Advertisement

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

11:33 PM May 21, 2024 | Team Udayavani |

ಬೆಂಗಳೂರು: ಸಿಇಟಿ ಪರೀಕ್ಷೆಯ ರ್‍ಯಾಂಕಿಂಗ್‌ ಪ್ರಕಟನೆಯ ಸಂದರ್ಭದಲ್ಲಿ ದ್ವಿತೀಯ ಪಿಯುನ ಅಂತಿಮ ಪರೀಕ್ಷೆಯ ಅಂಕವನ್ನು ಶೇ. 50 ಪರಿಗಣಿಸುವ ಹಿನ್ನೆಲೆಯಲ್ಲಿ ಮತ್ತು ಪರೀಕ್ಷೆ -1 ಮತ್ತು ಪರೀಕ್ಷೆ-2ರಲ್ಲಿ ವಿಷಯವಾರು ಪಡೆದ ಗರಿಷ್ಠ ಅಂಕವನ್ನು ಆಧರಿಸಿ ರ್‍ಯಾಂಕಿಂಗ್‌ ನೀಡುವುದಾಗಿ ಸರಕಾರ ಹೇಳಿದ್ದರಿಂದ ಒಂದು ಅಂಕದ ವ್ಯತ್ಯಾಸವೂ ಸಿಇಟಿ ರ್‍ಯಾಂಕಿಂಗ್‌ನಲ್ಲಿ ಭಾರೀ ವ್ಯತ್ಯಾಸ ತರುವುದರಿಂದ ವಿಜ್ಞಾನದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಅಂಕ ಸುಧಾರಣೆಗಾಗಿ ಪರೀಕ್ಷೆ ಬರೆದಿದ್ದಾರೆ.

Advertisement

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ (ಪಿಸಿಎಂಬಿ) ಸಂಯೋಜನೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅಂಕ ಸುಧಾರಣೆಗಾಗಿ ಪರೀಕ್ಷೆ ಬರೆದಿದ್ದಾರೆ. ಉಳಿದಂತೆ ಕಂಪ್ಯೂಟರ್‌ ಸೈನ್ಸ್‌ನ ವಿದ್ಯಾರ್ಥಿಗಳು ಸಹ ಅಂಕ ಸುಧಾರಣೆಯ ಪಣತೊಟ್ಟು ಪರೀಕ್ಷೆ ಬರೆದಿದ್ದಾರೆ. ಅಂಕ ಸುಧಾರಣೆಗಾಗಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳನ್ನು ವಿಷಯವಾರು ಪ್ರತ್ಯೇಕ ಅಭ್ಯರ್ಥಿ ಎಂದು ಪರಿಗಣಿಸಿದರೆ ವಿದ್ಯಾರ್ಥಿಗಳ ಸಂಖ್ಯೆ 89,673 ಆಗುತ್ತದೆ.

ಈ ಪೈಕಿ 70,534 ವಿದ್ಯಾರ್ಥಿಗಳು (ಶೇ. 78.65) ಪಿಸಿಎಂಬಿ ಅಥವಾ ಪಿಸಿಎಂಸಿ ಸಂಯೋಜನೆಗೆ ಸೇರಿದವರು. ಈ ಪೈಕಿ 31,843 ವಿದ್ಯಾರ್ಥಿಗಳ ಅಂಕ ಧನಾತ್ಮಕವಾಗಿ ಸುಧಾರಣೆಯಾಗಿದ್ದು 38,691 ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ.
ಭೌತಶಾಸ್ತ್ರದಲ್ಲಿ ಗರಿಷ್ಠ 23,689 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 14,065 ವಿದ್ಯಾರ್ಥಿಗಳ ಅಂಕ ಸುಧಾರಣೆಯಾಗಿದೆ.

