Advertisement

30 ದಿನದಲ್ಲಿ ಪಿಎಸ್‌ಎಸ್‌ಕೆ ಆರಂಭ: ನಿರಾಣಿ

05:38 AM Jun 28, 2020 | Lakshmi GovindaRaj |

ಮೈಸೂರು: ಮೂರ್‍ನಾಲ್ಕು ವರ್ಷಗಳಿಂದ ಕಮರಿ ಹೋಗಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಭಾಗದ ಕಬ್ಬು ಬೆಳೆಗಾರರ ಬದುಕಿಗೆ ಶಾಸಕ ಹಾಗೂ ಕೈಗಾರಿಕೋದ್ಯಮಿ ಮುರುಗೇಶ್‌ ನಿರಾಣಿ ಹೊಸ ಭರವಸೆ ನೀಡುವ ಮೂಲಕ ಹೊಸ ಕನಸುಗಳನ್ನು ಬಿತ್ತಿದರು.  ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರ ಆಶಾಕಿರಣವಾಗಿರುವ ಪಾಂಡವಪುರ ಸಕ್ಕರೆ ಕಾರ್ಖಾನೆಗೆ  ಮರುಜೀವ ನೀಡುವುದಾಗಿ ತಿಳಿಸಿದರು.

Advertisement

ಪುನಶ್ಚೇತನ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಯನ್ನು ಪುನಶ್ಚೇತನಗೊಳಿಸಲು ಹಾಗೂ ಕಾರ್ಖಾನೆ ವಿಸ್ತರಣೆಗೆ ಮತ್ತು ಉಪ ಉತ್ಪನ್ನಗಳನ್ನು ತಯಾರಿಸಲು ಪಕ್ಷಾತೀತ, ಜಾತ್ಯತೀತವಾಗಿ ಬೃಹತ್‌ ಕಾರ್ಯಕ್ರಮ  ಆಯೋಜಿಸಲಾಗಿದೆ. ಈ ವೇಳೆ ಶಂಕುಸ್ಥಾಪನೆಗೆ ಅಡಿಗಲ್ಲು ಹಾಕಲಾಗುವುದು ಎಂದು ತಿಳಿಸಿದರು.

30 ದಿನಗಳಲ್ಲಿ ಪುನಾರಂಭಿಸುವೆ: ಕಾರ್ಖಾನೆ ತನ್ನ ಕಾರ್ಯ ನಿಲ್ಲಿಸಿ ಮೂರು ವರ್ಷವಾಗಿದೆ. ಎಲ್ಲಾ ಯಂತ್ರಗಳು ತುಕ್ಕು ಹಿಡಿದಿವೆ. ಈಗ ಅದು ನನ್ನ ಕೈ ಸೇರಿದೆ. ಇದನ್ನು ಸವಾಲಾಗಿ ತೆಗೆದುಕೊಂಡಿರುವ ನಾನು, ಕೇವಲ 30 ದಿನಗಳಲ್ಲಿ  ಪುನಾರಂಭಿಸಿ ತೋರಿಸುತ್ತೇನೆ ಎಂದು ಹೇಳಿದರು.

