ಬೆಂಗಳೂರು: ಪ್ರಸಕ್ತ ಸಾಲಿನ ಪಿಯು ತರಗತಿಗಳು ಅವಧಿಗೂ ಮೊದಲೇ ಆರಂಭವಾಗಿದ್ದು, ನಿರ್ದಿಷ್ಟ ದಿನದೊಳಗೆ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಪ್ರಥಮ ಮತ್ತು ದ್ವಿತೀಯ ಪಿಯುದ 60 ವಿಷಯವಾರು ಶೀರ್ಷಿಕೆ ಹೊಂದಿರುವ ಪುಸ್ತಕಗಳು ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಣಗೊಂಡಿದ್ದು, ರಾಜ್ಯದ ಎಲ್ಲ ಸರ್ಕಾರಿ ಮಳಿಗೆಗಳಲ್ಲಿ ಮಾರಾಟಕ್ಕೆ ಇಡಲಾಗಿದೆ.
ಸರ್ಕಾರದಿಂದ ಅನುಮತಿ ಪಡೆದಿರುವ ಖಾಸಗಿ ಮುದ್ರಣಾಲಯಗಳು ಮುದ್ರಿಸಿರುವ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪಿಯು ಕನ್ನಡ ಮತ್ತು ಇಂಗ್ಲಿಷ್ ವರ್ಕ್‌ಬುಕ್ ಸಹಿತವಾಗಿ ಕನ್ನಡ ಮಾಧ್ಯಮದ ಎಲ್ಲ ಪುಸ್ತಕಗಳು, ಆಂಗ್ಲ ಮಾಧ್ಯಮದ ಪುಸ್ತಕಗಳು, ಭಾಷಾವಾರು, ವಿಷಯವಾರು ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗಲಿದೆ. ಬೆಂಗಳೂರಿನ ಅಂಬೇಡ್ಕರ್ ವೀಧಿಯಲ್ಲಿ ಇರುವ ಸರ್ಕಾರಿ ಕೇಂದ್ರ ಪುಸ್ತಕ ಮಳಿಗೆ,ಮೈಸೂರು ಸರಸ್ವತಿಪುರಂನ ಸರ್ಕಾರಿ ಪುಸ್ತಕ ಮಳಿಗೆ, ಧಾರವಾಡದ ಸಾಧನಕೇರಿ, ಕಲಬುರಗಿಯ ಜವರ್ಗಿ ರಸ್ತೆ,ಶಿವಮೊಗ್ಗ ಕೈಗಾರಿಕಾ ಪ್ರದೇಶ ಮತ್ತು ಮಡಿಕೇರಿಯಲ್ಲಿರುವ ಸರ್ಕಾರಿ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಲಭ್ಯವಿದೆ. ಹಾಗೆಯೇ ಎಲ್ಲ ಜಿಲ್ಲೆಗಳ ಜಿಲ್ಲಾ ಕೇಂದ್ರದ ಖಾಸಗಿ ಪುಸ್ತಕ ಮಳಿಗೆಯಲ್ಲೂ ಪ್ರಥಮ ಹಾಗೂ ದ್ವಿತೀಯ ಪಿಯು ಪುಸ್ತಕ ಲಭ್ಯವಿದೆ ಎಂದು
ಇಲಾಖೆ ಪ್ರಕಟಣೆ ತಿಳಿಸಿದೆ.