Advertisement

ಸಾರ್ವಜನಿಕರೇ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿ

12:55 PM Oct 22, 2021 | Team Udayavani |

ಚಾಮರಾಜನಗರ: ಪ್ರತಿದಿನ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಪೊಲೀಸರ ಸೇವೆ, ಕರ್ತವ್ಯ ಪಾಲನೆ ಶ್ಲಾಘನೀಯವಾದದ್ದು ಎಂದು ನ್ಯಾಯಾಧೀಶ ಸದಾಶಿವ ಎಸ್‌. ಸುಲ್ತಾನ್‌ಪುರಿ ಹೇಳಿದರು. ನಗರದ ಜಿಲ್ಲಾ ಪೊಲೀಸ್‌ ಕವಾಯಿತು ಮೈದಾನದಲ್ಲಿ ಗುರುವಾರ, ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.

Advertisement

ನಿತ್ಯ ಹಗಲು ಇರುಳೆನ್ನದೇ ನಾಗರಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯ ದೇಶದ ಗಡಿ ಕಾಯುವ ಸೈನಿಕರಿಗೆ ಸಮಾನವಾಗಿದೆ. ಕಾನೂನಿನ ರಕ್ಷಣೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ನ್ಯಾಯಾಂಗ ಹಾಗೂ ಪೊಲೀಸ್‌ ಇಲಾಖೆ ಸಮನ್ವ ಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.

ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಮಾತನಾಡಿ, ಪೊಲೀಸ್‌ ಹುತಾತ್ಮರ ದಿನ ಆಚರಣೆ ವಿಶಿಷ್ಠ ಕಾರ್ಯಕ್ರಮವಾಗಿದೆ. ಸಾರ್ವಜನಿಕ ಬದುಕು, ಆಸಿ-ಪಾಸ್ತಿ ಹಾಗೂ ಜೀವ ರಕ್ಷಣೆಗೆ ಮುಂದಾಗಿರುವ ಪೊಲೀಸರ ತ್ಯಾಗ, ಬಲಿದಾನವನ್ನು ಸ್ಮರಿಸುವುದು ನಮ್ಮ ಪರಂಪರೆ ಯಾಗಿದೆ ಎಂದರು. ಎಸ್ಪಿ ದಿವ್ಯಾ ಸಾರಾ ಥಾಮಸ್‌ ಅವರು ಹುತಾತ್ಮರ ಹೆಸರುಗಳನ್ನು ವಾಚನ ಮಾಡಿ ಮಾತನಾಡಿ, ಭಾರತ ಚೀನಾ ಯುದ್ಧದಲ್ಲಿ ವೀರಮರಣವನ್ನಪ್ಪಿದ ಪೊಲೀಸರ ಸ್ಮರಣೆ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕರ್ನಾಟಕದ 16 ಮಂದಿ ಸೇರಿದಂತೆ ದೇಶದಲ್ಲಿ ಒಟ್ಟು 377 ಮಂದಿ ಹುತಾತ್ಮರಾಗಿದ್ದು, ದೇಶಕ್ಕಾಗಿ ಅವರ ಸೇವೆ ಚಿರಸ್ಮರಣೀಯವಾಗಿದೆ ಎಂದರು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್‌.ಆರ್‌. ನಟೇಶ್‌, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, ಬಿ.ಆರ್‌ .ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ. ಸಂತೋಷ್‌ಕುಮಾರ್‌, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್‌.ಪಿ. ಗಿರೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಹೆಚ್ಚುವರಿ ಎಸ್ಪಿ ಕೆ.ಎಸ್‌. ಸುಂದರರಾಜು, ಅಬಕಾರಿ ಉಪ ಆಯುಕ್ತ ಮುರಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಆಸ್ಪತ್ರೆಯ ನೋಡಲ್‌ ಅಧಿಕಾರಿ ಡಾ. ಮಹೇಶ್‌, ನಗರಸಭೆ ಪೌರಾಯುಕ್ತ ಕರಿಬಸವಯ್ಯ, ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 ಪ್ರತಿ ಠಾಣೆಯಲ್ಲಿ ಸಿವಿಲ್‌ ಕೋಡ್‌ ಪುಸ್ತಕ ಇಡಿ-  ಜಿಲ್ಲೆಯ ಪ್ರತಿ ಪೊಲೀಸ್‌ ಠಾಣೆಗಳಲ್ಲಿ ಸಿವಿಲ್‌ ಕೋಡ್‌ ನಿಯಮಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಇಡುವುದರಿಂದ ಪೊಲೀಸರು ಕಾನೂನನ್ನು ಸಮರ್ಪಕವಾಗಿ ಅರಿಯಲು ನೆರವಾಗಲಿದೆ. ಅಲ್ಲದೆ ಪ್ರಕರಣಗಳ ತನಿಖಾ ಸಂದರ್ಭದಲ್ಲಿ ತಾಂತ್ರಿಕತೆಯ ಸಹಾಯ ಪಡೆಯಬಹುದು. ತಾಂತ್ರಿಕತೆಯಿಂದ ತಪ್ಪಿತಸ್ಥರನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ನ್ಯಾಯಾಧೀಶರಾದ ಸದಾಶಿವ ಸುಲ್ತಾನಪುರಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next