Advertisement

PSI ನೇಮಕ ಅಕ್ರಮ: ಸರ್ಕಾರ ಮರುಪರೀಕ್ಷೆ ನಡೆಸಬಹುದು

09:43 PM Aug 04, 2023 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆ ನಡೆಸಬಹುದು ಎಂಬುದು ನಮ್ಮ ಅಭಿಪ್ರಾಯ ಎಂದು ಹೈಕೋರ್ಟ್‌ ಮೌಖೀಕವಾಗಿ ಹೇಳಿದೆ.

Advertisement

ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖೀತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆಗೆ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳು ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಹಾಗೂ ನ್ಯಾ. ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿದ್ದವು.

ಈ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಪ್ರಕರಣದಲ್ಲಿ ಹಿರಿಯ ವಕೀಲರು ವಾದ ಮಂಡಿಸಬೇಕಿದ್ದು, ಸ್ವಲ್ಪ ಹೊತ್ತಿನವರೆಗೆ ಅರ್ಜಿಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು. ಸ್ವಲ್ಪ ಹೊತ್ತಿನವರೆಗೆ ಆಗಲ್ಲ, ಬೇಕಿದ್ದರೆ ಸೋಮವಾರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ಹೇಳಿತು.

ಅಲ್ಲದೆ, ಸರ್ಕಾರ ಮರು ಪರೀಕ್ಷೆ ನಡೆಸಿದರೆ ಸಮಸ್ಯೆ ಏನು? ನೀವು (ಅರ್ಜಿದಾರರು) ಪರೀಕ್ಷೆ ಬರೆದು ಪಾಸ್‌ ಆಗಬಹುದಲ್ಲವೇ? ಅದೇ ರೀತಿ ಬೇರೆಯವರೂ ಪರೀಕ್ಷೆ ಬರೆಯಲಿ. ಸರ್ಕಾರ ಮರು ಪರೀಕ್ಷೆ ನಡೆಸಬಹುದು ಎಂಬುದು ನಮ್ಮ ಅಭಿಪ್ರಾಯ ಎಂದು ಮೌಖೀಕವಾಗಿ ಹೇಳಿದ ನ್ಯಾಯಪೀಠ, ಸೋಮವಾರ ವಿಚಾರಣೆ ನಡೆಸೋಣ ಆದರೆ, ಮೇಲ್ನೋಟಕ್ಕೆ (ಪ್ರೈಮಾ ಫೇಸಿ) ನಾವು ನಿಮ್ಮ ಜೊತೆಗೆ ಇಲ್ಲ ಎಂದು ನ್ಯಾಯಪೀಠ ಅರ್ಜಿದಾರರ ಪರ ವಕೀಲರಿಗೆ ಹೇಳಿತು.

ಇದೇ ವೇಳೆ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಕೋರ್ಟ್‌ ಹಾಲ್‌ ಪ್ರವೇಶಿಸಿದರು. ಆಗ ಅಡ್ವೋಕೇಟ್‌ ಜನರಲ್‌ ಅವರನ್ನುದ್ದೇಶಿಸಿ, ಸರ್ಕಾರ ಮರು ಪರೀಕ್ಷೆ ನಡೆಸಬಹುದು ಎಂಬುದು ನಮ್ಮ ಅಭಿಪ್ರಾಯ. ಸರ್ಕಾರದ ಪ್ರಕ್ರಿಯೆಯಲ್ಲಿ ಅಡ್ಡಿ ಉಂಟು ಮಾಡುವುದೇಕೆ ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದ್ದೇವೆ ಎಂದು ನ್ಯಾಯಪೀಠ ಅಡ್ವೋಕೇಟ್‌ ಜನರಲ್‌ ಅವರ ಗಮನಕ್ಕೆ ತಂದಿತು. ಈ ವೇಳೆ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಲು ಅಡ್ವೋಕೇಟ್‌ ಜನರಲ್‌ ಮುಂದಾದರು. ಆಗ ಅರ್ಜಿದಾರರ ಪರ ಕಿರಿಯ ವಕೀಲರು ಬಂದಿದ್ದಾರೆ, ಅವರಿಗೆ ಅಷ್ಟೊಂದು ಮಾಹಿತಿ ಇಲ್ಲ ಎನಿಸುತ್ತದೆ. ಹಿರಿಯ ವಕೀಲರು ಬರಬೇಕಂತೆ ಹಾಗಾಗಿ, ಸೋಮವಾರ ಬೆಳಿಗ್ಗೆ 10.30ಕ್ಕೆ ಪ್ರಕರಣದ ವಿಚಾರಣೆ ನಡೆಸೋಣ ಎಂದು ನ್ಯಾಯಪೀಠ ಹೇಳಿತು. ಅದಕ್ಕೆ ಅಡ್ವೋಕೇಟ್‌ ಜನರಲ್‌ ಸಮ್ಮತಿ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next