ಉಳಿದಂತೆ ರಸಾಯನಶಾಸ್ತ್ರ 20,226 ವಿದ್ಯಾರ್ಥಿಗಳಲ್ಲಿ 7,127, ಗಣಿತ ಬರೆದ 17,100 ವಿದ್ಯಾರ್ಥಿಗಳಲ್ಲಿ 8,933 ಜೀವಶಾಸ್ತ್ರ ಬರೆದ 8,331 ವಿದ್ಯಾರ್ಥಿಗಳಲ್ಲಿ 1,718 ವಿದ್ಯಾರ್ಥಿಗಳ ಅಂಕ ಸುಧಾರಣೆಯಾಗಿದೆ. ಗಣಕ ವಿಜ್ಞಾನ ಪರೀಕ್ಷೆಯನ್ನು 2,197 ವಿದ್ಯಾರ್ಥಿಗಳು ಬರೆದಿದ್ದು 586 ಮಂದಿಯ ಅಂಕದಲ್ಲಿ ಪ್ರಗತಿ ಕಂಡು ಬಂದಿದೆ.
ಇಂಗ್ಲಿಷ್‌ ಪರೀಕ್ಷೆಯನ್ನು 8,333 ವಿದ್ಯಾರ್ಥಿಗಳು ಬರೆದಿದ್ದು 4,525 ವಿದ್ಯಾರ್ಥಿಗಳಿಗೆ ಧನಾತ್ಮಕ ಅಂಕ ಬದಲಾವಣೆ ಕಂಡು ಬಂದಿದೆ. ಉಳಿದಂತೆ ಕನ್ನಡ 1,906 ಮಂದಿ ವಿದ್ಯಾರ್ಥಿಗಳು, ಹಿಂದಿಯನ್ನು 1,853 ಮಂದಿ ಬರೆದಿದ್ದು ಈ ಪೈಕಿ 620, ಅರ್ಥಶಾಸ್ತ್ರವನ್ನು 1,338 ವಿದ್ಯಾರ್ಥಿಗಳು ಬರೆದಿದ್ದು ಈ ಪೈಕಿ 548 ವಿದ್ಯಾರ್ಥಿಗಳಿಗೆ ಧನಾತ್ಮಕ ಫ‌ಲಿತಾಂಶ ಬಂದಿದೆ.

ಪರೀಕ್ಷೆ -3: ಮೇ 28ರ ವರೆಗೆ ಅವಕಾಶ
ದ್ವಿತೀಯ ಪಿಯುಸಿ ಪರೀಕ್ಷೆ-3 ಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಮೇ 23ರಿಂದ 28ರ ವರೆಗೆ ಅವಕಾಶ ನೀಡಿದ್ದು, ದಂಡದೊಂದಿಗೆ ಶುಲ್ಕ ಪಾವತಿಗೆ ಮೇ 29ರಿಂದ ಮೇ 30ರ ವರೆಗೆ ಅವಕಾಶವಿದೆ. ಪರೀಕ್ಷೆ-3ಕ್ಕೆ ಅರ್ಜಿ ಸಲ್ಲಿಕೆ ಮಾಡಲು ಮರು ಮೌಲ್ಯಮಾಪನದ ಫ‌ಲಿತಾಂಶಕ್ಕೆ ಕಾಯದೇ ಅರ್ಜಿ ಸಲ್ಲಿಸಬಹುದಾಗಿದು ಎಂದು ಮಂಡಳಿ ತಿಳಿಸಿದೆ.

Advertisement

ಸ್ಕ್ಯಾನ್‌ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 23 ಕಡೇ ದಿನ
ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 23 ಕಡೆಯ ದಿನವಾಗಿದ್ದು, ಶುಲ್ಕ ಪಾವತಿ ಮಾಡಿದವರು ಮೇ 22ರಿಂದ 24ರ ವರೆಗೆ ಉತ್ತರ ಪತ್ರಿಕೆ ಪ್ರತಿಗಳ ಡೌನ್‌ ಲೋಡ್‌ ಮಾಡಿಕೊಳ್ಳಬಹುದಾಗಿದೆ. ಸ್ಕ್ಯಾನ್‌ ಪ್ರತಿ ಪಡೆದವರಿಗೆ ಮಾತ್ರ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 22ರಿಂದ ಮೇ 25ರ ವರೆಗೆ ಅವಕಾಶವಿದೆ. ಸ್ಕ್ಯಾನ್‌ ಪ್ರತಿ ಪಡೆಯಲು 530 ರೂ. ಹಾಗೂ ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂ.ಗಳ ಶುಲ್ಕ ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷೆ ಎನ್‌. ಮಂಜುಶ್ರೀ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next