ಪಾಣಾಜೆ: ಪುತ್ತೂರು ತಾಲೂಕಿನ ಪಾಣಾಜೆಯ ಪಂಡಿತ ಪರಂಪರೆಯ ಮೂಲಿಕಾ ತಜ್ಞ ಪಿ.ಎಸ್ ವೆಂಕಟ್ರಾಮ ದೈತೋಟ (77) ಅವರು ಜು.21 ರಂದು ಹೃದಯಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ ಜಯಲಕ್ಷ್ಮೀ ಭಟ್, ಪತ್ರಕರ್ತ ಈಶ್ವರ ದೈತೋಟ ಸಹಿತ ನಾಲ್ವರು ಸಹೋದರರು ಹಾಗೂ ಓರ್ವ ಸಹೋದರಿ ಯನ್ನು ಅಗಲಿದ್ದಾರೆ.
ಶುಕ್ರವಾರ ಮುಂಜಾನೆ ಪುತ್ತೂರಿಗೆ ತೆರಳಲು ಸ್ವರ್ಗದ ಪ್ರಯಾಣಿಕರ ತಂಗುದಾಣದಲ್ಲಿ ಕಾಯುತ್ತಿದ್ದ ಸಂದರ್ಭ ಕುಸಿದು ಬಿದ್ದರು. ತತ್‌ಕ್ಷಣ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿದ್ದರೂ, ಅಷ್ಟರಾಗಲೇ ಹೃದಯಘಾತದಿಂದ ಮೃತಪಟ್ಟಿದ್ದರು. ಪಾಣಾಜೆಯ ಕಿಳಿಂಗಾರು ವೈದಿಕ ಮನೆತನದಲ್ಲಿ ಪಂಡಿತ ಶಂಕರನಾರಾಯಣ ಭಟ್ ಮತ್ತು ವೆಂಕಟೇಶ್ವರಿ ಅಮ್ಮನವರ ಪುತ್ರನಾಗಿ ಜನಿಸಿದ ಅವರು ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು.
ಎಂಜಿನಿಯರ್ ವೃತ್ತಿ ತ್ಯಜಿಸಿ ಅಜ್ಜ ವೈದ್ಯ ಭಟ್ಟರು, ತಂದೆ ಪಂಡಿತ ಶಂಕರ ನಾರಾಯಣ ಭಟ್ಟರ ವನಸ್ಪತಿಗಳ ಪರಿಚಯ ಹಾಗೂ ಉಪಯುಕ್ತ ರಹಸ್ಯಗಳನ್ನು, ಶೋಧ ಮಾಡಿದ ಅನುಭವಗಳನ್ನು ಮನನ ಮಾಡಿಕೊಂಡು ಹಾಗೂ ಉಕ್ಕಿನಡ್ಕ ವಸಿಷ್ಠಾಶ್ರಮದ ನ್ಯಾಯಶಾಸ್ತ್ರವೇತ್ರರಾಗಿದ್ದ ಕೋಣಮ್ಮ ಮಹಾಲಿಂಗ ಭಟ್ ಅವರಿಂದ ಸಂಸ್ಕೃತ, ವೈದಿಕಗಳನ್ನು ಅಭ್ಯಸಿಸಿದರು. ಬಳಿಕ ಕುಟುಂಬದ ಪರಂಪರಾಗತ ಉಚಿತ ವೈದ್ಯ ಚಿಕಿತ್ಸಾ ಸೇವೆಯನ್ನು ಮುಂದುವರಿಸಿದ್ದರು.
ಸಸ್ಯಶಾಸ್ತ್ರೀಯ ವಿಶ್ವಕೋಶ ಎಂದೇ ಗುರುತಿಸ್ಪಟ್ಟಿದ್ದ ಅವರು, ಲಕ್ಷಕ್ಕೂ ಅಧಿಕ ಗಿಡಮೂಲಿಕೆಗಳ ಕುರಿತು ಜ್ಞಾನ ಹೊಂದಿದ್ದರು. ಅವರ ದೈತೋಟ ಮನೆ ಪರಿಸರ ಔಷಧಿ ಸಸ್ಯಗಳಿಂದ ತುಂಬಿದೆ. 1996ರಲ್ಲಿ ಪುತ್ತೂರಿನಲ್ಲಿ ಜಾಗತಿಕ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಒಂದು ಸಾವಿರದ ಎಂಟು ವಿಧದ ಮೂಲಿಕಾ ಸಸ್ಯಗಳನ್ನು ಪ್ರದರ್ಶನಕ್ಕಿಟ್ಟಿದ್ದರು.
ರಾಜ್ಯದಿಂದಲ್ಲದೇ ಆಂಧ್ರಪ್ರದೇಶ, ಕೇರಳ ಸಹಿತ ಹಲವು ರಾಜ್ಯಗಳಿಂದ ಅವರ ಬಳಿ ಚಿಕಿತ್ಸೆಗೆ ಜನರು ಬರುತ್ತಿದ್ದರು. ಔÐಧ ಮತ್ತು ತಯಾರಿ ವಿಧಾನವನ್ನು ಬರೆದು ಕೊಟ್ಟು, ಕಡುಪಥ್ಯಗಳನ್ನು ಸೂಚಿಸುವುದು ಅವರ ಚಿಕಿತ್ಸಾ ವಿಧಾನವಾಗಿತ್ತು. ಪ್ರತಿ ಶನಿವಾರ ಮತ್ತು ರವಿವಾರ ಚಿಕಿತ್ಸಾ ದಿನವಾಗಿತ್ತು.
ಆಯುರ್ವೇದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ತರಬೇತಿ ಶಿಬಿರ, ಪ್ರದರ್ಶನಗಳನ್ನು ಏರ್ಪಡಿಸಿದ ವೆಂಕಟ್ರಾಮ ಅವರು ಅಡಿಕೆ ಪತ್ರಿಕೆಯಲ್ಲಿ ಮನೆ ಮದ್ದು ಅಂಕಣಕಾರರಾಗಿ ಪರಿಚಿತರಾಗಿದ್ದರು.
ಆಯುರ್ವೇದ ಪ್ರಕಾಶನ ಅಮೂಲ್ಯ ಕೃತಿಗಳನ್ನು ಪ್ರಕಾಶಿಸಿದ್ದು ಅದನ್ನು ವೆಂಕಟ್ರಾಮರು ಮುಂದುವರಿಸಿದ್ದರು. ಅನ್ನ-ಆರೋಗ್ಯ-ಔಷಧ, ಔಷಧೀಯ ಸಸ್ಯ ಸಂಪತ್ತು, ಅಡಿಕೆ ವಲಯದ ಹಸಿಮದ್ದುಗಳು ಇವರ ಜನಪ್ರಿಯ ಪ್ರಕಟನೆೆಗಳಾಗಿತ್ತು.