Advertisement

ಪಿಎಸ್‌ಐ ನೇಮಕ: ಕೈ-ಕಮಲ ಜಟಾಪಟಿ; ತನಿಖೆಗೆ ಒಪ್ಪಿದ ರಾಜ್ಯ ಸರ್ಕಾರ

03:28 PM Sep 16, 2022 | Team Udayavani |

ವಿಧಾನಸಭೆ: ಪಿಎಸ್‌ಐ ನೇಮಕಾತಿ ಅಕ್ರಮ ಸದನದಲ್ಲಿ ಪ್ರತಿಧ್ವನಿಸಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ಮಾತಿನ ಚಕಮಕಿ ನಡೆದು, 2006 ರಿಂದಲೂ ನಡೆದಿರುವ ಪೊಲೀಸ್‌ ನೇಮಕಾತಿಗಳ ಬಗ್ಗೆ ತನಿಖೆಗೆ ಸಿದ್ಧವಿರುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

Advertisement

ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದಾಗ ಪ್ರಕರಣ ನ್ಯಾಯಾಲಯದಲ್ಲಿದೆ, ಇತ್ತೀಚೆಗೆ ನಡೆದಿರುವ ಪ್ರಕರಣ ಅಲ್ಲ. ಹೀಗಾಗಿ ನಿಲುವಳಿ ಸೂಚನೆಯಡಿ ಚರ್ಚೆಗೆ ಕೊಡಬಾರದು. ಆದರೆ, ಸರ್ಕಾರ ಚರ್ಚೆಗೆ ಸಿದ್ಧವಿದೆ, ಎಲ್ಲರ ಕಾಲದಲ್ಲೂ ಆಗಿರುವುದು ಚರ್ಚೆಯಾಗಲಿ ಎಂದು ಮಾಧುಸ್ವಾಮಿ ಸವಾಲು ಹಾಕಿದರು.

ಇದಕ್ಕೆ ಸಿದ್ದರಾಮಯ್ಯ ಅವರು, ಇದು ರಾಜಕೀಯ ಭಾಷಣ ಅಲ್ಲ. ನ್ಯಾಯಾಲಯದಲ್ಲಿರುವ ಸಾಕಷ್ಟು ಪ್ರಕರಣ ಇಲ್ಲಿ ಚರ್ಚಿಸಿದ್ದೇವೆ. ಸಾವಿರಾರು ವಿದ್ಯಾ ರ್ಥಿಗಳ ಭವಿಷ್ಯದ ಪ್ರಶ್ನೆ, ನೂರಾರು ಕೋಟಿ ರೂ. ಅಕ್ರಮದ ವಿಚಾರ ಎಂದು ಆರೋಪಿಸಿದರು. ಸಚಿವ ಅಶ್ವತ್ಥನಾರಾಯಣ, ನೀವು ಇಲ್ಲಿ ಮಾತನಾಡೋ ದೆಲ್ಲಾ ರಾಜಕೀಯ ಭಾಷಣವೇ ಎಂದರು. ಅದಕ್ಕೆ ಸಿದ್ದರಾಮಯ್ಯ ಅವರು, ನೀವು ಆ ಖಾತೆ ಮಂತ್ರಿ ಏನಪ್ಪಾ ಎಂದು ಸುಮ್ಮನಾಗಿಸಿದರು.

ಇದೇ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆದು, ತಮಗೆ ಮಾತನಾಡಲು ಅವಕಾಶ ಕೊಡದೆ ಗಲಾಟೆ ಮಾಡುತ್ತಿ ದ್ದರಿಂದ ಸಿಟ್ಟಿಗೆದ್ದ ಸಚಿವ ಮಾಧುಸ್ವಾಮಿ, “ನಾವೇನು ಕತ್ತೆ ಕಾಯಕ್ಕೆ ಇದ್ದೇವೇನ್ರಿ. ಸರ್ಕಾರಕ್ಕೆ ಮಾತನಾಡಲು ಬಿಡಲ್ಲ ಎಂದರೆ ಹೇಗ್ರಿ’ ಎಂದು ಆಕ್ರೋಶ ಹೊರಹಾಕಿದರು. “ಹೌದು, ನೀವ್‌ ಕತ್ತೆ ಕಾಯೋಕೆ ಇರೋದು’ ಎಂದು ಕಾಂಗ್ರೆಸ್‌ ಸದಸ್ಯರು ಛೇಡಿಸಿದರು. ಇದಕ್ಕೆ ಮತ್ತಷ್ಟು ಕೋಪಗೊಂಡ ಅವರು,
“ನಾನು ನಿಮಗೆ ಮನವರಿಕೆ ಮಾಡಿಕೊಡಬೇಕಿಲ್ಲ, ಸ್ಪೀಕರ್‌ಗೆ ಮನವ ರಿಕೆ ಮಾಡಿಕೊಡುತ್ತೇನೆ. ನನ್ನ ಪ್ರಶ್ನಿಸಲು ನೀವ್ಯಾರು’ ಎಂದು ಜೋರು ಧ್ವನಿಯಲ್ಲಿ ಕೇಳಿದರು.

