Advertisement
ನಲವತ್ತೂಂದು ವರ್ಷದ ಸ್ವಾತಿ, ಸ್ತ್ರೀರೋಗ ತಜ್ಞರ ಬಳಿ ಅಂಡಾಶಯಗಳಿಗೆ ತಗುಲಿದ್ದ ಸೋಂಕಿಗೆ ಚಿಕಿತ್ಸೆ ಪಡೆದಿದ್ದಾರೆ. ಲೋಕಾರೂಢಿಯಂತೆ ವೈದ್ಯರು ಮದುವೆ- ಮಕ್ಕಳ ಬಗ್ಗೆ ಮಾತನಾಡಿದಾಗ ಸ್ವಾತಿಗೆ ದುಃಖ ಒತ್ತರಿಸಿಕೊಂಡು ಬಂದಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಇದ್ದಿದ್ದರಿಂದ, ಕೆಲಸದ ಒತ್ತಡದಲ್ಲಿ ಮದುವೆಯ ಬಗ್ಗೆ ಗಮನ ಕೊಟ್ಟೇ ಇರಲಿಲ್ಲ.
Related Articles
Advertisement
ಸ್ವಾತಿಯ ಇಪ್ಪತ್ತೈದನೇ ವಯಸ್ಸಿನಲ್ಲಿ, ಅಪ್ಪನ ಸ್ನೇಹಿತರ ಮಗ ಮದುವೆ ಮಾಡಿಕೊಳ್ಳುತ್ತೇನೆಂದು ಕೇಳಿಕೊಂಡು ಬಂದಿದ್ದರಂತೆ. ತಂದೆ ಇಲ್ಲದ ಕಾರಣ, ಅಮ್ಮ, ಮಗಳಿಗೆ ಜವಾಬ್ದಾರಿ ಕಳಕೊಳ್ಳುವ ಸಲುವಾಗಿ ಮದುವೆಯಾಗಲು ಒತ್ತಾಯಿಸಿದ್ದಾರೆ. ಆಗ ಸ್ವಾತಿಗೆ, ದೊಡ್ಡ ಹುದ್ದೆಗೆ ಏರಬೇಕೆಂಬ ಕನಸಿತ್ತು. ಮದುವೆಗೆ ಒಪ್ಪಲಿಲ್ಲ. ನಂತರ ಕೆಲಸದಲ್ಲಿ ಬೆಳೆದು ಮನೆಯ ಹಣಕಾಸು ಸ್ಥಿತಿ ಸುಧಾರಿಸಿದಾಗ ಸಂಗಾತಿಯ ಹುಡುಕಾಟ ಅಗತ್ಯ ಎನಿಸಿದೆ. ಆಗ ಅವರ ಸಹೋದ್ಯೋಗಿಯೇ ಇವರನ್ನು ಮದುವೆಯಾಗುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ. ಸಹೋದ್ಯೋಗಿಗೆ ಮೊದಲೇ ಮದುವೆಯಾಗಿದ್ದ ವಿಚಾರ ತಿಳಿಯುವಷ್ಟರಲ್ಲಿ ಕಾಲ ಕೈಯಿಂದ ತಪ್ಪಿಹೋದಂತೆ ಅನಿಸುತ್ತದೆ.
ಹೆಣ್ಣು, ಹದಿನೈದರಿಂದ ಮೂವತ್ತು ವರ್ಷಗಳಲ್ಲಿ ತನ್ನ ಭವಿಷ್ಯದ ನೆಲೆಗಟ್ಟನ್ನು ರೂಪಿಸಿಕೊಳ್ಳುವ ಚಿಂತನೆಯನ್ನು ಮೊದಲೇ ಮಾಡಿಕೊಳ್ಳಬೇಕು. ಔದ್ಯೋಗಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಸಂತಾನೋತ್ಪತ್ತಿಯ ಫಲವತ್ತತೆಗೆ ಪ್ರಕೃತಿ ಸಹಜವಾದ ಸೀಮಾರೇಖೆ ಸ್ತ್ರೀಗೆ ಇದೆ. ಆ ಕಟ್ಟಳೆಯನ್ನು ಮೀರಲು ಸಾಧ್ಯವಿಲ್ಲ. ಈ ಸವಾಲನ್ನು ಸ್ತ್ರೀಯರು ಬುದ್ಧಿವಂತಿಕೆಯಿಂದ ಎದುರಿಸಬೇಕು.
ಸ್ವಾತಿ ಮೊದಲೇ, ಮನೆಯಲ್ಲಿ ಗಂಡು ಹುಡುಕುವ ಮುಂಚೆಯೇ, ಐ.ವಿ.ಎಫ್. ವೈದ್ಯರ ಸಹಾಯ ಪಡೆದುಕೊಂಡು ಅಂಡಾಣುಗಳನ್ನು ಶೇಖರಿಸಿಟ್ಟರು. ಅವರಿಗೆ ತಕ್ಕುನಾದ ಸಂಬಂಧವೂ ಕೂಡಿಬಂತು. ಈಗ ಮಕ್ಕಳಾಗಿ, ತಮ್ಮಿಚ್ಛೆಯಂತೆ ಕೌಟುಂಬಿಕ ಜೀವನವನ್ನು ಆನಂದಿಸುತ್ತಿದ್ದಾರೆ.
ವಿ.ಸೂ.:- ಹೆಣ್ಣು ಮಕ್ಕಳ ಮದುವೆಯನ್ನು ಜವಾಬ್ದಾರಿ ಕಳೆದುಕೊಳ್ಳುವ ಸಲುವಾಗಿ ಮಾಡಬೇಡಿ. ತಂದೆಯಿಲ್ಲದ ಹುಡುಗಿಯೆಂದು ಅನುಕಂಪ ಬೇಡ. ಹೆಣ್ಣು ಮಕ್ಕಳಿಗೆ ತಮ್ಮ ಆಶೋತ್ತರಗಳನ್ನು ಸಮಾನಾಂತರವಾಗಿ ಸಾಧಿಸಲು ಪ್ರೇರಣೆ ಕೊಡಿ.– ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