Advertisement

ಮಲೇರಿಯಾ ಮುಕ್ತಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ

02:25 PM Jun 21, 2019 | Suhan S |

ರಾಮನಗರ: ಭಾರತವನ್ನು ಮಲೇರಿಯಾ ಮುಕ್ತ ಮಾಡಬೇಕು ಎಂಬ ಸರ್ಕಾರಗಳ ಉದ್ದೇಶ ಸಾರ್ಥಕವಾಗಬೇಕಾದರೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ತಾಲೂಕಿನ ನಂಜಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರೇಣುಕಾ ಪ್ರಸಾದ್‌ ತಿಳಿಸಿದರು.

Advertisement

ತಾಲೂಕಿನ ಕೈಲಾಂಚ ಹೋಬಳಿಯ ನಂಜಾಪುರ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಪ್ರೌಢಶಾಲೆಗಳ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಮಲೇರಿಯಾ ಮಾಸಾಚರಣೆ 2019ರಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಲೇರಿಯಾ ನಿಯಂತ್ರಣಕ್ಕೆ ಕ್ರಮ: ಮಲೇರಿಯಾ ಒಂದು ಸಾಂಕ್ರಾಮಿಕ ರೋಗ. ಸೊಳ್ಳೆಗಳಿಂದ ಇದು ಹರಡುತ್ತದೆ. ಮಲೇರಿಯಾ ರೋಗ ನಿಯಂತ್ರಣಕ್ಕೆ ಹಲವಾರು ಕ್ರಮಗಳಿವೆ. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ರೋಗಗಳು ಹರಡುವುದನ್ನು ತಡೆಯಬಹುದು. ದೇಶದ ನಾಗರಿಕರು ಆರೋಗ್ಯವಾಗಿದ್ದರೆ, ಆ ದೇಶದ ಆರ್ಥಿಕ ಸ್ಥಿತಿಯೂ ಚೆನ್ನಾಗಿರುತ್ತದೆ ಎಂದರು.

ಹೆಣ್ಣು ಸೊಳ್ಳೆಗಳಿಂದ ರೋಗ: ಪ್ರಯೋಗ ಶಾಲಾ ಶಾಸ್ತ್ರಜ್ಞ ಡಿ.ಪುಟ್ಟಸ್ವಾಮಿ ಗೌಡ ಮಾತನಾಡಿ, ಮಲೇರಿಯಾ ರೋಗ ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಮಲೇರಿಯಾದ ರೋಗ ಲಕ್ಷಣಗಳು ಜ್ವರ, ವಿಪರೀತ ಚಳಿ, ಮೈಬೆವರುವಿಕೆ, ನಿಶ್ಯಕ್ತಿ, ರಕ್ತ ಹೀನತೆ ಎಂದು ವಿದ್ಯಾರ್ಥಿಗಳ ಗಮನ ಸೆಳೆದರು.

ಯಾವುದೇ ವ್ಯಕ್ತಿಗೆ ಜ್ವರ ಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಒಳಪಟ್ಟು ಉಚಿತ ಚಿಕಿತ್ಸೆಯನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

Advertisement

ಮನೆ, ಶಾಲೆ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮವಹಿಸಬೇಕು. ಕಾರಣ ಸೊಳ್ಳೆಗಳು ನಿಂತ ನೀರಿನಲ್ಲಿ ವಂಶಾಭಿವೃದ್ಧಿಯಾಗುತ್ತದೆ. ಟೈರ್‌, ಪ್ಲಾಸ್ಟಿಕ್‌ ಲೋಟ, ತಟ್ಟೆ, ಬಕೆಟ್, ಒಡೆದು ಹೋದ ಮಡಿಕೆ, ತೆಂಗಿನ ಚಿಪ್ಪು ಇತರೆ ಅನುಪಯುಕ್ತ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ರೋಗ ಹರಡುವಿಕೆ ತಡೆಯಲು ಸಾರ್ವಜನಿಕರು ಅನುಸರಿಬೇಕಾದ ಅನೇಕ ಉಪಕ್ರಮಗಳ ಬಗ್ಗೆ ಅವರು ತಿಳುವಳಿಕೆ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕಿ ಪ್ರೇಮಲತಾ ಮಾತನಾಡಿ, ಶಾಲೆಗಳಲ್ಲಿ ಇಂತಹ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು ನಿರಂತರವಾಗಿ ಪಠ್ಯೇತರ ಚಟುವಟಿಕೆಯ ನಿಟ್ಟಿನಲ್ಲಿ ಜರುಗಿದ್ದಲ್ಲಿ ರೋಗ ಮುಕ್ತ ಸಮಾಜ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಆರೋಗ್ಯ ಸಹಾಯಕ ರಾಜೇಂದ್ರ ಪ್ರಸ್ತಾಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಜ ಶೇಖರ್‌, ರಾಧಮಣಿ, ಮುನಿಯಪ್ಪ, ಜಯ್‌ಕುಮಾರ್‌, ಅನುರಾಧ ಬಿ. ತೋಡ್ಕರ್‌, ಯೋಗಿತಾ, ಅರುಣ್‌ಕುಮಾರ್‌, ಚೂಡೇಶ್‌ ಶಾಲಾ ಮಕ್ಕಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next