Advertisement

Agriculture: ಹಿಪ್ಪು ನೇರಳೆ ಕೃಷಿಯಲ್ಲಿ ಮರ ಪದ್ಧತಿ ಆವಿಷ್ಕರಿಸಿದ ರೈತನಿಗೆ ಸಿಗದ ಮನ್ನಣೆ

04:20 PM Nov 28, 2023 | Team Udayavani |

ಕೋಲಾರ: ರೇಷ್ಮೆ ಕೃಷಿಯಲ್ಲಿ ವಿನೂತನ ಮರ ಪದ್ಧತಿ ಯನ್ನು ಆವಿಷ್ಕರಿಸಿದ ರೈತ ಹತ್ತೇ ವರ್ಷಗಳಲ್ಲಿ ಸರ್ಕಾರಗಳಿಂದ ಮನ್ನಣೆ ಪಡೆಯದೆ ತೆರೆಮರೆಗೆ ಸರಿದು ಬಿಟ್ಟಿದ್ದಾರೆ. ಕೋಲಾರ ಹೊರವಲಯದ ಹೊನ್ನೇನ ಹಳ್ಳಿಯ ರೈತ ವಿ.ವೆಂಕಟರಾಮಯ್ಯ ವಿನೂತನವಾಗಿ ಆವಿಷ್ಕರಿಸಿದ ಮರ ಪದ್ಧತಿ ಹಿಪ್ಪು ನೇರಳೆ ಬೇಸಾಯ ದೇಶ ವಿದೇಶದ ಗಮನ ಸೆಳೆದಿದೆ.ವಿಜ್ಞಾನಿಗಳ ತಂಡ ಮಾಡ ಬೇಕಾದ ಸಂಶೋಧನೆಯನ್ನು ರೈತ ವೆಂಕಟರಾಮಯ್ಯ ಒಬ್ಬಂಟಿಯಾಗಿ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ.

Advertisement

ರೇಷ್ಮೆ ಯಶಸ್ಸಿನ ಗಾಥೆ: ಈ ಹತ್ತು ವರ್ಷಗಳಲ್ಲಿ ವೆಂಕಟರಾಮಯ್ಯರ ಸಾಧನೆಗೆ ಸಿಕ್ಕ ಪ್ರತಿಫಲ ಕೇವಲ 10 ಸಾವಿರ ರೂ. ಮಾತ್ರ. ಇವರ ಸಾಧನೆ ಮೈಸೂರು ಸಿಎಸ್‌ಆರ್‌ಟಿಐ ಸಂಸ್ಥೆ ಪ್ರಕಟಿಸಿರುವ ರೇಷ್ಮೆ ಯಶಸ್ಸಿನ ಗಾಥೆಗಳು ಆಂಗ್ಲ ಹೊತ್ತಿಗೆಯ ಲೇಖನವಾಗಿ ವಿದೇಶಿಯರ ಗಮ ನಸೆಳೆಯುತ್ತಿದೆ. ಆದರೆ, ರೈತ ವೆಂಕಟರಾಮಯ್ಯ ಯಾವುದೇ ಹಿರಿಮೆ ಮನ್ನಣೆ ಪ್ರತಿಫಲವಿಲ್ಲದೆ ರೇಷ್ಮೆ ಬೇಸಾಯವನ್ನೇ ಮುಂದುವರಿಸುತ್ತಿದ್ದಾರೆ.

