Advertisement

ಹುಸಿಯಾದ ನಿರೀಕ್ಷೆ ಟೀವಿ ವೀಕ್ಷಣೆ ದುಬಾರಿ

12:30 AM Feb 06, 2019 | Team Udayavani |

ಮುಂಬಯಿ: ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಕೇಬಲ್‌ ಹಾಗೂ ಡಿಟಿಎಚ್‌ಗೆ ಸಂಬಂಧಿಸಿ ಫೆಬ್ರವರಿ 1ರಿಂದ ಜಾರಿಗೆ ತಂದ ನಿಯಮದಿಂದಾಗಿ ಟಿವಿ ವೀಕ್ಷಣೆ ಅಗ್ಗವಾಗಲಿದೆ ಎಂಬ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ. ಈ ನಿಯಮದಿಂದಾಗಿ ಕೇವಲ ಜನಪ್ರಿಯ ಚಾನೆಲ್‌ಗ‌ಳಿಗೆ ಮಾತ್ರ ಲಾಭವಾಗಿದೆ ಎಂದು ರೇಟಿಂಗ್‌ ಏಜೆನ್ಸಿ ಕ್ರಿಸಿಲ್‌ ವರದಿ ಮಾಡಿದೆ.

Advertisement

ಚಾನೆಲ್‌ ಮಾಲೀಕರು ಮತ್ತು ವಿತರಕರು ಪ್ರಕಟಿಸಿದ ಚಾನೆಲ್‌ ಬೆಲೆ ಮತ್ತು ಟ್ರಾಯ್‌ ನಿಗದಿಪಡಿಸಿದ ನೆಟ್‌ವರ್ಕ್‌ ಸಾಮರ್ಥ್ಯ ಶುಲ್ಕದಿಂದಾಗಿ ಕೇಬಲ್‌ ಹಾಗೂ ಡಿಟಿಎಚ್‌ ಚಂದಾದಾರಿಕೆ ಶುಲ್ಕ ಬಹುತೇಕ ಚಂದಾದಾರರಿಗೆ ಏರಿಕೆಯಾಗಿದೆ. ಪಾರದರ್ಶಕತೆ ಮತ್ತು ಗ್ರಾಹಕರಿಗೆ ಆಯ್ಕೆಯಲ್ಲಿ ಹೆಚ್ಚು ಅವಕಾಶ ನೀಡುವ ನಿಟ್ಟಿನಲ್ಲಿ ಟ್ರಾಯ್‌ ಈಗಾಗಲೇ ಹೊಸ ರೂಪುರೇಷೆಯನ್ನು ಪ್ರಕಟಿಸಿದೆ. ಇದರಿಂದಾಗಿ ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗ‌ಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ಅದಕ್ಕೆ ಮಾತ್ರ ಪಾವತಿ ಮಾಡಬಹುದಾಗಿದೆ. ಹೀಗಾಗಿ ಚಾನೆಲ್‌ ಪ್ರಸಾರಕರು ಪ್ರತಿ ಚಾನೆಲ್‌ಗೆ ದರ ನಿಗದಿಸುವ ಅನಿವಾರ್ಯತೆ ಎದುರಾಗಿದೆ.

ಟಿವಿ ಬಿಲ್‌ ಶೇ.25 ಏರಿಕೆ: ಈ ಬಗ್ಗೆ ವಿಶ್ಲೇಷಣೆ ನಡೆಸಿದ ಕ್ರಿಸಿಲ್‌ ಮಾಸಿಕ ಟಿವಿ ಬಿಲ್‌ನ ಮೇಲೆ ಈ ಹೊಸ ನೀತಿ ವಿಭಿನ್ನ ಪರಿಣಾಮ ಬೀರುತ್ತಿರುವುದಾಗಿ ಕಂಡುಕೊಂಡಿದೆ. ಪ್ರಸ್ತುತ ಬೆಲೆ ಆಧರಿಸಿ ವಿಶ್ಲೇಷಿಸಿದಾಗ, ಟಿವಿ ಬಿಲ್‌ ಸುಮಾರು ಶೇ.25ರಷ್ಟು ಏರಿಕೆ ಕಂಡಿದೆ. ಈ ಹಿಂದೆ ಪಾವತಿ ಮಾಡುತ್ತಿದ್ದ ರೂ. 230 – 240ರಿಂದ ಮಾಸಿಕ ರೂ.300 ಕ್ಕೆ ಏರಿಕೆಯಾಗಿದೆ. ಆದರೆ ಪ್ರಮುಖ 10 ಚಾನೆಲ್‌ಗ‌ಳನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಈ ಹೆಚ್ಚಳವಾಗಿದ್ದು, ಪ್ರಮುಖ 5 ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳುವವರಿಗೆ ದರ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ಕಂಟೆಂಟ್‌ಗೆ ಪ್ರಾಮುಖ್ಯ: ಈ ಹೊಸ ವಿಧಾನದಿಂದಾಗಿ ಪ್ರಸಾರಕರಿಗೆ ಚಂದಾದಾರಿಕೆಯಿಂದ ಬರುವ ಆದಾಯವು ಶೇ. 40 ರಿಂದ ಶೇ. 94 ಕ್ಕೆ ಏರಿಕೆಯಾಗಲಿದೆ. ಜನಪ್ರಿಯ ಚಾನೆಲ್‌ಗ‌ಳನ್ನು ಜನರು ಆಯ್ಕೆ ಮಾಡುವುದರಿಂದಾಗಿ ದೊಡ್ಡ ಪ್ರಸಾರಕರಿಗೆ ಲಾಭವಾಗಲಿದೆ. ಆದರೆ ಅತೀ ಕಡಿಮೆ ಜನಪ್ರಿಯತೆ ಹೊಂದಿರುವ ಪ್ರಸಾರಕರು ವಹಿವಾಟು ನಡೆಸುವುದೇ ಕಷ್ಟವಾಗಿ ಮುಚ್ಚಬೇಕಾಗಬಹುದು ಎಂದು ಕ್ರಿಸಿಲ್‌ ವರದಿ ಮಾಡಿದೆ. 

ಕಡಿಮೆಯಾಗಲಿದೆ ದರ?: ಎಲ್ಲಕ್ಕಿಂತ ಮುಖ್ಯವಾಗಿ, ಸದ್ಯದ ಚಾನೆಲ್‌ ದರಗಳ ಆಧಾರದಲ್ಲಿ ಈ ವಿಶ್ಲೇಷಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಒಟ್ಟಾರೆ ಚಾನೆಲ್‌ ದರಗಳಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ ಎಂದೂ ಕ್ರಿಸಿಲ್‌ ನಿರೀಕ್ಷಿಸಿದೆ. ಸ್ಪರ್ಧೆ ಮತ್ತು ವೀಕ್ಷಕರ ಚಂದಾದಾರಿಕೆ ಸೇರಿದಂತೆ ಹಲವು ಅಂಶಗಳು ಇದರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next