Advertisement

ದಿಲ್ಲಿ ಅಂಗಳಕ್ಕೆ ಪರೀಕ್ಷೆ ಅಕ್ರಮ, ಮುಲಾಜೇ ಬೇಡ : ಸಿಎಂಗೆ ವರಿಷ್ಠರ ತಾಕೀತು

10:47 AM Apr 25, 2022 | Team Udayavani |

ಕಲಬುರಗಿ : ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಈಗ ಬಿಜೆಪಿ ವರಿಷ್ಠರ ಅಂಗಳ ತಲುಪಿದೆ. ಕಾಲಬುಡದಲ್ಲೇ ವಿಧಾನಸಭೆ ಚುನಾವಣೆ ಇರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ವರಿಷ್ಠರು ಕಟ್ಟಪ್ಪಣೆ ಹೊರಡಿಸಿದ್ದಾರೆ.

Advertisement

ಅಕ್ರಮದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತಿತರ ಕೆಲವರ ಬಂಧನವಾಗದಿರುವ ಕುರಿತು ರಾಜ್ಯದ ಸಚಿವರೇ ಬಿಜೆಪಿ ವರಿಷ್ಠ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರದ ಹಿರಿಯ ಸಚಿವರೊಬ್ಬರು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪ್ರಕರಣದಿಂದ ಸರಕಾರದ ಇಮೇಜ್‌ಗೆ ಧಕ್ಕೆ ಬರುತ್ತಿದೆ. ಚುನಾವಣೆ ಹತ್ತಿರ ಇರುವುದರಿಂದ ವಿನಾಕಾರಣ ವಿವಾದ ಮೈಮೇಲೆ ಎಳೆದುಕೊಳ್ಳುವುದು ಬೇಡ. ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಿರಲಿ, ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದಾರೆ. ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ದಂಧೆ ಇಷ್ಟು ವ್ಯವಸ್ಥಿತವಾಗಿ ನಡೆದಿದ್ದರೂ ಸರಕಾರದ ಗಮನಕ್ಕೆ ಬಾರದೆ ಇರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಗೊತ್ತಾದ ತತ್‌ಕ್ಷಣ ಕ್ರಮಕ್ಕೆ ಕಠಿನ ಮುಂದಾಗದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲನನ್ನು 13 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ. ಈತನಿಗೆ ಪರಾರಿಯಾಗಲು ಸಹಕರಿಸಿದ ಆರೋಪದ ಮೇರೆಗೆ ಅಫ‌ಜಲಪುರ ತಾ.ಪಂ. ಮಾಜಿ ಸದಸ್ಯ ಮಲ್ಲುಗೌಡ ಬಿದನೂರ ಎಂಬಾತನನ್ನು ಕೂಡ ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 15ಕ್ಕೇರಿದೆ.

ಎಂಜಿನಿಯರ್‌ ಪರೀಕ್ಷೆಯಲ್ಲೂ ಅಕ್ರಮ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ನೇಮಕಾತಿ ಮತ್ತಿತರ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ಕುರಿತಾಗಿ “ಉದಯವಾಣಿ’ ಹಿಂದಿನಿಂದಲೂ ಪ್ರಸ್ತಾವಿಸುತ್ತ ಬಂದಿತ್ತು. ಈಗ ಲಾಡ್ಜ್ನಲ್ಲಿ ಕುಳಿತು ಬ್ಲೂಟೂತ್‌ ಮೂಲಕ ಉತ್ತರ ಹೇಳುತ್ತಿರುವ ವೀಡಿಯೋ ಬಹಿರಂಗವಾಗಿದ್ದು, ಈ ಕುರಿತು ತನಿಖೆ ಸಮಗ್ರ ನಡೆಯಬೇಕಿದೆ.

ಹಾಲ್‌ ಟಿಕೆಟ್‌, ಒಎಂಆರ್‌ ಹಾಳೆ ಪತ್ತೆ!
ಬಂಧಿತ ಆರ್‌.ಡಿ. ಪಾಟೀಲ ಮನೆಯಲ್ಲಿ ಸಿಐಡಿ ಪೊಲೀಸರು ಶೋಧ ನಡೆಸಿದ್ದು, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ನೇಮಕಾತಿ ಪರೀಕ್ಷೆಯ ಹಾಲ್‌ ಟಿಕೆಟ್‌ ಮತ್ತು ಒಎಂಆರ್‌ ಶೀಟ್‌ ಮತ್ತಿತರ ವಸ್ತುಗಳು ದೊರಕಿವೆ. ನೀರಾವರಿ ಇಲಾಖೆ ಎಂಜಿನಿಯರ್‌ ಮಂಜುನಾಥ ಮೇಳಕುಂದಾ ಮನೆ ಮೇಲೆ ಈ ಹಿಂದೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾಗ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ದೊರೆತಿದ್ದವು. ಮಂಜುನಾಥ 2 ವಾರಗಳಿಂದ ನಾಪತ್ತೆಯಾಗಿದ್ದಾನೆ.

Advertisement

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿ ಅಕ್ರಮ ನಡೆದಿದೆ. ಸಮಗ್ರ ತನಿಖೆ ನಡೆಸಲು ಸೂಚಿಸಲಾಗಿದೆ. ಎಷ್ಟೇ ಪ್ರಭಾವಿ, ಚಾಣಾಕ್ಷ ಇದ್ದರೂ ಬಂಧಿಸಿ ತನಿಖೆಗೆ ಒಳಪಡಿಸಲಾಗುವುದು.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next