ರೈತರಿಗೆ ನೆರವಾಗುವೆ: 40 ವರ್ಷ ಹಳೆಯದಾದ ಪಿಎಸ್‌ಎಸ್‌ಕೆ ಕಾರ್ಖಾನೆ, ಹಳೆಯ ತಂತ್ರಜ್ಞಾನವನ್ನೇ ಹೊಂದಿದೆ. ಕಡಿಮೆ ಸಾಮರ್ಥ್ಯವುಳ್ಳ ಬಾಯ್ಲರ್‌ಗಳಿವೆ. ಜೊತೆಗೆ ಸಕ್ಕರೆ ಉತ್ಪಾದನೆ ಬಿಟ್ಟರೆ, ಕಾರ್ಖಾನೆಗೆ ಆಗುವಷ್ಟು ವಿದ್ಯುತ್‌  ಉತ್ಪಾದನೆ ಮಾತ್ರ ಮಾಡಲಾಗುತ್ತಿತ್ತು. ಹೆಚ್ಚಿನ ಆದಾಯವಿಲ್ಲದೆ ಕಾರ್ಖಾನೆ ನಷ್ಟ ಅನುಭವಿಸುವಂತಾಗಿದೆ. ಕಾರ್ಖಾನೆಯ ಇಡೀ ಚಿತ್ರಣವನ್ನೇ ಬದಲಾಯಿಸಲಾಗುವುದು. ಪ್ರಮುಖ ಸಕ್ಕರೆ ಕಾರ್ಖಾನೆಯನ್ನಾಗಿ ಮಾರ್ಪಡಿಸಿ ರೈತರಿಗೆ  ನೆರವಾಗುತ್ತೇವೆ ಎಂದರು.

ಕಾರ್ಖಾನೆಗೆ ತಂತ್ರಜ್ಞಾನ ಸ್ಪರ್ಶ: ಕಾರ್ಖಾನೆ ಸಂಪೂರ್ಣ ತುಕ್ಕು ಹಿಡಿದಿದೆ. ಇದಕ್ಕೆ 2 ತಿಂಗಳೊಳಗಾಗಿ ಆಧುನಿಕ ಸ್ಪರ್ಶ ನೀಡಿ,  ನೂತನ ತಂತ್ರಜ್ಞಾನದೊಂದಿಗೆ ಅಭಿವೃದಿಟಛಿಪಡಿಸುವ ಮೂಲಕ ಮಾದರಿ ಕಾರ್ಖಾನೆಯನ್ನಾಗಿ  ಮಾಡುತ್ತೇನೆ. ಸಕ್ಕರೆ ಉತ್ಪಾದನೆ ಜೊತೆಗೆ ವಿದ್ಯುತ್‌, ಇಥನಾಲ್‌, ರೆಕ್ಟಿಪೈಡ್‌, ಸಿಒ2, ಸಿಎನ್‌ಐ, ಸ್ಯಾನಿಟೈಸರ್‌, ರಸಗೊಬ್ಬರ ಸೇರಿದಂತೆ ಉಪ ಉತ್ಪನ್ನಗಳ ತಯಾರಿ ಕೆಗೂ ಒತ್ತು ನೀಡಲಾಗುವುದು. ಇದರಿಂದ ಮಂಡ್ಯ ಜಿಲ್ಲೆಗೆ ಆಗುವ  ಅನುಕೂಲಗಳೇನು ಎಂಬುದು ಭವಿಷ್ಯದಲ್ಲಿ ನಿಮಗೆ ಕಾಣಲಿದೆ ಎಂಬ ಭರವಸೆ ಬಿತ್ತಿದರು.

Advertisement

ಬೆಳೆಗಾರರಿಗೆ ಸಾಮಾಜಿಕ ಭದ್ರತೆ: ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರಿಗೆ ವಿಮೆ ಮಾಡುವುದು, ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ಸೂಪರ್‌ ಮಾರುಕಟ್ಟೆ ಸ್ಥಾಪಿಸುವ ಮೂಲಕ ರೈತರಿಗೆ ಹಾಗೂ  ಕಾರ್ಮಿಕರಿಗೆ ಅಗ್ಗದ  ದರದಲ್ಲಿ ಜೀವನಾವಶ್ಯಕ ವಸ್ತುಗಳನ್ನು ನೀಡಲಾ ಗುವುದು. ಸ್ಥಳೀಯ ವಾಗಿ ತಮ್ಮದೇ ಬ್ಯಾಂಕ್‌ ಸ್ಥಾಪಿಸಿ, ಕಬ್ಬು ಬೆಳೆಗಾರರಿಗೆ ಆರ್ಥಿಕ ಶಕ್ತಿ ತುಂಬಲಾಗುವುದು. ಗುಣಮಟ್ಟದ ಕಬ್ಬಿನ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮತ್ತು  ಔಷಧ ಸಬ್ಸಿಡಿ ದರದಲ್ಲಿ ನೀಡುತ್ತೇವೆ.

