ಬೆಂಗಳೂರು: ಯುವ ಜನತೆಗೆ ಉನ್ನತ ವಿದ್ಯಾಭ್ಯಾಸ ಮಾಹಿತಿ, ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲು ಜಿಲ್ಲಾಮಟ್ಟದಲ್ಲಿ ವಿವೇಕ ಜ್ಞಾನಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೌಶಲ್ಯಾಧಾರಿತ ತರಬೇತಿ: ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ರಾಜ್ಯದ ಯುವಕ-ಯುವತಿಯರಿಗೆ ಉನ್ನತ ಶಿಕ್ಷಣದ ಅವಕಾಶ, ಹೊಸ ಉದ್ಯೋಗ ಮತ್ತು ಅದಕ್ಕೆ ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಥಿಗಳ ಸಮಸ್ಯೆ ಮತ್ತು ಅದಕ್ಕೆ ಪರಿಹಾರ, ಸ್ವ ಉದ್ಯೋಗಕ್ಕೆ ಮಾರ್ಗದರ್ಶನ ಮತ್ತು ಕೌಶಲ್ಯಾಧಾರಿತ ತರಬೇತಿ ನೀಡಲು ಹೊಸ ಕೇಂದ್ರ ತೆರೆಯಲು ಸರ್ಕಾರ ನಿರ್ಧರಿಸಿದೆ.
ಸರ್ಕಾರಕ್ಕೆ ಶೀಘ್ರ ವರದಿ: ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೊಂದಿಗೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದೆ. ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಕೇಂದ್ರದ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಸೋಮವಾರದ ವೇಳೆಗೆ ಕೇಂದ್ರದ ಸಮಗ್ರ ಚಿತ್ರಣ ಹೇಗಿರಲಿದೆ ಎಂಬ ವಿವರಣೆ ಸರ್ಕಾರದ ಕೈ ಸೇರಲಿದೆ. ರಾಜ್ಯದ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕ- ಯುವತಿಯರನ್ನು ಮುಖ್ಯವಾಗಿಟ್ಟುಕೊಂಡು ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜ.12ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವೇಕ ಜ್ಞಾನಕೇಂದ್ರ ಉದ್ಘಾಟಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಉದ್ಯೋಗ ಹುಡುಕಲು ಅನುಕೂಲ: ವಿವೇಕ ಜ್ಞಾನಕೇಂದ್ರದ ಮೂಲಕ ಯುವಕ-ಯುವತಿಯರಿಗೆ ಉದ್ಯೋಗ ಹಾಗೂ ಶಿಕ್ಷಣದ ಮಾರ್ಗದರ್ಶನದ ಜತೆಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರಿಂದ ಸ್ವ ಉದ್ಯೋಗ ಮತ್ತು ವಿವಿಧ ಸಂಸ್ಥೆಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ತಕ್ಷಣವೇ ಉದ್ಯೋಗ ಹುಡುಕಿಕೊಳ್ಳಲು ಅನುವಾಗುವಂತೆ ಈ ಕೇಂದ್ರವನ್ನು ರೂಪಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ವಿದ್ಯಾರ್ಥಿಗಳ ಸಾಧನೆ ಪ್ರಕಟ: ಆನ್‌ಲೈನ್ ಮೂಲಕವೇ ಕಾರ್ಯನಿರ್ವಹಿಸಲು ವೆಬ್‌ಸೈಟ್ ಕೂಡ ತೆರೆಯಲಾಗುತ್ತದೆ. ಆನ್‌ಲೈನ್ ಮೂಲಕವೇ ವಿದ್ಯಾರ್ಥಿಗಳ ಸಮಸ್ಯೆ ಸ್ವೀಕರಿಸಲಾಗುತ್ತದೆ. ಪ್ರತಿವರ್ಷ ಈ ಕೇಂದ್ರದ ಮೂಲಕ ಎಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡಲಾಗಿದೆ ಎಂಬುದರ ಮಾಹಿತಿಯೂ ಲಭ್ಯವಾಗಲಿದೆ. ಇದರಲ್ಲಿ ವಿದ್ಯಾರ್ಥಿಗಳ ಸಾಧನೆ ಪ್ರಕಟಿಸಲಾಗುತ್ತದೆ. ಉದ್ಯೋಗ ಮೇಳ, ಆನ್‌ಲೈನ್ ತರಗತಿ, ಆನ್‌ಲೈನ್ ಪಠ್ಯವಸ್ತು ಹೀಗೆ ಅನೇಕ ವ್ಯವಸ್ಥೆಯನ್ನು ಅತಿವೇಗದಲ್ಲಿ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶ ಮಾದರಿ: ಆಂಧ್ರ ಪ್ರದೇಶದ ಯುವಕ-ಯುವತಿಯರಿಗೆ ಶಿಕ್ಷಣ ಮಾರ್ಗದರ್ಶನದ ಜತೆಗೆ ಉದ್ಯೋಗಾಧಾರಿತ ಕೌಶಲ್ಯ ಮತ್ತು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಜವಾಹರ್ ಜ್ಞಾನ ಕೇಂದ್ರ ಸೇವೆ ಸಲ್ಲಿಸುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ವಿವೇಕ ಜ್ಞಾನಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ವೃತ್ತಿಪರ ಕೋರ್ಸ್ ಹೊರತುಪಡಿಸಿ ವೃತ್ತಿಪರವಲ್ಲದ ಕೋರ್ಸ್‌ಗಳಾದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವುದೇ ಈ ಕೇಂದ್ರದ ಮುಖ್ಯ ಗುರಿ. ಆಂಧ್ರ ಪ್ರದೇಶದ ಜವಾಹರ್ ಜ್ಞಾನಕೇಂದ್ರ ಕೂಡ 2005ರಿಂದ ಸೇವೆಯನ್ನು ಮಾಡಿಕೊಂಡು ಬರುತ್ತಿದೆ.
* ರಾಜು ಖಾರ್ವಿ ಕೊಡೇರಿ