Advertisement

ಕೋಟ್ಯಂತರ ರೂ. ಸ್ನೇಹಿತರ ಮನೆಯಲ್ಲಿಇಟ್ಟಿದ್ದ ಹೆಡ್‌ಕಾನ್‌ಸ್ಟೆಬಲ್‌ ಶ್ರೀಧರ್‌

01:47 AM May 19, 2022 | Team Udayavani |

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಡ್‌ಕಾನ್‌ಸ್ಟೇಬಲ್‌ ಶ್ರೀಧರ್‌ ನಿವಾಸದಲ್ಲಿ ಸಿಕ್ಕ ಹಣ, ಅದಕ್ಕೂ ಮೊದಲು ಆತನ ಸ್ನೇಹಿತರ ಮನೆಗಳಲ್ಲಿ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

Advertisement

ಪಿಎಸ್‌ಐ ಅಕ್ರಮದ ರೂವಾರಿ ಡಿವೈಎಸ್ಪಿ ಶಾಂತಕುಮಾರ್‌ ಮತ್ತು ಹೆಡ್‌ಕಾನ್‌ಸ್ಟೇಬಲ್‌ ಶ್ರೀಧರ್‌ ಅಭ್ಯರ್ಥಿಗಳಿಂದ ಪಡೆದಿದ್ದ ಕೋಟ್ಯಂತರ ರೂ. ಪೈಕಿ ಸ್ವಲ್ಪ ಶಾಂತಕುಮಾರ್‌ ಮನೆಯಲ್ಲಿ ಬಾಕಿ ಹಣವನ್ನು ಶ್ರೀಧರ್‌ ಮನೆಯಲ್ಲಿ ಇಟ್ಟುಕೊಂಡಿದ್ದರು.

ಆದರೆ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಾಂತಕುಮಾರ್‌ ತನ್ನ ಮನೆಯಲ್ಲಿದ್ದ ಹಣವನ್ನು ಶ್ರೀಧರ್‌ ಮನೆಯಲ್ಲಿ ಇಡಲು ಸೂಚಿಸಿದ್ದ. ಇನ್ನು ಶ್ರೀಧರ್‌ ಕೂಡ ಒಂದೂವರೆ ಕೋಟಿ ರೂ. ಅನ್ನು ತನ್ನ ಆರು ಮಂದಿ ಸ್ನೇಹಿತರಿಗೆ ಹಂಚಿ ಕೆಲ ಕಾಲ ರಹಸ್ಯವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದ್ದ. ಈ ಮಧ್ಯೆ ಶ್ರೀಧರ್‌ ಬಂಧನವಾಗುತ್ತಿದ್ದಂತೆ ಹೆದರಿದ ಆತನ ಸ್ನೇಹಿತರು ತಮ್ಮ ಬಳಿಯಿದ್ದ ಹಣವನ್ನು ಆತನ ಮನೆಗೆ ತಂದು ಕೊಟ್ಟು ಹೋಗಿದ್ದರು. ಹೀಗಾಗಿ ಆತನ ಮನೆ ಮೇಲೆ ದಾಳಿ ನಡೆಸಿದಾಗ ಮೊದಲಿಗೆ 16 ಲಕ್ಷ ರೂ., ಬಳಿಕ 1.55 ಕೋಟಿ ರೂ. ಪತ್ತೆಯಾಗಿತ್ತು. ಈ ಹಿಂದೆ ಮಧ್ಯವರ್ತಿ ಕೇಶವಮೂರ್ತಿ ನಿವಾಸದಲ್ಲಿ 30 ಲಕ್ಷ ರೂ. ಅನ್ನು ಜಪ್ತಿ ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಬೆಂಗಳೂರಿನಲ್ಲೇ ಇದುವರೆಗೆ ಒಟ್ಟು 2.1 ಕೋಟಿ ರೂ. ಅನ್ನು ಜಪ್ತಿ ಮಾಡಲಾಗಿದೆ.

ಜಾರಿ ನಿರ್ದೇಶನಾಲಯ (ಇ.ಡಿ.)  ಎಂಟ್ರಿ?
ಪಿಎಸ್‌ಐ ಅಕ್ರಮದಲ್ಲಿ ಕೋಟಿ-ಕೋಟಿ ರೂ. ಹಣ ವರ್ಗಾವಣೆ ಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಜಾರಿ ನಿರ್ದೇಶ ನಾಲಯ (ಇ.ಡಿ.) ಅಧಿಕಾರಿಗಳು ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮತ್ತೊಬ್ಬ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ ಬಂಧನ
ಪ್ರಕರಣದಲ್ಲಿ ಮತ್ತೊಬ್ಬ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಇನ್‌ಸ್ಪೆಕ್ಟರ್‌ ಮಧು ಬಂಧಿತ. ಪಿಎಸ್‌ಐ ಅಭ್ಯರ್ಥಿಗಳಿಂದ ಮಧು 40 ಲಕ್ಷದಿಂದ 1 ಕೋಟಿ ರೂ.ವರೆಗೆ ಡೀಲ್‌ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಈ ಬಾರಿಯ 545 ಅಭ್ಯರ್ಥಿಗಳ ಪೈಕಿ 30 ಮಂದಿ ಅಭ್ಯರ್ಥಿಗಳನ್ನು ಮಧು ಶಾಂತಕುಮಾರ್‌ಗೆ ಪರಿಚಯಿಸಿಕೊಟ್ಟಿದ್ದ. ಅವರಿಂದ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ತಲಾ 50-60 ಲಕ್ಷ ರೂ.ವರೆಗೆ ಡೀಲ್‌ ನಡೆಸಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next