ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಶುಕ್ರವಾರ ಅಖಾಡಕ್ಕಿಳಿಯಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಬಿಜೆಪಿ ಮೂಲಗಳ ಪ್ರಕಾರ, 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸುವ ಅಭ್ಯರ್ಥಿಗಳ ಆಯ್ಕೆಗಾಗಿ ಸಾರ್ವಜನಿಕರ ಪ್ರತಿಕ್ರಿಯೆ, ಆಂತರಿಕ ಮೌಲ್ಯಮಾಪನ, ಉನ್ನತಮಟ್ಟದ ಚರ್ಚೆ ಸೇರಿದಂತೆ ಬಹುವಿಧದ ಸೂತ್ರವನ್ನು ಬಳಸಿಕೊಂಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಪರೀಕ್ಷೆ ಬರೆಯಲು ಸಿಗದ ಅವಕಾಶ… ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ನಿಟ್ಟಿನಲ್ಲಿ ಗುರುವಾರ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಿರಿಯ ಮುಖಂಡರು ಸುದೀರ್ಘ ನಾಲ್ಕು ಗಂಟೆಗಳ ಕಾಲ 543 ಲೋಕಸಭಾ ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಿ, ಸುಮಾರು 100 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿರುವುದಾಗಿ ವರದಿ ವಿವರಿಸಿದೆ.
ಅಭ್ಯರ್ಥಿಗಳ ಆಯ್ಕೆಗಾಗಿ ಗ್ರೌಂಡ್ ರಿಪೋರ್ಟ್:
ಅಭ್ಯರ್ಥಿಗಳ ಆಯ್ಕೆಗಾಗಿ ಭಾರತೀಯ ಜನತಾ ಪಕ್ಷ ತಳಮಟ್ಟದಿಂದ ಮಾಹಿತಿ ಸಂಗ್ರಹಿಸಲು ನಮೋ App ತಂತ್ರಜ್ಞಾನದ ಮೊರೆ ಹೋಗಿದೆ. ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಮೋ App ವೇದಿಕೆಯನ್ನು ಒದಗಿಸಿಕೊಟ್ಟಿದೆ. ಪ್ರತಿ ಕ್ಷೇತ್ರದಲ್ಲೂ ಮೂರು ಜನಪ್ರಿಯ ನಾಯಕರ ಕುರಿತು ಬಿಜೆಪಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಪಕ್ಷದ ಪ್ರಕಾರ ಈ ತಳಮಟ್ಟದ ವಿಧಾನವು ಸ್ಥಳೀಯ ಜನರ ಭಾವನೆ ಮತ್ತು ಬೇಡಿಕೆಗಳ ಈಡೇರಿಕೆಯ ಕುರಿತು ವಿವರ ಸಂಗ್ರಹಿಸಿರುವುದಾಗಿ ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷ ನಿರಂತರವಾಗಿ ತನ್ನ ಸಂಸದರ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದು, ಅವರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತಿರುವುದಾಗಿ ವರದಿ ವಿವರಿಸಿದೆ. ಅಭ್ಯರ್ಥಿಗಳ ಆಯ್ಕೆಯ ನಿರ್ಧಾರ ತೆಗೆದುಕೊಳ್ಳಲು ಪ್ರತೀ ಸಂಸತ್ ಕ್ಷೇತ್ರದ ಸಮಗ್ರ ಮಾಹಿತಿ ಸಂಗ್ರಹಕ್ಕಾಗಿ ಬಿಜೆಪಿ ಸಮೀಕ್ಷಾ ಏಜೆನ್ಸಿಗಳ ನೆರವು ಪಡೆದಿದೆ.
ಈ ಬಾರಿಯ ಚುನಾವಣೆಯಲ್ಲೂ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಕ್ಕೆ ಸೇರಿದ ಹಲವು ಸಂಸದರು ಮತ್ತೆ ಸ್ಪರ್ಧಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ತಿಳಿಸಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಒಬಿಸಿಯ 85 ಶಾಸಕರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.