ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಗುರುವಾರ ರಾತ್ರಿ ಮನೆಯಿಂದ ಪರಾರಿಯಾದ ಬೆನ್ನಲ್ಲೇ ಅಜ್ಞಾತ ಸ್ಥಳದಿಂದ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.
ಜನ ಬಯಸಿದರೆ 2000 23ರ ಚುನಾವಣೆಯಲ್ಲಿ ತಾವು ಕಣಕ್ಕಿಳಿಯಲು ತಯಾರಾಗಿದ್ದೇನೆ ಎನ್ನುವ ಸಂದೇಶವನ್ನು ರವಾನೆ ಮಾಡುವ ಮೂಲಕ ಅಫ್ಜಲ್ಪುರ ವಿಧಾನಸಭಾ ಕ್ಷೇತ್ರವಲ್ಲದೆ ರಾಜ್ಯದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದಾರೆ.
ವಿಡಿಯೋದಲ್ಲಿ ತಮ್ಮ ಅಭಿಮಾನಿ ಕುಲಕ್ಕೆ ನಮಸ್ಕಾರ ಹೇಳಿರುವ ರುದ್ರಗೌಡ ಪಾಟೀಲ, ‘ರಾಜಕೀಯ ಕುತಂತ್ರ ಮಾಡಿ ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ನನ್ನನ್ನು ಹಾಗೂ ಸಹೋದರ ಮಹಾಂತೇಶ ಪಾಟೀಲ ಅವರನ್ನು ಸಿಲುಕಿಸಲಾಗಿದೆ. ಕೆಲ ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿ ವರ್ತಿಸಿದಾರೆ. ನನ್ನನ್ನು ಸಂಪೂರ್ಣವಾಗಿ ಮುಗಿಸುವ ಕುತಂತ್ರ ಹೆಣೆದಿದ್ದಾರೆ. ಅಫಜಲಪುರ ಕ್ಷೇತ್ರದ ಜನರು ಬಯಸಿದರೆ, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವೆ’ ಎಂದು ಹೇಳಿದ್ದಾರೆ. ಈ ವಿಡಿಯೋ ರಾತೋರಾತ್ರಿ ದೊಡ್ಡ ಸಂಚಲನೆ ಉಂಟುಮಾಡಿದೆ.
ಈಗಷ್ಟೇ ಶರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದ ಅವರು, ನ್ಯಾಯಾಲಯಕ್ಕೆ ತಪ್ಪು ವಿಳಾಸವನ್ನು ನೀಡಿದ್ದರು ಎನ್ನುವ ಕಾರಣಕ್ಕೆ ಸಿಐಡಿಯಿಂದ 3 ನೋಟಿಸುಗಳನ್ನು ಕೂಡ ಪಡೆದಿದ್ದರು. ಇತ್ತೀಚೆಗೆ ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ ತುಮಕೂರಲ್ಲಿ ಪ್ರಕರಣ ದಾಖಲೆಯಾಗಿರುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅವರನ್ನು ಹುಡುಕುತ್ತಿದ್ದರು. ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮನೆಯಲ್ಲಿ ತಪಾಸಣೆ ಮಾಡುವ ವೇಳೆ ಆರ್‌ಡಿ ಪಾಟೀಲ್ ಹಾಜರಿದ್ದರು ಎನ್ನುವ ಮಾಹಿತಿ ಪಡೆದಿದ್ದ ಸಿಐಡಿ ಅಧಿಕಾರಿಗಳು ದಾಳಿ ಮಾಡಿದಾಗ ಪಾಟೀಲ್ ಪರಾರಿಯಾಗಿದ್ದರು. ಈಗ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಹರಿಯ ಬಿಟ್ಟಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ವೈರಲ್ ಆಗಿದೆ. ಇದು ಈಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.