Advertisement

ಪಿಎಸ್‌ಐ ಅಕ್ರಮ: ಕಲ್ಯಾಣದಲ್ಲಿ ಮತ್ತೆ ಢವ..ಢವ..ಶುರು!

03:36 PM Aug 06, 2022 | Team Udayavani |

ಕಲಬುರಗಿ: ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಮತ್ತು ಮುಗಿದೆ ಹೋಯಿತು ಎಂದು ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ತೊಡಗಿ ಸಿಐಡಿ ಕುಣಿಕೆಯಿಂದ ಪಾರಾಗಿದ್ದ ಹಲವರು ನಿಟ್ಟುಸಿರು ಬಿಡುತ್ತಿರುವಾಗಲೇ, ಸಿಐಡಿ ಅಧಿಕಾರಿಗಳು ದೊಡ್ಡ ಶಾಕ್‌ ನೀಡುವ ಮುಖೇನ ಮೂರನೇ ಇನ್ನಿಂಗ್ಸ್‌ ಶುರು ಮಾಡಿದ್ದಾರೆ. ಇದರೊಂದಿಗೆ ಅಕ್ರಮದಲ್ಲಿ ಪಾಲ್ಗೊಂಡಿರುವ ಇನ್ನಷ್ಟು ಮುಖಗಳು ಬಹಿರಂಗ ಆಗುವುದು ಗ್ಯಾರಂಟಿ ಆಗಿದೆ.

Advertisement

ಅದರೊಂದಿಗೆ ಇನ್ನಷ್ಟು ಪೊಲೀಸ್‌ ಅಧಿಕಾರಿಗಳು, ಪ್ರಾಧ್ಯಾಪಕರು, ಉತ್ತರ ಕೊಟ್ಟವರು, ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಹಾಗೂ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ ಜತೆಗೂಡಿಕೊಂಡು ನಡೆಸಿರುವ ಬ್ಲೂಟೂತ್‌ ಅಕ್ರಮ ಬಯಲಾಗಲಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮೂರನೇ ಇನ್ನಿಂಗ್ಸ್‌ ಆರಂಭದಲ್ಲೇ ದೇವದುರ್ಗದ ಪೇದೆ ಕಲ್ಲಪ್ಪ ಅಲ್ಲಾಪುರ, ಯಾದಗಿರಿ ಜಿಲ್ಲೆಯ ಮುದ್ನಾಳದಲ್ಲಿ ಆರೋಗ್ಯ ಕೇಂದ್ರದಲ್ಲಿ ಎಫ್‌ಡಿಎ ಆಗಿ ಕೆಲಸ ಮಾಡುತ್ತಿದ್ದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ ಅಳಿಯ ಸಿದ್ದುಗೌಡ ಪಾಟೀಲ ಸೇರಿದಂತೆ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ್ದ ಜೇವರ್ಗಿಯ ಭಗವಂತರಾಯ ಜೋಗೂರು ಸೇರಿದಂತೆ 8 ಜನರನ್ನು ಬಂಧಿಸಿರುವುದು ಈಗ ದೊಡ್ಡ ಸದ್ದು ಮಾಡುತ್ತಿದೆ. ಈ ಘಟನೆಯಿಂದ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಬಹುತೇಕದಲ್ಲಿ ಢವ.. ಢವ..ಶುರುವಾಗಿದೆ.

ಹೊಸ ಕಾಲೇಜುಗಳ ಮುಖ ಬಯಲು

ಮೂರನೇ ಇನ್ನಿಂಗ್ಸ್‌ನಲ್ಲಿ ಹೊಸ ಮೂರು ಕಾಲೇಜುಗಳ ಮುಖ ಬಯಲಾಗಿದೆ. ಒಂದು ಪ್ರತಿಷ್ಠಿಯ ಎಸ್‌ಬಿಆರ್‌ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಕಾಲೇಜು, ಗೋದುತಾಯಿ ಎಂಜಿನಿಯರಿಂಗ್‌ ಕಾಲೇಜು ಇನ್ನೊಂದು ಸರಕಾರಿ ಪ್ರಥಮ ದರ್ಜೆ ಕಾಲೇಜು(ಸ್ವಯತ್ತೆ). ಇಡೀ ಪ್ರಕರಣದಲ್ಲಿ ಈಗಾಗಲೇ ಜ್ಞಾನಜ್ಯೋತಿ ಶಾಲೆ, ಎಂ.ಎಸ್‌.ಇರಾನಿ ಕಾಲೇಜು ನೋಬೆಲ್‌ ಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಅಕ್ರಮ ಬಯಲಾಗಿತ್ತು. ಈಗ ಇನ್ನಷ್ಟು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಬಯಲಾಗಿದೆ. ಇದರಿಂದಾಗಿ ಇಡೀ ಶೈಕ್ಷಣಿಕ ವಲದಯದಲ್ಲಿ ತಲ್ಲಣ ಶುರುವಾಗಿದೆ.

ಇದನ್ನೂ ಓದಿ: ಮುಳುಗಿದ ಸೇತುವೆ ಮೇಲೆ ಬಸ್ ಸಂಚಾರ: ಸ್ಥಳೀಯರಿಂದ ತರಾಟೆ

Advertisement

ಕೆಲವರು ಮತ್ತೆ ಪರಾರಿ?

