Advertisement

ಹಾಜರಿ ಪುಸ್ತಕವನ್ನೇ ಮನೆಗೊಯ್ದ ಗ್ರಂಥಪಾಲಕ!

11:50 AM Feb 10, 2018 | Team Udayavani |

ಬಡಗನ್ನೂರು: ನಾಲ್ಕು ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವ ಗ್ರಂಥಪಾಲಕ
ಕೊನೆಗೆ ಹಾಜರಿ ಪುಸ್ತಕವನ್ನೇ ಮನೆಗೆ ಹೊತ್ತೂಯ್ದಿರುವ ವಿಶೇಷ ಘಟನೆ ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬಡಗನ್ನೂರು ಗ್ರಾ.ಪಂ. ಪಕ್ಕದಲ್ಲಿ ಸಾರ್ವಜನಿಕ ಗ್ರಂಥಾಲಯ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ 4 ತಿಂಗಳುಗಳಿಂದ ಗ್ರಂಥಾಲಯ ಸವಲತ್ತು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಗ್ರಂಥಪಾಲಕ ನವೀನ್‌ ಕುಮಾರ್‌ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ಕಾರಣ ಹಲವು ದಿನಗಳಿಂದ ಗ್ರಂಥಾಲಯ ಬಾಗಿಲು ತೆರೆಯುತ್ತಿಲ್ಲ.

ಹಾಜರಿ ಪುಸ್ತಕ ಮನೆಗೆ
ಎರಡು ತಿಂಗಳಿಂದ ಗ್ರಂಥಾಲಯದ ಕಡೆಗೆ ತಲೆ ಹಾಕದ ಗ್ರಂಥಪಾಲಕ ಅನಾರೋಗ್ಯದ ಕಾರಣ ತೋರಿ ಜ. 1ರಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಾಲ್ಕು ದಿನಗಳ ವರೆಗೆ ಮಾತ್ರ ಕರ್ತವ್ಯ ನಿರ್ವಹಿಸಿ ಈಗ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಜತೆಗೆ ಹಾಜರಿ ಪುಸ್ತಕವನ್ನೂ ಹೊತ್ತೂಯ್ದಿದ್ದಾರೆ.

ಗ್ರಂಥಪಾಲಕ ಗ್ರಂಥಾಲಯಕ್ಕೆ ಬಾರದೇ ಸಾರ್ವಜನಿಕ ವ್ಯವಸ್ಥೆ ನಿರುಪಯುಕ್ತವಾಗುತ್ತಿದೆ. ಗ್ರಂಥಾಲಯದಲ್ಲಿನ ಪುಸ್ತಕಗಳೂ ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿವೆ. ಜ್ಞಾನದ ದೃಷ್ಟಿಯಿಂದ ಗ್ರಂಥಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಗ್ರಂಥ ಪಾಲಕರಿಗೆ ವೇತನವನ್ನು ಇಲಾಖೆಯಿಂದಲೇ ಪಾವತಿಸಲಾಗುತ್ತದೆ. ಹಾಜರಾತಿ ಪುಸ್ತಕ ಗ್ರಾ.ಪಂ.ನಲ್ಲಿದ್ದು, ಅಲ್ಲಿಗೆ ಬಂದು ಹಾಜರಾತಿ ಹಾಕುವುದು ಮತ್ತು ಈ ಕುರಿತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೃಢೀಕರಿಸುವುದು ಅಗತ್ಯ. ಆದರೆ ಇಲ್ಲಿನ ಗ್ರಂಥಪಾಲಕ ಹಾಜರಾತಿ ಪುಸ್ತಕವನ್ನೇ ಮನೆಗೆ ಒಯ್ದಿರುವ ಕಾರಣ ಈ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ

ವೇತನಕ್ಕೆ ತಡೆ
ಗ್ರಂಥಪಾಲಕ ಸರಿಯಾಗಿ ಕರ್ತವ್ಯ ನಿರ್ವಹಿಸದ ಕುರಿತು ಗ್ರಾ.ಪಂ.ನ ನಿರ್ಣಯ ಹಾಗೂ ದೂರು ಬಂದಿದೆ. ಈ ಕಾರಣದಿಂದ ಸಿಬಂದಿಗೆ ವೇತನವನ್ನೂ ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಮುಂದಿನ ವಾರದ ಗ್ರಂಥಾಲಯಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದೇವೆ.
– ಸವಿತಾ
ಮುಖ್ಯ ಗ್ರಂಥಪಾಲಕರು, ಮಂಗಳೂರು

Advertisement

ನಿರ್ಣಯಿಸಿ ಕಳುಹಿಸಿದ್ದೇವೆ
ಗ್ರಂಥಪಾಲಕ ಸತತವಾಗಿ ಗೈರು ಹಾಜರಾಗುತ್ತಿರುವುದು ಮತ್ತು ಇದರಿಂದ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಜಿ.ಪಂ.ಗೆ ಕಳುಹಿಸಲಾಗಿದೆ. ಆದರೆ ಈವರೆಗೆ ಯಾವುದೇ ಕ್ರಮವನ್ನು ಗ್ರಂಥಾಲಯ ಇಲಾಖೆ ಕಡೆಯಿಂದ ಕೈಗೊಂಡಿಲ್ಲ.
ಕೇಶವ ಗೌಡ ಕನ್ನಾಯ
ಅಧ್ಯಕ್ಷರು, ಗ್ರಾ.ಪಂ. ಬಡಗನ್ನೂರು

ದಿನೇಶ್‌ ಬಡಗನ್ನೂರು

Advertisement

Udayavani is now on Telegram. Click here to join our channel and stay updated with the latest news.

Next