ಅಗತ್ಯತೆಯೇ ಆವಿಷ್ಕಾರ: ಮನುಷ್ಯನ ಅಗತ್ಯಗಳು ವಿನೂತನ ಆವಿಷ್ಕಾರಗಳಿಗೆ ದಾರಿ ಮಾಡಿಕೊಟ್ಟಿರುವುದನ್ನು ಮನುಕುಲದ ಇತಿಹಾಸ ಹೇಳುತ್ತದೆ. ನೀರಿನ ಅಲಭ್ಯತೆ ಮತ್ತು ರೇಷ್ಮೆ ಕೃಷಿಯನ್ನು ಮುಂದುವರಿಸಲೇಬೇಕೆಂಬ ಛಲ ವೆಂಕಟರಾಮಯ್ಯ ಅವರಿಗೆ ಮರ ಪದ್ಧತಿಯನ್ನು ಆವಿಷ್ಕರಿಸಲು ಸಾಧ್ಯವಾಗಿಸಿದೆ. ಕೃಷಿ ಕುಟುಂಬದ ವೆಂಕಟರಾಮಯ್ಯರಿಗೆ 4 ಎಕರೆ ಜಮೀನು ಇದೆ. ಕೊಳವೆ ಬಾವಿ ಕೊರೆದು ನೀರು ಸಿಗುವವರೆಗೂ ತರಕಾರಿ ಮತ್ತಿತರ ವಾಣಿಜ್ಯ ಬೆಳೆ ಬೆಳೆಯುತ್ತಿದ್ದರು. ಈ ಮಧ್ಯೆ ರೇಷ್ಮೆ ಕೃಷಿಯೂ ಇವರ ಗಮನ ಸೆಳೆದಿತ್ತು. 2011-12 ರ ಹೊತ್ತಿಗೆ ಇಡೀ ಕೋಲಾರ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಯಿತು. ನೀರಿನ ಅಲಭ್ಯತೆಯಿಂದಾಗಿ ರೇಷ್ಮೆ ಗಿಡಗಳಿಗೆ ನೀರುಣಿಸಲು ಸಾಧ್ಯವಿಲ್ಲದಂತಾಯಿತು.

ಮರ ಪದ್ಧತಿ: ಸಾಮಾನ್ಯವಾಗಿ ರೇಷ್ಮೆ ಗಿಡಗಳನ್ನು ಒಂದರಿಂದ ಒಂದೂವರೆ ಅಡಿಗಳ ಜಾಗ ಬಿಟ್ಟು ನೆಟ್ಟು ಇಡೀ ಗಿಡ ಬೆಳೆಸಿ ಸೊಪ್ಪು ಕತ್ತರಿಸಿ ರೇಷ್ಮೆ ಹುಳುಗಳಿಗೆ ಆಹಾರವಾಗಿ ಹಾಕಲಾಗುತ್ತದೆ. ರೇಷ್ಮೆ ತೋಟಕ್ಕೆ ನೀರು ಸಾಲು ತ್ತಿಲ್ಲ, ಆದರೂ, ರೇಷ್ಮೆ ಬಿಡಲು ಮನಸಾಗುತ್ತಿಲ್ಲ. ಇಂತಹ ಸಂಕಟದ ಸನ್ನಿವೇಶದಲ್ಲಿ ವೆಂಕಟರಾಮಯ್ಯರಿಗೆ ಹುಟ್ಟಿದ್ದೇ ಮರ ಪದ್ಧತಿಯಲ್ಲಿ ರೇಷ್ಮೆ ಬೇಸಾಯ ಆಲೋಚ ನೆ. ಗಿಡವಾಗಿ ಬೆಳೆಯುತ್ತಿದ್ದ ಹಿಪ್ಪು ನೇರಳೆಯನ್ನು ಮರವಾಗಿ ಬೆಳೆಸಲು ಮುಂದಾದರು. ಆರಂಭದಲ್ಲಿ ಪ್ರಾಯೋಗಿಕವಾಗಿ ತಮ್ಮ 10 ಗುಂಟೆ ಜಮೀನಿನಲ್ಲಿ ಕೇವಲ 144 ಗಿಡ ನೆಟ್ಟು, ದೂರದ ಕೆರೆಯಿಂದ ನೀರನ್ನು ಸೈಕಲ್‌ನಲ್ಲಿ ತಂದು ಹಿಪ್ಪು ನೇರಳೆ ಮರ ಬೆಳೆಸಿದರು. ನೀರು ತರುವುದು ಪ್ರಯಾಸವಾದಾಗ ಮರಗಳ ಬುಡದಲ್ಲಿ ನೀರಿನ ಬಾಟಲ್‌ ನೆಟ್ಟು ಹನಿ ನೀರಾವರಿಯನ್ನೂ ಶುರು ಮಾಡಿಕೊಂಡರು. ಇದೇ ಮರಗಳ ಸೊ ಪ್ಪಿನಿಂದ ರೇಷ್ಮೆ ಉತ್ಪಾದನೆ ಮಾಡಲು ಮುಂದಾದರು. ಅಚ್ಚರಿಯೆಂಬಂತೆ ಹಿಂದಿನ ಪದ್ಧತಿಗಿಂತಲೂ ದೊಡ್ಡ ಪ್ರಮಾಣದಲ್ಲಿ ರೇಷ್ಮೆ ಉತ್ಪಾದನೆಯಾಯಿತು. ಈಗ 900ಕ್ಕೂ ಹೆಚ್ಚು ಮರಗಳ ಮೂಲಕವೇ ವೆಂಕಟರಾಮಯ್ಯ ರೇಷ್ಮೆ ಬೇಸಾಯ ಮುಂದುವರಿಸಿದ್ದಾರೆ.

