ಬೆಂಗಳೂರು : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಗುರುವಾರದಿಂದ ರಾಜ್ಯದಾದ್ಯಂತ ಆರಂಭವಾಗಲಿದೆ. 1004 ಕೇಂದ್ರದಲ್ಲಿ ನಡೆಯುವ ಪರೀಕ್ಷೆಯಲ್ಲಿ 6.90 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಈಗಾಗಲೇ ಜಿಲ್ಲಾಮಟ್ಟದ ಖಜಾನೆ ತಲುಪಿದ್ದು, ಗುರುವಾರ ಬೆಳಗ್ಗೆಯಿಂದಲೇ ಆಯಾ ತಾಲೂಕುಗಳ ಮೂಲಕ ಪರೀಕ್ಷಾ ಕೇಂದ್ರಕ್ಕೆ ಸರಬರಾಜು ಮಾಡಲಾಗುತ್ತದೆ. ಮಾರ್ಚ್ 1ರಿಂದ ಮಾರ್ಚ್ 17ರ ವರೆಗೂ ಪರೀಕ್ಷೆ ನಡೆಯಲಿದೆ. ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳಿಂದ ಆರಂಭಗೊಳ್ಳುವ ಪರೀಕ್ಷೆ, ಇಂಗ್ಲಿಷ್ ವಿಷಯದೊಂದಿಗೆ ಕೊನೆಯಾಗಲಿದೆ. ಪ್ರತಿದಿನ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ ಪರೀಕ್ಷೆ ನಡೆಯಲಿದೆ.
ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿಷಯಗಳು ಒಟ್ಟೊಟ್ಟಿಗೆ ನಡೆಯಲಿದೆ. ಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈಗಾಗಲೇ ಪ್ರವೇಶ ಪತ್ರ ವಿತರಣೆಯಾಗಿದೆ. ಇಲಾಖೆಯ ನಿಯಮದಂತೆ ಶೇ.75ರಷ್ಟು ಹಾಜರಾತಿ ಇಲ್ಲದ ಸುಮಾರು 3 ಸಾವಿರ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶಪತ್ರವನ್ನು ತಡೆಹಿಡಯಲಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ದೂ :080-23083900ಗೆ ಕರೆ ಮಾಡಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ನಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಮತ್ತು ಪ್ರಶ್ನೆ ಪತ್ರಿಕೆ ಸರಬರಾಜು ಮಾಡುವ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗಿದೆ. ಯಾವುದೇ ಗೊಂದಲ ಇಲ್ಲದೇ ಸುಗಮವಾಗಿ ಪರೀಕ್ಷೆ ನಡೆಸಲು ಇಲಾಖೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ.
ಮಾ.23ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ :
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮುಗಿದ ಒಂದೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಮಾ.23ರಿಂದ ಏ.6ರ ತನಕ ಪರೀಕ್ಷೆ ನಡೆಯಲಿದ್ದು, 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಏ.18 ಮತ್ತು 19ರಂದು ಸಿಇಟಿ ನಡೆಯಲಿದೆ.