ದೊಡ್ಡಬಳ್ಳಾಪುರ: ಕೋವಿಡ್-19 ಲಾಕ್‌ಡೌನ್ ಹಿನ್ನೆಲೆ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯು ಜಿಲ್ಲೆಯಲ್ಲಿ ಸುಗಮವಾಗಿ ನಡೆದಿದ್ದು, ಪರೀಕ್ಷೆ ಅಕ್ರಮಗಳು ಕುರಿತು ವರದಿಯಾಗಿಲ್ಲ. ಈ ಮೂಲಕ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆಯ ಒಟ್ಟು 13 ಪರೀಕ್ಷೆ ಕೇಂದ್ರಗಳಲ್ಲಿ ಹೊರ ಜಿಲ್ಲೆಗಳ 117 ವಿದ್ಯಾರ್ಥಿಗಳು ಸೇರಿದಂತೆ 8,688 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿದ್ದು, ಈ ಪೈಕಿ ಒಟ್ಟು 8,437 ವಿದ್ಯಾರ್ಥಿಗಳು ಹಾಜರಾಗಿದ್ದು, 251 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಉಳಿದಂತೆ ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಕಲಾವತಿ ತಿಳಿಸಿದ್ದಾರೆ.
ಉಚಿತ ಸಾರಿಗೆ ವ್ಯವಸ್ಥೆ: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ತಲುಪಲು ಸಾರಿಗೆ ಸಂಸ್ಥೆಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್ ಧರಿಸಿ ಪರೀಕ್ಷೆ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಅಂತರ ಕಾಪಾಡಿಕೊಂಡು ಕುಳ್ಳಿರಿಸಲಾಗಿತ್ತು. ನಂತರ ನೋಂದಣಿ ಸಂಖ್ಯೆಯನ್ವಯ ಕೊಠಡಿ ಸಂಖ್ಯೆ ಸೂಚನೆ ಫಲಕದಲ್ಲಿ ಹಾಕಿ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದರು.
ಕಾಲೇಜುಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದು, ಪರೀಕ್ಷೆ ಪ್ರಾರಂಭದಿಂದ ಕೊನೆ ತನಕ ಅಗತ್ಯ ಔಷಧ ಮತ್ತು ಪ್ರಥಮ ಚಿಕಿತ್ಸೆ ಸಲಕರಣೆಯೊಂದಿಗೆ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಬರುವುದನ್ನು ಪರಿಶೀಲಿಸಿ, ಪರೀಕ್ಷೆ ಕೇಂದ್ರ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ವಿದ್ಯಾರ್ಥಿಗಳ ದೇಹದ ಉಷ್ಣತೆ ಅಳೆದು, ಸ್ಯಾನಿ ಟೈಸರ್ ಹಾಕಿ, ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು.
ಪರೀಕ್ಷೆ ಕೇಂದ್ರಗಳಲ್ಲಿ ಸಾಕಷ್ಟು ಆಸನಗಳ ವ್ಯವಸ್ಥೆ ಮಾಡಿ, ವಿದ್ಯಾರ್ಥಿಗಳು ಅಂತರ ಕಾಪಾಡಿಕೊಳ್ಳುವಂತೆ ಮಾಡಲಾಗಿತ್ತು. ಕೋವಿಡ್-19 ಲಕ್ಷಣಗಳು ಬಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು 2 ಕೊಠಡಿ ಹಾಗೂ ಅಗತ್ಯ ಕೊಠಡಿ ಮೇಲ್ವಿಚಾರಕರನ್ನು ಮೀಸಲಿರಿಸಲಾಗಿತ್ತು. ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿ, ಮೊಬೈಲ್ ನಿರ್ಬಂಧಿಸಲಾಗಿತ್ತು.