Advertisement

ದ.ಕ.: ಇಂದು ದ್ವಿತೀಯ ಪಿಯು ತರಗತಿ ಆರಂಭ

12:40 AM Sep 01, 2021 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಸೆ. 1ರಿಂದ ದ್ವಿತೀಯ ಪಿಯುಸಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಳ್ಳಲಿವೆ.

Advertisement

ಪ.ಪೂ. ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದ್ದು ಅದರಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮಕ್ಕಳ ಹಾಜರಾತಿ ಗರಿಷ್ಠವಾಗಿದ್ದರೆ ಶೇ. 50ರಷ್ಟು ಮಂದಿಗೆ ಅವಕಾಶ ನೀಡಿ ಉಳಿದ ವಿದ್ಯಾರ್ಥಿಗಳಿಗೆ ಇತರ ಶಿಫ್ಟ್ಗಳಲ್ಲಿ ತರಗತಿ ನಡೆಸುವ ಅವಕಾಶ ಕೂಡ ಮಾಡಿಕೊಡಲಾಗಿದೆ. ಪ್ರಾಂಶುಪಾಲರು ಮಾರ್ಗಸೂಚಿ ಪಾಲನೆ ಅನುಸರಿಸಿ ವಿದ್ಯಾರ್ಥಿಗಳಿಗೂ ತೊಂದರೆಯಾಗದ ರೀತಿಯಲ್ಲಿ ತರಗತಿಗಳನ್ನು ಮಾಡಲು ಪೂರಕವಾಗಿ ಸ್ವಯಂ ಆಗಿ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ. ಭೌತಿಕ ತರಗತಿ ಕಡ್ಡಾಯವಲ್ಲ, ಆನ್‌ಲೈನ್‌ ತರಗತಿಗೂ ಅವಕಾಶವಿರುತ್ತದೆ. ಮಾರ್ಗಸೂಚಿ ಪಾಲನೆ ಮೇಲೆ ಇಲಾಖಾಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಜಿಲ್ಲಾ ಪ.ಪೂ. ಶಿಕ್ಷ ಇಲಾಖೆಯ ಉಪನಿರ್ದೇಶಕ ರಾಜಣ್ಣ ಅವರು ತಿಳಿಸಿದ್ದಾರೆ.

9ರಿಂದ 11: ಸದ್ಯಕ್ಕಿಲ್ಲ :

ದ.ಕ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.2.60 ಇರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಹೊರತುಪಡಿಸಿ ಉಳಿದ ತರಗತಿಗಳ ಆರಂಭದ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಶೇ.2ರ ಒಳಗೆ ಬಂದ ಬಳಿಕ ಉಳಿದ ತರಗತಿ ಆರಂಭದ ಬಗ್ಗೆ ಜಿಲ್ಲಾಡಳಿತ ನಿರ್ಧಾರ ಪ್ರಕಟಿಸಲಿದೆ ಎಂದು ಜಿ. ಪಂ. ಸಿಇಒ ಡಾ| ಕುಮಾರ್‌ ತಿಳಿಸಿದ್ದಾರೆ.

Advertisement

ಪ್ರಥಮ ಪಿಯುಸಿ ಹಾಗೂ ಪದವಿ/ಸ್ನಾತಕೋತ್ತರ ಪದವಿ ಭೌತಿಕ ತರಗತಿಗಳು ಕೂಡ ಸೆ.15ರ ಬಳಿಕ ಆರಂಭವಾಗುವ ಸಾಧ್ಯತೆಯಿದ್ದು, ಇದೂ ಕೂಡ ಇನ್ನು ದಿನಾಂಕ ನಿಗದಿಯಾಗಿಲ್ಲ.

ಈ ಮಧ್ಯೆ, ರಾಜ್ಯದಲ್ಲಿ 6, 7 ಹಾಗೂ 8ನೇ ತರಗತಿ ಸೆ.6ರಿಂದ ಆರಂಭಗೊಳ್ಳುತ್ತಿದ್ದರೂ, ದ.ಕ. ಜಿಲ್ಲೆಯಲ್ಲಿ ಸದ್ಯಕ್ಕೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಉಡುಪಿ: 9ರಿಂದ 12ನೆಯ ತರಗತಿ ಆರಂಭ :

ಉಡುಪಿ: ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಶೇ. 2ಕ್ಕಿಂತ ಕಡಿಮೆ ಇರುವ ಕಾರಣ ಸೆ. 1ರಿಂದ 9-10ನೆಯ ತರಗತಿ ಮತ್ತು ಪ್ರಥಮ, ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿವೆ.

ಎಲ್ಲ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ 9-10ನೆಯ ತರಗತಿಗಳನ್ನು ಅರ್ಧ ದಿನ ಬೆಳಗ್ಗಿನ ಅವಧಿಯಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಶಾಲೆಗೆ ಬರುವ ಮಕ್ಕಳಿಗೆ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮನೆಯಿಂದಲೇ ಕುಡಿಯುವ ನೀರು/ಉಪಾಹಾರವನ್ನು ತರಬೇಕು. ಇದು ಕಡ್ಡಾಯವಾಗಿರದೆ ಆನ್‌ಲೈನ್‌ ಅಥವಾ ಪರ್ಯಾಯ ವಿಧಾನದಲ್ಲಿ ಕೂಡ ಹಾಜರಾಗಬಹುದು. ಬಿಇಒ ಅವರು ಎಲ್ಲ ಶಾಲೆಗಳಿಗೆ ಸೂಕ್ತ ಸೂಚನೆ ನೀಡಿ ಅಗತ್ಯ ಕ್ರಮ ವಹಿಸಬೇಕೆಂದು ಡಿಡಿಪಿಐ ಎನ್‌.ಎಚ್‌. ನಾಗೂರ ತಿಳಿಸಿದ್ದಾರೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ದಿನಕ್ಕೆ ನಾಲ್ಕು ಅವಧಿ ಪಾಠಗಳಿರುತ್ತವೆ. ವಾರದ ಮೊದಲ ಮೂರು ದಿನ ಶೇ. 50 ವಿದ್ಯಾರ್ಥಿಗಳು ಮತ್ತು ಅನಂತರದ ಮೂರು ದಿನ ಉಳಿದ ಶೇ. 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ತರಗತಿ ನಡೆಸಲಾಗುವುದು ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next