Advertisement

ಇಂದಿನಿಂದ ಪಿಯು ಮತ್ತು ಪದವಿ ಕಾಲೇಜು ಆರಂಭ

08:15 PM Feb 15, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದದಿಂದ ಕಳೆದ ಒಂದು ವಾರದಿಂದ ಬಂದ್‌ ಆಗಿದ್ದ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಬುಧವಾರದಿಂದ ಆರಂಭವಾಗಲಿವೆ.

Advertisement

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಕಾಲೇಜುಗಳನ್ನು ಪುನಾರಂಭ ಮಾಡುವಂತೆ ಸೂಚಿಸಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೀತಲ್‌ ಎಂ. ಹಿರೇಮಠ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರವು ಸೋಮವಾರ ರಾತ್ರಿ ಕಾಲೇಜುಗಳನ್ನು ತೆರೆಯುವ ಸಂಬಂಧ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪಿಯುಸಿ ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರು, ಮಂಗಳವಾರ ಉಪನ್ಯಾಸಕರ ಸಭೆ ನಡೆಸಿ ತರಗತಿಗಳನ್ನು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ರಜೆ ಹಿನ್ನೆಲೆಯಲ್ಲಿ ಹಾಸ್ಟೆಲ್‌ ಮತ್ತು ಪಿಜಿಗಳಲ್ಲಿ ಉಳಿಕೊಂಡಿದ್ದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದಾರೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿದ್ಯಾರ್ಥಿಗಳು ಹೋಗಿದ್ದಾರೆ. ಇವರಿಗೆ ವಾಟ್ಸ್‌ ಆ್ಯಪ್‌ ಗ್ರೂಪ್‌ ಗ ಳ ಮೂಲಕ ತರಗತಿಗಳನ್ನು ಆರಂಭಿಸುತ್ತಿರುವ ಕುರಿತು ಮಾಹಿತಿ ನೀಡುವಂತೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ತಿಳಿಸಿದ್ದಾರೆ.

ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್‌ ಪ್ರಕರಣ ಆರಂಭವಾಗಿ ನಂತರ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಘರ್ಷಣೆ ಉಂಟಾದ ಪರಿಣಾಮ, ವಿದ್ಯಾರ್ಥಿಗಳ ಹಿತದೃಷ್ಟಿ ಮತ್ತು ಶಾಂತಿ-ಸುವ್ಯವಸ್ಥೆ ಕಾಪಾಡಲು ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿತ್ತು. ಇದೀಗ ಮೊದಲ ಹಂತದಲ್ಲಿ ಸೋಮವಾರದಿಂದ 9 ಮತ್ತು 10ನೇ ತರಗತಿಯ ಪ್ರೌಢಶಾಲೆಗಳು ಆರಂಭವಾಗಿದ್ದು, ಎರಡನೇ ಹಂತದಲ್ಲಿ ಪಿಯುಸಿ ಮತ್ತು ಪದವಿ ಕಾಲೇಜುಗಳು ಆರಂಭಿಸುವುದಾಗಿ ಸರ್ಕಾರ ತಿಳಿಸಿದೆ.

Advertisement

ಪದವಿ ಕಾಲೇಜು ಶೈಕ್ಷಣಿಕ ವರ್ಷ 15 ದಿನ ವಿಸ್ತರಣೆ
ಪದವಿ ಕಾಲೇಜುಗಳಲ್ಲಿ ಒಮಿಕ್ರಾನ್‌ ಸೋಂಕು, ಅತಿಥಿ ಉಪನ್ಯಾಸಕರ ಮುಷ್ಕರ ಸೇರಿದಂತೆ ಹಲವು ತೊಡಕುಗಳು ಉಂಟಾದ ಹಿನ್ನೆಲೆಯಲ್ಲಿ ಫೆ.12ಕ್ಕೆ ಕೊನೆಗೊಂಡಿದ್ದ ಶೈಕ್ಷಣಿಕ ವರ್ಷವನ್ನು ಮುಂದಿನ 15 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಉನ್ನತ ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ ನಿರ್ಧರಿಸುವ ಅಧಿಕಾರವನ್ನು ಆಯಾ ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ. ಪ್ರಸಕ್ತ ಸೆಮಿಸ್ಟರ್‌ನಲ್ಲಿ ಆಯಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ನಡೆದಿರುವ ಬೋಧನೆಯನ್ನು ಪರಿಗಣಿಸಿ ಶೈಕ್ಷಣಿಕ ವರ್ಷದ ವೇಳಾಪಟ್ಟಿ ನಿಗದಿ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ಅದರಂತೆ ಬೆಂಗಳೂರು ನಗರ ವಿಶ್ವವಿದ್ಯಾಲಯವು ಫೆ.26ರ ವರೆಗೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯವು ಫೆ.28ರ ವರೆಗೆ ಶೈಕ್ಷಣಿಕ ವರ್ಷವನ್ನು ವಿಸ್ತರಿಸಿವೆ. ಮಾರ್ಚ್‌ ಮೊದಲ ವಾರದಲ್ಲಿ 1,3,5 ನೇ ಸೆಮಿಸ್ಟರ್‌ ಪರೀಕ್ಷೆಗಳು ಆರಂಭವಾಗಲಿವೆ. 2,4,6ನೇ ಸೆಮಿಸ್ಟರ್‌ ತರಗತಿಗಳು ಏಪ್ರಿಲ್‌ ಎರಡನೇ ವಾರದಲ್ಲಿ ಆರಂಭಿಸಲು ವೇಳಾಪಟ್ಟಿ ಸಿದ್ಧಪಡಿಸಿವೆ.

ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ಫೆ.28ರ ವರೆಗೆ ಶೈಕ್ಷಣಿಕ ವರ್ಷವನ್ನು ವಿಸ್ತರಣೆ ಮಾಡಲಾಗಿದೆ. ನಂತರ ಪರೀಕ್ಷಾ ವೇಳಾಪಟ್ಟಿ ನಿಗದಿ ಮಾಡಲಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ (ಆಡಳಿತ) ಪ್ರೊ. ಎಂ. ಕೊಟ್ರೇಶ್‌ ತಿಳಿಸಿದ್ದಾರೆ.

ಇಂದಿನಿಂದ ಪದವಿ ಕಾಲೇಜುಗಳು ಆರಂಭವಾಗುತ್ತಿದ್ದು, ಸಮವಸ್ತ್ರ ನಿಯಮವಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅದನ್ನು ಪಾಲನೆ ಮಾಡಬೇಕು. ಸಮವಸ್ತ್ರ ನಿಗದಿ ಮಾಡದಿರುವ ಕಾಲೇಜುಗಳಲ್ಲಿ ನ್ಯಾಯಾಲಯದ ತೀರ್ಪಿನ ಅನುಸಾರವಾಗಿ ಉಡುಪುಗಳನ್ನು ಧರಿಸಿಕೊಂಡು ಬರಬೇಕು.
– ಡಾ. ಸಿ.ಎನ್‌. ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next