ಉತ್ಪಾದನೆ ಹೆಚ್ಚಳ: ಸಾಮಾನ್ಯವಾಗಿ ಗಿಡ ಪದ್ಧತಿಯಲ್ಲಿ ಬೆಳೆದು ರೇಷ್ಮೆ ಉತ್ಪಾದಿಸುತ್ತಿದ್ದಾಗ 100 ಮೊಟ್ಟೆಗೆ 60 ರಿಂದ 70 ಕೆ.ಜಿ. ರೇಷ್ಮೆ ಉತ್ಪಾದನೆಯಾಗುತ್ತಿತ್ತು. ಮರ ಪದ್ಧತಿಯಲ್ಲಿ 100 ಮೊಟ್ಟೆಗೆ 90 ರಿಂದ 100 ಕೆ.ಜಿ. ರೇಷ್ಮೆ ಉತ್ಪಾದನೆಯಾಗುತ್ತಿದೆ. ಸಂಪೂರ್ಣ ಸಾವಯವ ಪದ್ಧತಿ ಯಲ್ಲಿಯೇ ಬೆಳೆದ ಮರಗಳಲ್ಲಿ ಬಿಡುತ್ತಿದ್ದ ಸೊಪ್ಪಿನಲ್ಲಿದ್ದ ತೇವಾಂಶ ಪೋಷಕಾಂಶಗಳೇ ಇದಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಪ್ರಾಯೋಗಿತವಾಗಿ 8 – 8 ಅಡಿ ಅಂತರ ದಲ್ಲಿ ನೆಟ್ಟು ಬೆಳೆಸಿದ್ದ ರೇಷ್ಮೆ ಮರಗಳು ಈಗ ಎರಡು ಎಕರೆ ಪ್ರದೇಶದಲ್ಲಿ 10-10 ಅಡಿ ಅಂತರದಲ್ಲಿ ಬೆಳೆಸಲಾಗು ತ್ತಿದೆ. ಈ ಪದ್ಧತಿಯ ಮತ್ತೂಂದು ಪ್ರಯೋಜನವೆಂದರೆ ಮರಗಳ ನಡುವೆ ವಾರ್ಷಿಕವಾಗಿ ರಾಗಿ, ಹುರುಳಿ, ಅಲಸಂದೆ ಬೆಳೆದುಕೊಂಡು ಮಿಶ್ರ ಬೇಸಾಯವನ್ನೂ ಮಾಡಬಹುದು ಎನ್ನುವುದನ್ನು ವೆಂಕಟರಾಮಯ್ಯ ಮೊಟ್ಟ ಮೊ ದಲ ಬಾರಿಗೆ ತೋರಿಸಿಕೊಟ್ಟರು.