1954 ಪುಟಗಳ ಮೊದಲ ಚಾರ್ಜ್‌ಶೀಟ್‌ ಮತ್ತು ಎರಡನೆಯದ್ದು 1609 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಆಗುತ್ತಿದ್ದಂತೆ ಬಹುತೇಕ ಪ್ರಕರಣವೇ ಇಲ್ಲಿಗೆ ನಿಂತು ಹೋಗುತ್ತದೆಂದು ಬಹುತೇಕ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಎಫ್‌ ಡಿಎಗಳು, ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದ ಪ್ರಾಧ್ಯಾಪಕರು, ಪ್ರಾಂಶುಪಾಲರು ತುಸು ನಿಟ್ಟುಸಿರು ಬಿಟ್ಟಿದ್ದರು. ಅಲ್ಲದೆ, ಈಗಾಗಲೇ ತಮ್ಮ ಹೆಸರು ಬಹಿರಂಗ ಗೊಳ್ಳ ಬಹುದು ಎಂದು ಅಫಜಲಪುರ, ಗೌರ, ಆಲಮೇಲ್‌, ಸೊನ್ನ ಗ್ರಾಮಗಳಿಂದ ಪರಾರಿಯಾಗಿದ್ದವರು ಸದ್ದಿಲ್ಲದೆ ತಮ್ಮ ತಮ್ಮ ಊರುಗಳಲ್ಲಿ ಬಂದು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದರು. ಈಗ 8 ಜನರ ಬಂಧನವಾಗುತ್ತಿದ್ದಂತೆ ಎಲ್ಲರೂ ಪುನಃ ಪರಾರಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಅಧಿಕಾರಿಗಳ ಬಣ್ಣ ಬಯಲು?

ಮೂರನೇ ಇನ್ನಿಂಗ್ಸ್‌ನಲ್ಲಿ ಇನ್ನಷ್ಟು ಅಧಿಕಾರಿಗಳ ಬಣ್ಣ ಬಯಲಾಗುವ ಸಾಧ್ಯತೆ ನಿಚ್ಚಳವಾಗಿದೆ. ಅದರಲ್ಲೂ ಒಂದಿಬ್ಬರು ಹಿರಿಯರು ಮತ್ತು ಡಿವೈಎಸ್‌ಪಿ ರ್‍ಯಾಂಕಿನ ಅಧಿಕಾರಿಗಳ ಸಿಐಡಿ ಬಲೆಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಡಿವೈಎಸ್ಪಿ ಮಟ್ಟದ ಅಧಿಕಾರಿಗಳನ್ನು ಶೀಘ್ರವೇ ವಿಚಾರಣೆಗೆ ಕರೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿಯವರೆಗೆ ಒಟ್ಟು 52 ಜನರನ್ನು ಬಂಧನಕ್ಕೊಳಪಡಿಸಲಾಗಿದೆ. ಶುಕ್ರವಾರ ಬಂಧನಕ್ಕೊಳಗಾದ 8 ಜನರಲ್ಲಿ 6 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಓರ್ವನ್ನು ವಿವಿ ಪೊಲೀಸ್‌ ಠಾಣೆಗೆ ವಿಚಾರಣೆಗಾಗಿ ಮತ್ತು ಇನ್ನೋರ್ವ ವ್ಯಕ್ತಿಯನ್ನು ಗೌಪ್ಯವಾಗಿ ಇಡಲಾಗಿದೆ. ಸಿಐಡಿಯ ಈ ನಡವಳಿಕೆ ಬಹುತೇಕ ಅಧಿಕಾರಿಗಳಲ್ಲಿ ಅನುಮಾನ ಉಂಟು ಮಾಡಿದೆ. ಬಂಧಿತರ ವಿರುದ್ಧ ಅಶೋಕ ನಗರ ಪೊಲೀಸ್‌ ಠಾಣೆ, ಸ್ಟೇಷನ್‌ ಬಜಾರ್‌ ಮತ್ತು ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ತನಿಖೆ ಈಗ ಶುರುವಾಗಿದ್ದರಿಂದ ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆಯಲ್ಲೇ ಢವ..ಢವ..ಶುರುವಾಗಿದೆ.

ಆರ್ಡಿಪಿ ವ್ಯವಹಾರ ತನಿಖೆ?

ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ ನಡೆಸಿದ್ದಾರೆನ್ನಲಾಗಿರುವ ಇನ್ನಷ್ಟು ಹಣಕಾಸು ವ್ಯವಹಾರಗಳ ಕುರಿತು ಸಿಐಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಪಾಟೀಲ ಪಿಎಸ್‌ಐ ಅಭ್ಯರ್ಥಿಗಳಿಂದ ಪಡೆದಿರುವ ಹಣ ಹಲವು ಕಡೆಗಳಲ್ಲಿ ಹಲವು ಆಪ್ತರ ಹೆಸರಿನಲ್ಲಿ ಅಡಗಿಸಿಟ್ಟಿರುವ ಸಾಧ್ಯತೆಗಳಿದ್ದು, ಅದನ್ನು ಪಾಟೀಲ ಬಾಯಿಯಿಂದಲೇ ಬಿಡಿಸುವ ನಿಟ್ಟಿನಲ್ಲಿ ಗಂಭೀರ ಸ್ವರೂಪದ ವಿಚಾರಣೆ ನಡೆಯುತ್ತಿದೆ ಎಂದು ತಿಳಿದಿದೆ.

ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next