ಯಾದಗಿರಿ: ಸಾರ್ವಜನಿಕರ ಸಹಕಾರ ಇಲ್ಲವಾದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ಸಫಲತೆ ಸಾಧ್ಯವಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್19 ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆವಿವರವಾದ ಮಾಹಿತಿ ಪಡೆದು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜೂನ್ 18ರಂದು ನಡೆಯುವ ಪಿಯುಸಿ ಮತ್ತು ಜೂನ್ 25ರಿಂದ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿನ ಖುರ್ಚಿ, ಟೇಬಲ್ ಸೇರಿದಂತೆ ಎಲ್ಲ ವಸ್ತುಗಳು ಸ್ಯಾನಿಟೈಸ್ ಮಾಡಬೇಕು. ಶೌಚಾಲಯ, ವಿದ್ಯುತ್ ವ್ಯವಸ್ಥೆ ಇರಬೇಕು. ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೂ ಮಾಸ್ಕ್ ವಿತರಿಸಬೇಕು. ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಪ್ರತಿನಿತ್ಯ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಬೇಕು. ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿರುವ ವಲಸಿಗರಿಗೆ ಆಹಾರ ಪೂರೈಕೆಯಲ್ಲಿ ಲೋಪ ಕಂಡುಬರಬಾರದು. ಅದೇ ರೀತಿ ಗೃಹ ದಿಗ್ಬಂಧನದಲ್ಲಿರುವ ಜನರ ಮೇಲೆ ಇನ್ನೂ ಹೆಚ್ಚಿನ ನಿಗಾವಹಿಸಬೇಕು. ಇದಕ್ಕಾಗಿಗ್ರಾಮ ಮಟ್ಟದಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್ ಸಕ್ರಿಯಗೊಳಿಸಿ ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡು ಕ್ರಮಗಳ ಕುರಿತು ವಿವರಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್. ಸೋಮನಾಳ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವಿಶೇಷ ಅಧಿಕಾರಿ ಡಾ| ಶಂಕರಗೌಡ ಐರೆಡ್ಡಿ ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇದ್ದರು.