ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿರುವುದರಿಂದ ಪಿಎಸ್‌ಐ ನೇಮಕಾತಿ ಅಕ್ರಮ ಬಯಲಿಗೆ ಬಂದಿದೆ. ಹಿಂದೆ ಅನೇಕ ಅಕ್ರಮಗಳ ಬಗ್ಗೆ ಆರೋಪ ಬಂದಿದ್ದರೂ, ಅಂದಿನ ಸರ್ಕಾರಗಳು ಮುಚ್ಚಿ ಹಾಕಿದ್ದವು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್ ಐ ಅಕ್ರಮ ನೇಮಕ ಕುರಿತು ಸಿಎಂ ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದಾರೆ. ಹಿಂದೆ ಕೂಡ ಅನೇಕ ಸರ್ಕಾರದ ಮೇಲೆ ಆಪಾದನೆ ಬಂದಿತ್ತು. ಆದರೆ, ಅದನ್ನು ಮುಚ್ಚಿ ಹಾಕಿದ್ದರು.
ಬೊಮ್ಮಾಯಿಯವರು ಅಧಿಕಾರಿಗಳಿಗೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಹೀಗಾಗಿ ಎಡಿಜಿಪಿ ಬಂಧನವಾಗಿದೆ. ಬೇರೆ ಸರ್ಕಾರ ಇದ್ದಿದ್ದರೆ ಈ ಪ್ರಕರಣ ಹೊರಗೆ ಬರುತ್ತಿರಲಿಲ್ಲ ಎಂದು ಹೇಳಿದರು.
ವಿಪಕ್ಷ ನಾಯಕರು, ಕುಮಾರಸ್ವಾಮಿ ಕೂಡ ಎಡಿಜಿಪಿ ಹುದ್ದೆಯವರನ್ನೂ ಬಂಧನ ಮಾಡಿದ್ದಾರೆ ಎಂದು ಹೇಳುತ್ತಾರೆ. ಜೊತೆಗೆ ಟೀಕೆಯನ್ನೂ ಮಾಡಿದ್ದಾರೆ. ಈ ಪ್ರಕರಣದಲ್ಲಿ ಗೃಹಸಚಿವರ ರಾಜೀನಾಮೆ ಕೇಳಿದ್ದು ಹಾಸ್ಯಾಸ್ಪದ. ಯಾರು ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆ ನೀಡುವ ಕೆಲಸ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಮನೆ ಮೇಲೆ ಎಸಿಬಿ ದಾಳಿ ಮಾಡಿರುವುದನ್ನು ಸಮರ್ಥಿಸಿಕೊಂಡ ಅಶೋಕ್, ಹಿಂದೆಲ್ಲಾ ಬರೀ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಲಾಗುತ್ತಿದೆ ಅಂತ ಆರೋಪಿಸುತ್ತಿದ್ದರು. ಆದರೆ, ಈಗ ಜಮೀರ್ ಮನೆ ಮೇಲೆ ದಾಳಿ ಆದಾಗ ಕೂಗಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆದಾಗ ಇಡೀ ದೇಶದಲ್ಲಿ ಪ್ರತಿಭಟನೆ ಮಾಡಿದರು. ರಾಹುಲ್ ಗಾಂಧಿ ಮೇಲೆ ಕ್ರಮ ಕೈಗೊಳ್ಳುವಾಗ, ಬೇರೆಯವರನ್ನು ಬಿಡುತ್ತಾರಾ ? ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದರು ಎಂದು ತಿರುಗಿ ನೋಡಲಿ. ತಪ್ಪು ಮಾಡಿದ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಇನ್ನು ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಬಹಳ ನೋವಿನ ಸಂಗತಿ, ಚಂದ್ರಶೇಖರ ಗುರೂಜಿ ವಾಸ್ತು ಶಿಲ್ಪದ ಬಗ್ಗೆ ಪರಿಣಿತರು. ಬಡವರಿಗೂ ವಾಸ್ತು ಶಾಸ್ತ್ರದ ಬಗ್ಗೆ ಮಾಹಿತಿ ನೀಡುತ್ತಿದ್ದರು.ಅವರಿಗೆ ಯಾರೂ ವೈರಿಗಳಿರಲಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸ್ ಆಯುಕ್ತ ಲಾಬೂರಾಮ್ ಬಳಿ ಚರ್ಚೆ ಮಾಡಿದೆ. ಹೋಟೆಲ್‌ಗೆ ಬಂದವರು ಕಾಲಿಗೆ ಬಿದ್ದು ಬಳಿಕ ಕೃತ್ಯ ಮಾಡಿದ್ದಾರೆ. ಅವರಿಗೆ ಗೊತ್ತಿರುವವರೆ ಮಾಡಿರಬಹುದು. ಇದು ಪೂರ್ವ ನಿಯೋಜಿತ ಕೃತ್ಯ. ಈ ಘಟನೆಗೆ ವಿರೋಧ ವ್ಯಕ್ತಪಡಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.