Advertisement

ಲಾಬಿ ಮಾಡದ ವ್ಯಕ್ತಿತ್ವ: ವೆಂಕಟರಾಮಯ್ಯರ ರೇಷ್ಮೆ ಮರಗಳ ತೋಟ ಇಂದಿಗೂ ಅಧ್ಯಯನ ಕೇಂದ್ರವಾಗಿ ಮಾರ್ಪಟ್ಟಿದೆ. ಹೀಗೆ ರೇಷ್ಮೆ ಕೃಷಿಯಲ್ಲಿ ವಿನೂತನ ಆವಿಷ್ಕಾರ ಮಾಡಿ ವೆಂಕಟರಾಮಯ್ಯ ಅವರಿಗೆ ಆರಂಭದಲ್ಲಿ ರೇಷ್ಮೆ ಇಲಾಖೆ ಗುರುತಿಸಿ 10 ಸಾವಿರ ರೂ. ನೀಡಿದ್ದು ಹೊರತುಪಡಿಸಿದರೆ ಇದುವರೆಗೂ ರೇಷ್ಮೆ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಶಸ್ತಿ ಪುರಸ್ಕಾರಗಳಿಗೆ ಇವರನ್ನು ಪರಿಗಣಿಸಲೇ ಇಲ್ಲ. ಆಧಿಕಾರಿಗಳು, ರಾಜಕಾರಣಿಗಳ ನಡುವೆ ಲಾಬಿ ಮಾಡುವುದನ್ನು ಅರಿಯದ ರೈತ ವೆಂಕಟರಾಮಯ್ಯ ಈಗಲೂ ರೇಷ್ಮೆ ಕೃಷಿಕರಾಗಿಯೇ ಇದ್ದಾರೆ. ರೇಷ್ಮೆ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ವಿನೂತನ ಮರ ಪದ್ಧತಿ ಆವಿಷ್ಕರಿಸಿದ ಸಾಧನೆ ಮಾಡಿದ್ದರೂ ಅವರಿಗೆ ಸಿಗಬೇಕಾದ ಮನ್ನಣೆ, ಗೌರವ ದೊರೆ ತಿಲ್ಲ ಎನ್ನುವುದು ಕೃಷಿಕ ಸಾಧಕರನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು, ಸರಕಾರದ ವಿವಿಧ ಸಂಸ್ಥೆಗಳು ವಿಶ್ವವಿದ್ಯಾಲಯಗಳು ಹೇಗೆ ಗೌರವಿಸುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ವಿಶ್ವಕ್ಕೆ ರೇಷ್ಮೆ ಪರಿಚಯ : ಕೋಲಾರ ಬಳಿಯ ಪುಟ್ಟ ಗ್ರಾಮದಲ್ಲಿ ವೆಂಕಟರಾಮಯ್ಯ ಮಾಡಿದ ಈ ಆವಿಷ್ಕಾರ ದೇಶ ವಿದೇಶಗಳ ರೇಷ್ಮೆ, ಬೆಳೆಗಾರರು, ವಿಜ್ಞಾನಿಗಳು, ಸಂಶೋಧಕರ ಗಮನ ಸೆಳೆದಿದೆ. ಈ ಹತ್ತು ವರ್ಷಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗುಜರಾಜ್‌, ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ದಕ್ಷಿಣ ಆಫ್ರಿಕಾದ ತಾಂಜೇನಿಯಾ ಇತ್ಯಾದಿ ದೇಶಗಳ ಅಸಂಖ್ಯಾತ ರೇಷ್ಮೆ ಬೆಳೆಗಾರರು, ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಬಂದು ನೋಡಿ ಹೋಗಿದ್ದಾರೆ.

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next