಬಂದಿಗಳೊಂದಿಗೆ ಆಂಜನೇಯ ದೇವಸ್ಥಾನದ ಎದುರು ಚತುಷ್ಪಥ ರಸ್ತೆ ಕಾಮಗಾರಿ ಸಂದರ್ಭ ಯು ಟರ್ನ್ ಬಿಟ್ಟಿರುವುದರಿಂದ ಅದನ್ನು ಮುಚ್ಚಲು ಸಲಕರಣಗಳ ಸಮೇತ ಸ್ಥಳಕ್ಕೆ ಆಗಮಿಸಿದರು. ಇದನ್ನು ತಿಳಿದ ಸ್ಥಳೀಯರು ಕಾಮಗಾರಿ ಪ್ರದೇಶದಲ್ಲಿ ಜಮಾಯಿಸಿ ಇದನ್ನು ಬಂದ್ ಮಾಡುವುದರಿಂದ ಸಾರ್ವಜನಕರಿಗೆ, ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತದೆ. ಆದರಿಂದ ಇದನ್ನು ಮುಚ್ಚಲು ಅವಕಾಶ ನೀಡುವುದಿಲ್ಲ ಎಂದರು.
ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸ್ ಮಹಾಬಲ ಹಾಗೂ ಐಆರ್‌ಬಿ ಆಧಿಕಾರಿಗಳು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಈಗಾಗಲೇ ಮಸೀದಿ ಬಳಿ ಯು ಟರ್ನ್ ಇರುವುದರಿಂದ ಇಲ್ಲಿ ಇದನ್ನು ಹಾಗೇ ಬಿಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಯು ಟರ್ನ್ ಬಂದ್ ಮಾಡಬೇಕಾದ ಅನಿವಾರ್ಯತೆಯ ಕುರಿತು ಸ್ಥಳೀಯರಿಗೆ ಮನದಟ್ಟು ಮಾಡಿದರು.
ಸಾರ್ವಜನಿಕರ ಸಮಸ್ಯೆಗೆ ಪರಿಹಾರಕ್ಕಾಗಿ ಪರ್ಯಾಯವಾಗಿ ನಾಗೂರು ಮಸೀದಿ ಬಳಿಯಿಂದ ದೇವಸ್ಥಾನದ ವರೆಗೆ ಸರ್ವಿಸ್ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದಾಗ ಹೊಸದಾಗಿ ಸರ್ವಿಸ್ ರಸ್ತೆ ನಿರ್ಮಿಸಲು ಅವಕಾಶ ಇಲ್ಲ ಎಂದರು.
ಪೊಲೀಸ್ ಅಧಿಕಾರಿ ಮಹಾಬಲ ಅವರು ಮಸೀದಿ ಸಮೀಪ ಸಂಚಾರಕ್ಕೆ ಅನುಕೂಲವಾಗುವಂತೆ ಮಣ್ಣನ್ನು ಸಮತಟ್ಟುಗೊಳಿಸಿ ಸಾರ್ವಜನಿಕರು ನಿತ್ಯ ಓಡಾಡಟಕ್ಕೆ ಅನುಕೂಲ ಮಾಡಿಕೊಡಲು ಸಹಕರಿಸುವಂತೆ ತಿಳಿಸಿದ್ದಾರೆ. ಇದಕ್ಕೆ ಐಆರ್‌ಬಿ ಅಧಿಕಾರಿಗಳೂ ಒಪ್ಪಿಗೆ ಸೂಚಿಸಿದರು.