Advertisement

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ಆರು ಮಂದಿ ಸೆರೆ

11:26 AM Apr 17, 2022 | Team Udayavani |

ಕಲಬುರಗಿ: ಕಳೆದ ಅಕ್ಟೋಬರ್‌ ತಿಂಗಳಲ್ಲಿ ನಡೆದ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡ ಮತ್ತೆ ಆರು ಜನರನ್ನು ಬಂಧಿಸಿದೆ.

Advertisement

ಮೂವರು ಪರೀಕ್ಷೆ ಮೇಲ್ವಿಚಾರಕರು, ಜೈಲ್‌ ವಾರ್ಡನ್‌ ಬಂಧಿತರಲ್ಲಿ ಸೇರಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿದಂತಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳಾದ ರಾಯಚೂರಿನ ಪ್ರವೀಣ ಕುಮಾರ ಕೆ., ರಾಯಚೂರಿನ ಜೈಲ್‌ ವಾರ್ಡನ್‌ ಚೇತನ ನಂದಗಾಂವ, ಕಲಬುರಗಿಯ ಅರುಣ ಮತ್ತು ಅಕ್ರಮ ನಡೆದಿರುವ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸಾವಿತ್ರಿ, ಸಿದ್ಧಮ್ಮ ಹಾಗೂ ಸುಮಾ ಬಂಧಿತರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರದ ಹಿಂದೆ ವಿರೇಶ ನಿಡಗುಂದಾ ಎಂಬಾತನನ್ನು ಸಿಐಡಿ ತಂಡದವರು ಬಂಧಿಸಿದ್ದರು. ಆತನ ತಂದೆ ಜಿಲ್ಲೆಯ ಸೇಡಂ ಠಾಣೆಯಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿಐಡಿ ಪೊಲೀಸರು ಇಲಾಖೆಯ ಸಿಬ್ಬಂದಿ ಪುತ್ರನ ಮಗ ಎಂಬುದನ್ನು ಲೆಕ್ಕಿಸದೇ ಬಂಧಿಸುವ ಮೂಲಕ ತನಿಖೆ ಪ್ರಖರತೆ ತೀವ್ರಗೊಳಿಸಿದ್ದಾರೆ.

ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಸಿಐಡಿ ಎಸ್ಪಿ ರಾಘವೇಂದ್ರ ಭಟ್‌, ಡಿವೈ ಎಸ್ಪಿಗಳಾದ ಎಸ್‌.ವಿ.ಪಾಟೀಲ, ಪ್ರಕಾಶ ರಾಠೊಡ ಹಾಗೂ ತಂಡದವರು ಕಳೆದ 14 ದಿನಗಳಿಂದ ತನಿಖೆ ನಡೆಸುತ್ತಿದ್ದಾರೆ. ಈಗ ಪ್ರಕರಣದ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದೆ.

ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಸಿಐಡಿ ಇನ್‌ಸ್ಪೆಕ್ಟರ್‌ ನಗರದ ಚೌಕ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಿಜೆಪಿಯ ಪ್ರಭಾವಿ ನಾಯಕಿಯೊಬ್ಬರಿಗೆ ಸೇರಿರುವ ನಗರದ ಜಿಡಿಎ ಬಡಾವಣೆಯ ಗೋಕುಲ್‌ ನಗರದ ಜ್ಞಾನಜ್ಯೋತಿ ಸ್ಕೂಲ್‌ ಪರೀಕ್ಷಾ ಕೇಂದ್ರದಲ್ಲಿ ಬಂಧಿತರೆಲ್ಲ ಪರೀಕ್ಷೆ ಬರೆದಿದ್ದರು.

Advertisement

ಬಂಧಿತನಾಗಿದ್ದ ವಿರೇಶ ಒಎಂಆರ್‌ ಸೀಟ್‌ಲ್ಲಿ ಕೇವಲ 21 ಪ್ರಶ್ನೆಗೆ ಉತ್ತರ ಬರೆದಿದ್ದ. ಆದರೆ, ನಂತರ ನೋಡಿದಾಗ ಆತ ಎಲ್ಲ ನೂರು ಪ್ರಶ್ನೆಗಳಿಗೆ ಉತ್ತರಿಸಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಸಿಐಡಿ ತಂಡದವರು ತನಿಖೆ ಚುರುಕುಗೊಳಿಸಿದ್ದರು. ಈಗ ಮತ್ತೆ ಆರು ಜನರನ್ನು ಬಂಧಿಸುವ ಮೂಲಕ ತನಿಖೆಯು ಒಂದು ಹಂತ ತಲುಪಿದಂತಾಗಿದೆ. ಇದರ ಬೆನ್ನಲ್ಲಿಯೇ ಇನ್ನೊಂದು ರೀತಿಯಲ್ಲಿ ತನಿಖೆ ನಡೆಸಲು ಸಿಐಡಿ ತಂಡದವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ಆರು ಜನರನ್ನು ಶನಿವಾರ ಸಂಜೆ ಸಿಐಡಿ ತಂಡದವರು ಇಲ್ಲಿನ 4ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ತನಿಖೆ ಮುಂದುವರಿಸಲು, ಇನ್ನಷ್ಟು ಮಾಹಿತಿ ಕಲೆ ಹಾಕಲು ಬಂಧಿತರನ್ನು ಇನ್ನಷ್ಟು ವಿಚಾರಣೆ ಮಾಡುವುದಿದೆ. ಆದ್ದರಿಂದ ಎಲ್ಲರನ್ನು ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಆರೋಪಿತರ ಪರ ವಕೀಲರು ಆಕ್ಷೇಪಿಸಿ, ಈಗಾಗಲೇ ವಿಚಾರಣೆ ಮುಗಿಸಿದ್ದಾರೆ. ಹೀಗಾಗಿ ಸಿಐಡಿ ವಶಕ್ಕೆ ನೀಡದೇ, ನ್ಯಾಯಾಂಗ ವಶಕ್ಕೆ ನೀಡಬೇಕು. ಇಲ್ಲವೇ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿರೇಶನನ್ನು ಕಸ್ಟಡಿಗೆ ಪಡೆದಿದ್ದ ಸಿಐಡಿ ತಂಡದವರು ಶನಿವಾರ ಮರಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ಪೂರ್ಣವಾಗಿದೆ ಎಂದು ಹೇಳಿದಾಗ ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ಪೊಲೀಸರು ಆತನನ್ನು ಕೇಂದ್ರ ಕಾರಾಗೃಹಕ್ಕೆ ಕರೆದು ಕೊಂಡು ಹೋದರು. ಒಟ್ಟಾರೆ ಪಿಎಸ್‌ಐ ನೇಮ ಕಾತಿಯ ಸಿಇಟಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಸಿಐಡಿ ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next