Advertisement

ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸಲ್ಲ

03:44 PM Jul 08, 2022 | Team Udayavani |

ನಿಪ್ಪಾಣಿ (ಬೆಳಗಾವಿ): ಪಿ ಎಸ್‌ ಐ ಅಕ್ರಮ ಪರೀಕ್ಷಾ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕಾನೂನಿನ ಕಕ್ಷೆಗೆ ತಂದು, ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದರು.

Advertisement

ಜಿಲ್ಲೆಯ ನಿಪ್ಪಾಣಿಯಲ್ಲಿ ನೂತನವಾಗಿ ನಿರ್ಮಿಸಲಾದ ನಿಪ್ಪಾಣಿ ಶಹರ ಮತ್ತು ಗ್ರಾಮೀಣ ಪೊಲೀಸ್‌ ಠಾಣೆಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಪಿಎಸ್‌ಐ ಹಗರಣದ ತನಿಖೆ ಯಾವುದೇ ಹಸ್ತಕ್ಷೇಪ ಇಲ್ಲದೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ತನಿಖೆಯು ಅತ್ಯಂತ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಆದರೆ ಇದರಿಂದ ಹತಾಶರಾಗಿರುವ ಕಾಂಗ್ರೆಸ್‌ ನಾಯಕರು ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಸರಕಾರದ ಮೇಲೆ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಸಿಐಡಿ ತನಿಖೆಗೆ ವಹಿಸಲಾದ ಹಲವಾರು ದೂರುಗಳ ಬಗ್ಗೆ ಇದುವರೆಗೂ ಎಫ್‌ಐಆರ್‌ ದಾಖಲಾಗಿಲ್ಲ, ಎಫ್‌ ಐಆರ್‌ ಆದ ಪ್ರಕರಣಗಳಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಲಾಗಿಲ್ಲ. ಆದರೆ ಈಗ ಪ್ರಾಮಾಣಿಕವಾಗಿ ತನಿಖೆ ಆಗುತ್ತಿರುವ ಪಿಎಸ್‌ಐ ಹಗರಣದ ವಿಷಯದಲ್ಲಿ ನಮ್ಮ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ವಿರೋಧ ಪಕ್ಷವಾಗಿ ಕಡ್ಲೆಪುರಿ ತಿನ್ನುತ್ತಿದ್ದರಾ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸಚಿವರು, ನಾವು ಕೇಳಿದ್ದೆವು, ಆದರೆ ಅವರು ಸ್ಪಂದಿಸಿರಲಿಲ್ಲ. ಹಾಗಾದರೆ ನಾವುಗಳು ಕೇಳದೇ ಇರುವುದನ್ನು, ಅವರು (ಸಿದ್ದರಾಮಯ್ಯ) ಕೇಸುಗಳನ್ನು ಮುಚ್ಚಿ ಹಾಕುವುದಕ್ಕೆ ಸಿಕ್ಕಿದ ಪರವಾನಿಗೆ ಎಂದು ತಿಳಿದಿದ್ದರೇ ಎಂದು ತಿರುಗೇಟು ನೀಡಿದರು.

Advertisement

ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಸಿಐಡಿ ತನಿಖೆಯ ಹಳಿ ತಪ್ಪಿಸಿ, ಭ್ರಷ್ಟರ ರಕ್ಷಣೆಗೆ ಕಾಂಗ್ರೆಸ್‌ ನಾಯಕರು ಪ್ರಯತ್ನಿಸುತ್ತಿದ್ದಾರೆ. ನನ್ನ ಹಾಗೂ ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್‌ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಅವಧಿಯಲ್ಲಿ 100 ಹೊಸ ಪೋಲಿಸ್‌ ಠಾಣೆಗಳ ಕಟ್ಟಡಕ್ಕೆ 200 ಕೋಟಿ ಮಂಜೂರು ಮಾಡಲಾಗಿದೆ. ಸೈಬರ್‌ ಕ್ರೈಂ ಮಟ್ಟ ಹಾಕಲು ಸುಖೋ ವಿಶೇಷ ಯೋಜನೆ ರೂಪಿಸಿ ತರಬೇತಿ ನೀಡಲಾಗುತ್ತಿದೆ. ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳ ಸಂಬಂಧಿಸಿದಂತೆ ಮಹಿಳಾ ಪೋಲಿಸ್‌ ಠಾಣೆ ಜಿಲ್ಲಾ ಕೇಂದ್ರ ಸ್ಥಾಪಿಸಲಾಗಿದೆ. ಪ್ರತ್ಯೇಕ 112 ಉಚಿತ ಸಹಾಯವಾಣಿ ತೆರೆಯಲಾಗಿದೆ ಎಂದರು.