ಪ್ರಿಯಾಂಕ್‌ ಖರ್ಗೆ, ಜಮೀರ್‌ ಅಹಮದ್‌, ಭೀಮಾ ನಾಯಕ್‌ ಮತ್ತಿತರ ಸದಸ್ಯರು, ನೀವು ನಮಗೆ ಮನವರಿಕೆ ಮಾಡಿಕೊಡಬೇಡಿ. ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡಿ ಎಂದು ತಿರುಗೇಟು ನೀಡಿದರು.

Advertisement

ಮಾತಿನ ನಡುವೆ, “ನಿಯಮಾವಳಿ ವಿಚಾರ ನಿನಗೆ ಗೊತ್ತಾಗುವುದಿಲ್ಲ, ಕುಳಿತುಕೋ ಜಮೀರ್‌’ ಎಂದು ಮಾಧುಸ್ವಾಮಿ ಸುಮ್ಮನಾಗಿಸಿದರು. ಭೀಮಾ ನಾಯಕ್‌ಗೆ ಉತ್ತರ ಹೇಳುವ ಸ್ಥಿತಿ ನನಗೆ ಬಂತಲ್ಲ ಎಂದು ಛೇಡಿಸಿದರು. ಎಂ.ಬಿ.ಪಾಟೀಲ್‌ ಅವರು ಎದ್ದುನಿಂತಾಗ, ನಿಮ್ಮ ಅಧೀನದಲ್ಲಿ ನಾನಿಲ್ಲ, ಅಂತಹ ಸ್ಥಿತಿ ಬಂದಿಲ್ಲ, ಸ್ಪೀಕರ್‌ ಕುರಿತು ಮಾತನಾಡುತ್ತಿದ್ದೇನೆ ಎಂದು ಹೇಳಿದರು. ಮಾಧುಸ್ವಾಮಿಯವರ ಮಾತಿಗೆ ಕೋಪಗೊಂಡ ಕಾಂಗ್ರೆಸ್‌ ಸದಸ್ಯರು ಒಮ್ಮೆಲೆ ಮುಗಿಬಿದ್ದರು.

ಹಗರಣ ಬೆಳಕಿಗೆ ತಂದಿದ್ದು ನಾವೇ, ತಪ್ಪಿತಸ್ಥರ ಬಂಧಿಸಿದ್ದು ನಾವೇ ಎಂದು ಮಾಧುಸ್ವಾಮಿ ಸಮರ್ಥಿಸಿಕೊಂಡರು. ಪಿಎಸ್‌ಐ ನೇಮಕಾತಿಗೆ ಹಣ ಪಡೆದಿದ್ದು ನಿಮ್ಮದೇ ಪಕ್ಷದ ಶಾಸಕರು ಎಂದು ಕಾಂಗ್ರೆಸ್‌ ಸದಸ್ಯರು ಕುಟುಕಿದರು. ಅಂತಿಮವಾಗಿ ಪ್ರಕರಣದ ಬಗ್ಗೆ ತನಿಖೆಗೆ ಸರ್ಕಾರ ಸಿದ್ಧವಿದೆ ಎಂದು ಮಾಧುಸ್ವಾಮಿ ಹೇಳಿದರು. ಪ್ರವಾಹ, ನೆರೆ ಚರ್ಚೆಯ ನಂತರ ನಿಯಮ 69 ರಡಿ ಅವಕಾಶ ಕೊಡುವುದಾಗಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next