ಅಧಿಕ ಇಥನಾಲ್‌ ಉತ್ಪಾದನೆ: ಒಂದು ಕಾಲದಲ್ಲಿ ಸಕ್ಕರೆ ಕಾರ್ಖಾನೆ ಎಂದರೆ ಸಕ್ಕರೆ ಉತ್ಪಾದಿಸುವುದು ಅಷ್ಟೇ ಎನ್ನಲಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಥನಾಲ್‌ ಮುಖ್ಯ ಉತ್ಪನ್ನವಾಗಿದ್ದು, ಸಕ್ಕರೆ ಮತ್ತು ವಿದ್ಯುತ್‌ ಉಪ  ಉತ್ಪನ್ನವಾಗಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಇಥನಾಲ್‌ ಉತ್ಪಾದಿಸುವುದು ನಮ್ಮ ರಾಜ್ಯದಲ್ಲಿಯೇ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲೂ ಇಥ ನಾಲ್‌ ಉತ್ಪಾದನೆ ಮಾಡ ಲಾಗುವುದು  ಎಂದರು.

ಕಾರ್ಖಾನೆಗೆ ಜಾತಿ, ರಾಜಕೀಯ ಸೋಂಕಿರಲ್ಲ: ನನ್ನ ಒಡೆತನದಲ್ಲಿರುವ ಕಾರ್ಖಾನೆಗಳಲ್ಲಿ ಯಾವುದೇ ಪಕ್ಷ ರಾಜಕೀಯ, ಮತ ಹಾಗೂ ಜಾತಿಯ ಸೋಂಕು ಇಲ್ಲ. ಎಲ್ಲರಿಗೂ ಆದ್ಯತೆ ನೀಡಿದ್ದೇವೆ. ರಾಜಕೀಯ ವಿಷಯ ಬಂದರೆ ನಾನು ಶಾಸಕ ಅಷ್ಟೇ. ಕಾರ್ಖಾನೆ ವಿಷಯಕ್ಕೆ ಬಂದರೆ ನಾನು ಕೈಗಾರಿಕೋದ್ಯಮಿ. ಹೀಗಾಗಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಇಲ್ಲಿಯೂ ಕಾರ್ಖಾನೆ ನಡೆಯಲಿದೆ.

ನಾನು ಬಿಜೆಪಿ ಶಾಸಕ ಹೌದು, ಜೊತೆಗೆ ಉದ್ಯಮಿಯಾಗಿದ್ದು ಕೊಂಡು ಪಕ್ಷಾತೀತ ಮತ್ತು ಜಾತ್ಯತೀತವಾಗಿದ್ದೇನೆ. ಇದರಿಂದಲೇ ನಾನು ಉದ್ಯಮಿಯಾಗಿ ಬೆಳೆಯಲು ಸಾಧ್ಯವಾಯಿತು. ಕಾರ್ಖಾನೆ ಯಶಸ್ವಿಯಾಗಿ ಕಾರ್ಯಾರಂಭ ಮಾಡಲು  ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರ ಕೇಳಿದ್ದೇನೆ. ಈ ಭಾಗದಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ಅದನ್ನೂ ಮಾಡುತ್ತೇನೆ. ಆದರೆ ಕಾರ್ಖಾನೆಯಲ್ಲಿ ರಾಜಕೀಯ ಸುಳಿಯಲು ಬಿಡುವುದಿಲ್ಲ.
-ಮುರುಗೇಶ್‌ ನಿರಾಣಿ, ಶಾಸಕ ಹಾಗೂ ಕೈಗಾರಿಕೋದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next