ಹರಪನಹಳ್ಳಿ: ಕೊರಚ ಸಮಾಜದ ಬಗ್ಗೆ ಅವಹೇಳನ ಮಾಡಿರುವ ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾ ಸ್ಪೀಕರ್ ಅವರಿಗೆ ಸಾಕ್ಷಿ ಸಮೇತ ದೂರು ಸಲ್ಲಿಸಲಾಗುವುದು ಎಂದು ಕೊರಚ ಸಮಾಜದ ರಾಜ್ಯಾಧ್ಯಕ್ಷ ಕೆ.ಎನ್.ಓಂಕಾರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೂವಿನಹಡಗಲಿ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಕಳ್ಳತನ ಮಾಡಲಾಗಿದೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಕೊರಚ ಸಮಾಜವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವಹೇಳನ ಮಾಡಿರುವ ಶಾಸಕರ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ನಿಂದಿಸಿರುವ ವಿಡಿಯೋ ಸಿಡಿ ಸಹಿತ ದೂರು ಸಲ್ಲಿಸಲಿದ್ದೇವೆ ಎಂದರು.
ಪರಿಶಿಷ್ಟ ಜಾತಿ ವ್ಯಕ್ತಿ ಮತ್ತೂಬ್ಬ ಪರಿಶಿಷ್ಟ ಜಾತಿ ಸಮುದಾಯಕ್ಕೆ ನಿಂದಿಸಿರುವುದು ನಾಚೀಗೇಡಿನ ಸಂಗತಿಯಾಗಿದೆ. ಹೀಗಾಗಿ ಪರಿಶಿಷ್ಟ ಆಯೋಗ ಮತ್ತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಕ್ರಮಕ್ಕೆ ದೂರು ಸಲ್ಲಿಸಲಿದ್ದೇವೆ. ಶಾಸಕರ ವಿರುದ್ಧ ಹೋರಾಟ ರೂಪಿಸಲು ಚರ್ಚಿಸಿ ದಿನಾಂಕ ನಿಗದಿಗೊಳಿಸಲಾಗುವುದು. ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೊರಚ ಸಮಾಜದ ತಾಲೂಕು ಅಧ್ಯಕ್ಷ ಅಗ್ರಹಾರ ಅಶೋಕ್, ತಾಪಂ ಮಾಜಿ ಸದಸ್ಯ ಎಂ. ಮಲ್ಲೇಶ್, ಹೂವಿನಹಡಗಲಿ ತಾಲೂಕು ಕೊರಚ ಸಮಾಜದ ಅಧ್ಯಕ್ಷ ಶಿವಪುರ ಸುರೇಶ್, ಮುಖಂಡರಾದ ಕೃಷ್ಣ, ಪುರುಷೋತ್ತಮ, ಎಂ.ನಾಗಪ್ಪ, ಅಂಬರೀಷ್, ಅಂಜಿನಪ್ಪ, ಪುಟ್ಟಪ್ಪ, ದುಗ್ಗಪ್ಪ, ಎಂ.ಹನುಮಂತಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.