ಬೆಂಗಳೂರು: ವೇತನ ತಾರತಮ್ಯ ನಿವಾರಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಿಯು ಕಾಲೇಜಿನ ಉಪನ್ಯಾಸಕರು ರಾಜ್ಯಾದ್ಯಂತ ಪರೀಕ್ಷಾ ಕೊಠಡಿಯಲ್ಲಿ ಕಪ್ಪುಪಟ್ಟಿ ಧರಿಸಿ ಧರಣಿ ಆರಂಭಿಸಿದ್ದು, ಮೌಲ್ಯಮಾಪನ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪಿಯು ಉಪನ್ಯಾಸಕರ ಸಂಘ ಸ್ಪಷ್ಟಪಡಿಸಿದೆ.
ಪ್ರಥಮ ಪಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಸೋಮವಾರದಿಂದ ಆರಂಭವಾಗಿದೆ. ಪರೀಕ್ಷೆಗೆ ಬಂದಿರುವ ಬಹುತೇಕ ಉಪನ್ಯಾಸಕರು ಕಪ್ಪುಪಟ್ಟಿ ಧರಿಸಿದ್ದರು. ಇದೇ ಪ್ರಕ್ರಿಯೆಯನ್ನು ದ್ವಿತೀಯ ಪಿಯು ಪರೀಕ್ಷೆಗೂ ಮುಂದುವರಿಸಲಿದ್ದೇವೆ ಎಂದು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು.
ಪದವಿಪೂರ್ವ ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮಾಡಬೇಕು, 2008ರ ನಂತರ ನೇಮಕಾತಿ ಗೊಂಡಿರುವ ಉಪನ್ಯಾಸಕರಿಗೆ ಬಡ್ತಿ ನೀಡಬೇಕು ಹಾಗೂ ಈಗಾಗಲೇ ನೀಡಿರುವ ಬಡ್ತಿಯನ್ನು ವಾಪಾಸ್ ಪಡೆಯುವ ಪ್ರಕ್ರಿಯೆಗೆ ತಡೆ ನೀಡಬೇಕು. 6ನೇ ವೇತನಾನುದಾನದಂತೆ ಮುಂಬಡ್ತಿ ಹಾಗೂ ವೇತನ ಬಡ್ತಿಯನ್ನು ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.
ಇದಕ್ಕೆ ಸರ್ಕಾರದಿಂದ ಭರವಸೆ ಸಿಕ್ಕಿಲ್ಲ. ಹೀಗಾಗಿ, ಪ್ರತಿಭಟನೆ ಆರಂಭಿಸಿದ್ದೇವೆ ಎಂದರು. 2019ರ ನವೆಂಬರ್ ತಿಂಗಳಲ್ಲಿ ಜಿಲ್ಲಾಮಟ್ಟದಲ್ಲಿ ಹೋರಾಟ ನಡೆಸಿದ್ದೇವೆ. 2020ರ ಜ.31ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೂ ಬೇಡಿಕೆ ಪಟ್ಟಿ ನೀಡಿದ್ದೇವೆ.
ಕ್ರಮ ವಹಿಸದ ಕಾರಣ ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ಹಾಜರಾಗಿದ್ದೇವೆ. ಅಲ್ಲದೆ, ಸರ್ಕಾರ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಮೌಲ್ಯಮಾಪನ ಕಾರ್ಯವನ್ನು ಸಂಪೂರ್ಣವಾಗಿ ಬಹಿಷ್ಕರಿಸಲಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಖಚಿತಪಡಿಸಿದರು.