ಬಾಗಲಕೋಟೆ: ಇಲ್ಲಿನ ವಿದ್ಯಾಗಿರಿಯ ಆಸ್ಪತ್ರೆಯ ಪಕ್ಕದಲ್ಲಿ ನಿತ್ಯವೂ ಸಾರ್ವಜನಿಕ ಸಂತೆ ನಡೆಯುತ್ತಿದ್ದು, ಜನರು ನಿತ್ಯವೂ ಹೆದರುತ್ತಲೇ ಸಂತೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
ವಿದ್ಯಾಗಿರಿಯ ಪಕ್ವಾನ್ ಹೊಟೇಲ್‌ದಿಂದ ಮಹಾರಾಜ ಗಾರ್ಡನ್ ಹೊಟೇಲ್ ಕ್ರಾಸ್ ವರೆಗೆ ನಿತ್ಯವೂ ಹಣ್ಣು, ತರಕಾರಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯೇ ಬೃಹತ್ ಖಾಸಗಿ ಆಸ್ಪತ್ರೆಯೊಂದಿದ್ದು, ನಿತ್ಯವೂ ನೂರಾರು ರೋಗಿಗಳು ಇಲ್ಲಿಗೆ ಬರುತ್ತಾರೆ. ಅದೇ ರಸ್ತೆಯಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಲಾಗುತ್ತಿದ್ದು, ಜನರು ಭೀತಿಯೊಂದಿಗೆ ಸಂತೆಗೆಬರುತ್ತಿದ್ದಾರೆ.
ಏಕಾಏಕಿ ಬದಲಾವಣೆ: ಪಕ್ವಾನ್ ಹೊಟೇಲ್‌ದಿಂದ ಮಹಾರಾಜ ಗಾರ್ಡನ್ ಕ್ರಾಸ್ ವರೆಗೆ ಮೊದಲು ಸಂತೆ ನಡೆಯುತ್ತಿರಲಿಲ್ಲ. ಹಲವು ವರ್ಷಗಳಿಂದ ವಿದ್ಯಾಗಿರಿ ವೃತ್ತದಿಂದ ಸಿಬಿಎಸ್‌ಸಿ ಶಾಲೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಸಂತೆ ನಡೆಯುತ್ತಿತ್ತು. ಆದರೆ, ಕಳೆದ ಜೂನ್‌ನಲ್ಲಿ ವಿದ್ಯಾಗಿರಿಯ 8ನೇ ಕ್ರಾಸ್‌ನಲ್ಲಿ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿಂದ ಪಕ್ವಾನ್ ಹೊಟೇಲ್ ರಸ್ತೆಗೆ ಸಂತೆ ಸ್ಥಳಾಂತರಿಸಲಾಗಿದೆ.
ಸದ್ಯ ವಿದ್ಯಾಗಿರಿ, ಕಂಟೇನ್ಮೆಂಟ್ ಪ್ರದೇಶಗಳಿಂದ ಮುಕ್ತಿಯಾಗಿದ್ದರೂ ಪುನಃ ಮೊದಲು ನಡೆಯುತ್ತಿದ್ದ ಸ್ಥಳಕ್ಕೆ ಸಂತೆ ಸ್ಥಳಾಂತರಿಸಿಲ್ಲ. ಇದು ನಿತ್ಯ ವಿವಿಧ ತರಕಾರಿ, ಹಣ್ಣು ಖರೀದಿಗೆ ಬರುವ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ನವನಗರದ ಸಂತೆ ಆರಂಭಿಸಿ: ಸದ್ಯವಿದ್ಯಾಗಿರಿ ಭಾಗದಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಂತೆ ಸ್ಥಳದಲ್ಲಿ ಖಾಸಗಿ ಆಸ್ಪತ್ರೆ ಇದೆ. ಜತೆಗೆ ಪ್ರತಿಷ್ಠಿತ ಸಂಸ್ಥೆಯೊಂದರ ಹಲವು ವಸತಿ ಸಮುಚ್ಛಯವೂ ಇಲ್ಲಿವೆ. ಆಸ್ಪತ್ರೆಗೆ ನಿತ್ಯ ನೂರಾರು ಜನ ರೋಗಿಗಳು ಬರುತ್ತಾರೆ. ಅದೇ ಆಸ್ಪತ್ರೆ ಎದುರು ಸಂತೆ ನಡೆಯುತ್ತಿರುವುದರಿಂದ ವ್ಯಾಪಾರಸ್ಥರಿಗೂ, ಜನರು ಭೀತಿಯಲ್ಲೇ ತರಕಾರಿ ಖರೀದಿ ಮಾಡಿಕೊಂಡು ಹೋಗುವ ಪರಿಸ್ಥಿತಿ ಇದೆ.
ಸದ್ಯ ಕೋವಿಡ್ ಹಿನ್ನೆಲೆಯಲ್ಲೂ ವ್ಯಾಪಾರ-ವಹಿವಾಟು ಎಲ್ಲೆಡೆ ನಡೆಯುತ್ತಿದ್ದು, ನವನಗರದ ಸೆಕ್ಟರ್ ನಂ.4ರಲ್ಲಿ ನಡೆಯುತ್ತಿದ್ದ ರವಿವಾರದ ಸಂತೆಯನ್ನು ಪ್ರತಿದಿನ ಬೆಳಗ್ಗೆ ನಡೆಸಬಹುದು. ನವಗರದ ಸೆಕ್ಟರ್ ನಂ.4ರಲ್ಲಿ ಸಂತೆಗಾಗಿಯೇ ಪ್ರತ್ಯೇಕ ಸಂತೆ ಕಟ್ಟೆ ಇದೆ. ಅಲ್ಲದೇ ವಿಶಾಲವಾದ ಜಾಗೆಯೂ ಇದೆ. ಇಲ್ಲಿ ಸಾಮಾಜಿಕ ಅಂತರದೊಂದಿಗೆ ತರಕಾರಿ, ಹಣ್ಣು ಮಾರಾಟದ ಸಂತೆ ನಡೆಸಲು ಅವಕಾಶವಿದೆ. ವಿದ್ಯಾಗಿರಿಯ ಆಸ್ಪತ್ರೆ ಸುತ್ತ ನಡೆಯುತ್ತಿರುವ ಸಂತೆಯನ್ನು ಕೂಡಲೇ ಬೇರೆಡೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.