ಇದಲ್ಲದೆ ರಾಜ್ಯದಲ್ಲಿ ಏಳು ಎಫ್‌ಎಸ್‌ಎಲ್‌ ಲ್ಯಾಬ್‌ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈಗ ಎಫ್‌ ಎಸ್‌ಎಲ್‌ ವಿಶ್ವವಿದ್ಯಾಲಯದ ಸ್ಥಾಪನೆಗೆ ಬೇಡಿಕೆ ಇಡಲಾಗಿದ್ದು ಕೇಂದ್ರ ಸರಕಾರವು ನಮ್ಮ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಎಲ್ಲರ ನೆಮ್ಮದಿ ಕಾಯುವ ಪೋಲಿಸರ ನೆಮ್ಮದಿಗಾಗಿ 11 ಸಾವಿರ ಕೋಟಿ ರೂ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡುವ ಯೋಜನೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬೇಲಿ ಎದ್ದು ಹೊಲ ಮೇಯುವಂತಹ ಪರಿಸ್ಥಿತಿ ಇದ್ದು, ಎಲ್ಲವು ಸರಿಯಾಗಿಲ್ಲ ಅನ್ನೋದು ನಿಜ, ಪಿಎಸ್‌ಐ ಅಕ್ರಮದಲ್ಲಿ ಸಾಕ್ಷಿಗಳು ಸಿಕ್ಕ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತಪ್ಪಿತಸ್ಥರಿಗೆ ಶಿಕ್ಷೆಗೊಳಪಡಿಸಿ ಪಾಠ ಕಲಿಸಲಾಗಿದೆ. ಯಾರೇ ತಪ್ಪು ಮಾಡಿದರೂ ಪೋಲಿಸ್‌ ಇಲಾಖೆ ದೂರುವುದು ಸರಿಯಲ್ಲ. ಕಾಂಗ್ರೆಸ್‌ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದರೂ ಅವರ ಅಧಿಕಾರ ಇರೋವರೆಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ. ಕಾಂಗ್ರೆಸ್‌ ಮಾಡಿದ ತಪ್ಪಿಗೆ ಇಂದು ಇಂತಹ ಪ್ರಕರಣಗಳು ನಡೆದಿವೆ ಎಂದರು.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಗರದಲ್ಲಿ ನಿಗಾ ವಹಿಸಲು 56 ಸಿಸಿಟಿವಿ, ಎರಡು ಧ್ವನಿವರ್ದಕ ಅಳವಡಿಸಲಾಗಿದೆ. ಸ್ಥಳಿಯ ಪೋಲಿಸ್‌ ಇಲಾಖೆ ಕಾರ್ಯ ಶ್ಲಾಘನೀಯ. ಸುಮಾರು ವರ್ಷಗಳ ಕನಸು ನನಸಾಗಿದೆ. ನಗರದ ಮತ್ತೂಂದು ಪೊಲೀಸ್‌ ಠಾಣೆಗಾಗಿ ನಗರಸಭೆಯು 25 ಗುಂಟೆ ಜಾಗ ಕಲ್ಪಿಸಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವರು ಈಗಾಗಲೇ ಅನುಮೋದನೆ ಕೊಟ್ಟಿದ್ದಾರೆ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಸಂಜೀವ ಪಾಟೀಲ್‌, ಡಿವೈಎಸ್ಪಿ ಬಸವರಾಜ ಎಲಿಗಾರ, ಬೆಳಗಾವಿ ಪೋಲಿಸ್‌ ಉಪಅಧೀಕ್ಷಕ ಮಹಾನಿಂಗ ನಂದಗಾವಿ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಹಾಲಶುಗರ್‌ ಕಾರ್ಖಾನೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಸಿಪಿಐ ಸಂಗಮೇಶ ಹೊಸಮನಿ, ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ಅನಿಲ ಕುಂಭಾರ, ತಹಶೀಲ್ದಾರ ಡಾ| ಮೋಹನ ಭಸೆ¾, ಬಿಇಓ ರೇವತಿ ಮಠದ ಉಪಸ್ಥಿತರಿದ್ದರು. ಶಹರ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಕೃಷ್ಣವೇಣಿ ಗುರ್ಲಹೊಸೂರ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next