ಬೆಂಗಳೂರು : ಕುಂದಾಪುರ ತಾಲೂಕಿನ ವಾರಾಹಿ ನದಿಯಿಂದ ಉಡುಪಿ ನಗರ ಮತ್ತು ಈ ಕೊಳವೆಯು ಹಾದು ಹೋಗುವ ಮಾರ್ಗ ಮಧ್ಯೆ ಬರುವ ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಬಗ್ಗೆ ತನಿಖೆ ನಡೆಸಿ, ಗುಣಮಟ್ಟ ಪರಿಶೀಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ವಿಧಾನಪರಿಷತ್‌ನಲ್ಲಿ ಆಗ್ರಹಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಾಪಚಂದ್ರ ಶೆಟ್ಟಿ, ಒಟ್ಟು 122 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಕೊಳವೆ ಮಾರ್ಗ ಹಾದು ಹೋಗುವ ಸ್ಥಳಗಳ ಭೂಸ್ವಾಧೀನ ಮಾಡದೇ ರಸ್ತೆಯ ಪಕ್ಕದಲ್ಲಿಯೇ ಕಾಮಗಾರಿ ಮಾಡಲು ಯೋಜಿಸಲಾಗಿದೆ. ಅಂದಾಜು ಪಟ್ಟಿಯಲ್ಲಿ ಸೂಚಿಸಿದಂತೆ 6 ಅಡಿ ಆಳದಲ್ಲಿ ಬಿಟ್ಟು ನೇರವಾಗಿ ಕಂದಕದಲ್ಲಿ ಕೊಳವೆ ಅಳವಡಿಸಲಾಗುತ್ತಿದೆ. ಈ ಕೊಳವೆಗಳಿಗೆ ವೆಲ್ಡಿಂಗ್ ಸಹ ಸರಿಯಾಗಿ ಮಾಡಿಲ್ಲ ಎಂದರು.
ಇದನ್ನೂ ಓದಿ :ಎಲ್ಲಾ ಅನಧಿಕೃತ ಕಾಲೋನಿಗಳಿಗೆ ಎರಡು ವರ್ಷಗಳಲ್ಲಿ ಪೈಪ್ ನೀರು ಸರಬರಾಜು : ಸಿಸೋಡಿಯಾ
ಮಾನವ ಶ್ರಮಕ್ಕೆ ಅವಕಾಶವಿದ್ದರೂ ಜೇಸಿಬಿಯಿಂದ ಕಾಮಗಾರಿ, ಉಪಗುತ್ತಿಗೆಗೆ ಅವಕಾಶವಿಲ್ಲದಿದ್ದರೂ ಗುತ್ತಿಗೆದಾರರು ಉಪಗುತ್ತಿಗೆ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ. ಅವೈಜ್ಞಾನಿಕ ಮತ್ತು ಗುಣಮಟ್ಟವಿಲ್ಲದ ಈ ಕಾಮಗಾರಿಗಳ ಬಿಲ್ ಪಾವತಿಸುವ ಮೊದಲು ತಾಂತ್ರಿಕ ತಜ್ಞರಿಂದ ಪರಿಶೀಲನೆ ನಡೆಸಿ ವರದಿ ಪಡೆಯುವುದು ಆವಶ್ಯಕವಾಗಿದೆ. ಹೀಗಾಗಿ ಈ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ, ಗುಣಮಟ್ಟ ಪರಿಶೀಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಇದಕ್ಕೆ ನಗರಾಭಿವೃದ್ಧಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.