ಕಲಬುರಗಿ: ಭ್ರಷ್ಟಾಚಾರದ ಬ್ರಹ್ಮಾಂಡ ನಡೆದಿರುವ ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತಾದ ಸಿಒಡಿ ತನಿಖೆ ಹಳ್ಳ ಹಿಡಿಯುತ್ತಿದ್ದು, ಬೇಕಾದವರಿಗೆ ಅದರಲ್ಲೂ ಅವರದ್ದೇ ಪಕ್ಷದ ನಾಯಕರನ್ನು ರಕ್ಷಿಸುವ ಮೂಲಕ ಹಗರಣವನ್ನೇ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ಹಗರಣದಲ್ಲಿ ಯಾರನ್ನೂ ಬಿಡುವುದೇ ಇಲ್ಲ ಎಂಬುದಾಗಿ ಗೃಹ ಸಚಿವರು ಹೇಳುತ್ತಿರುವ ನಡುವೆ ಹಲವರನ್ನು ರಕ್ಷಿಸಲಾಗುತ್ತಿದೆ. ಇದಕ್ಕೆ ಈಗ ನಡೆಯುತ್ತಿರುವ ಆಮೆಗತಿಯ ತನಿಖೆಯೇ ಸಾಕ್ಷಿಯಾಗಿದೆ ಎಂದು ಹೇಳಿದರು.
ತನಿಖೆ ಹಾದಿ ನೋಡಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗಿತ್ತು. ಆದರೆ ತಮ್ಮೆಲ್ಲ ಹುಳುಕು ಹೊರ ಬರುತ್ತದೆ ಎಂದು ತಿಳಿದು ತನಿಖೆ ಹಾದಿಯನ್ನೇ ತಪ್ಪಿಸಲಾಗುತ್ತಿದೆ. ಇದನ್ನು ಜನ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಮುಂದೆ ಯಾವತ್ತೂ ಕ್ಷಮಿಸುವುದಿಲ್ಲ ಎಂದು ನುಡಿದರು.
ಆರೋಪಪಟ್ಟಿ ಸಲ್ಲಿಸಲು ಮೀನಾ ಮೇಷ: ಕಳೆದ ವರ್ಷ ಸೇಡಂ ತಾಲೂಕಿನಲ್ಲಿ 2500 ಎಕರೆ ಭೂಮಿಯಲ್ಲಿ ನಕಲಿ ಹೆಸರಿನ ಬೀಜ ಬಿತ್ತಿ ರೈತರು ನಷ್ಟ ಹೊಂದಿದ್ದಾರೆ. ಈ ಕುರಿತು ಮಳಖೇಡ ಹಾಗೂ ಕಲಬುರಗಿಯ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ತಪ್ಪಿತಸ್ಥರ ವಿರುದ್ಧ ಈಗಲೂ ಆರೋಪ ಪಟ್ಟಿ ಸಲ್ಲಿಸಿಲ್ಲ. ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ಮೀತಿ ಮೀರಿದ್ದು, ಗೊಬ್ಬರ ಅಭಾವಕ್ಕೆ ಸರ್ಕಾರದ ನೀತಿಯೇ ಕಾರಣವಾಗಿದೆ. ಕಂಪನಿಗಳಿಗೆ ಸಕಾಲಕ್ಕೆ ಸಬ್ಸಿಡಿ ಬಾರದಿರುವುದಕ್ಕೆ ಕಾರಣ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಗೊಬ್ಬರ ಸಿಗದಿದ್ದಕ್ಕೆ ರೈತರೇ ಬೀದಿಗಳಿಯಲಿದ್ದಾರೆ. ಇದಕ್ಕೆಲ್ಲ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಇನ್ನೂ ರಾಜ್ಯದ ಕೃಷಿ ಸಚಿವರಂತೂ ಭೇಟಿಯಾದ ನಂತರವಷ್ಟೇ ಯೋಜನೆ ಅನುದಾನ ಬಿಡುಗಡೆಯಾಗುತ್ತಿದೆ. ಒಟ್ಟಾರೆ ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದರು.
ಭೀಕ್ಷೆ ರೂಪದಲ್ಲಿ ಎಂಎಸ್ಪಿ: ಕೇಂದ್ರ ಸರ್ಕಾರ ತೊಗರಿಗೆ ಕೇವಲ 300ರೂ. ಮಾತ್ರ ಬೆಂಬಲ ಹೆಚ್ಚಿಸಿ ಭಿಕ್ಷೆಯಂತೆ ನೀಡಿದೆ. ಹೆಸರು ಬೆಳೆಗಿಂತ ತೊಗರಿ ಬೆಂಬಲ ಬೆಲೆಯೇ ಕಡಿಮೆಯಾಗುತ್ತಿದೆ ಎಂದು ಅಸಮಾಧಾನ ವ್ಯಾಪಕ ವ್ಯಕ್ತವಾಗುತ್ತಿದ್ದರೂ ಸರಿಪಡಿಸುವ ಕಾರ್ಯ ಬಿಜೆಪಿಯಿಂದ ಆಗುತ್ತಿಲ್ಲ. ರೈತರ ಆದಾಯ ದ್ವಿಗುಣ ಮಾಡಲಾಗುವುದು ಎಂದು ಮೋದಿ ಭಾಷಣ ಮಾಡುತ್ತಾರೆಯೇ ಹೊರತು ವಾಸ್ತವಾಗಿ ಯಾವುದೇ ಲಾಭವಾಗಿಲ್ಲ. ಏನಾದರೂ ಲಾಭವಾಗಿದ್ದರೆ ಅದಾನಿ, ಅಂಬಾನಿಗೆ ಮಾತ್ರ ಆಗಿದೆ ಎಂದು ವಾಗ್ಧಾಳಿ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಹಾಜರಿದ್ದರು.