ಅಫಜಲಪುರ: ಒಂದು ವಾರದಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ತಾಲೂಕಿನಾದ್ಯಂತ ಅನೇಕ ಮನೆಗಳು ಕುಸಿದಿದ್ದು, ಮನೆ ಬಿದ್ದವರಿಗೆ ತಲಾ 10ಸಾವಿರ ರೂ.ಗಳ ತಾತ್ಕಾಲಿಕ ಚೆಕ್‌ನ್ನು ಶಾಸಕ ಎಂ.ವೈ. ಪಾಟೀಲ ವಿತರಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಚೆಕ್ ವಿತರಿಸಿ ಮಾತನಾಡಿ, ಮುಂಗಾರು ಪ್ರಾರಂಭದಲ್ಲಿ ಬಾರದೇ ರೈತರು, ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿತ್ತು. ಅದಾದ ತಿಂಗಳ ಬಳಿಕ ಬಿಡದೆ ನಾಲ್ಕೈದು ದಿನಗಳ ಕಾಲ ಮಳೆ ಸುರಿದಿದ್ದರಿಂದ ಅನೇಕ ಹಳ್ಳಿಗಳಲ್ಲಿ ಜನಸಾಮಾನ್ಯರ ಮನೆಗಳು ಕುಸಿದಿವೆ. ಹೀಗೆ ಮನೆ ಕಳೆದುಕೊಂಡವರಲ್ಲಿ ಸದ್ಯ 16ಜನ ಫಲಾನುಭವಿಗಳಿದ್ದು, ಈ ಪೈಕಿ 10 ಜನರಿಗೆ ಚೆಕ್ ವಿತರಣೆ ಮಾಡಲಾಗುತ್ತಿದೆ. ಉಳಿದವರಿಗೆ ನಂತರ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರ ಇವರಿಗೆ ತಾತ್ಕಾಲಿಕವಾಗಿ 10 ಸಾವಿರ ರೂ. ಕೊಟ್ಟು ಕೈ ತೊಳೆದುಕೊಳ್ಳುವ ಬದಲಾಗಿ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗು ತ್ತಿದ್ದು ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನ ಎಚ್ಚರಿಕೆ ವಹಿಸಬೇಕು. ಅಂದಾಗ ಮಾತ್ರ ಮುಂದಾಗುವ ಅನಾಹುತಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ತಾಲೂಕಿನಾದ್ಯಾಂತ ಮಳೆಯಿಂದ ಮನೆಗಳು ಹಾನಿಗೊಳಗಾದರೆ ಕಂದಾಯ ಇಲಾಖೆಯವರು, ಗ್ರಾ.ಪಂನವರು ಮಾಹಿತಿ ನೀಡಿದರೆ ಸರ್ಕಾರದಿಂದ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಮುಖಂಡರಾದ ಸಿದ್ಧಾರ್ಥ ಬಸರಿ ಗಿಡ, ಇರ್ಫಾನ್ ಜಮಾದಾರ, ಅಂಬರೀಷ ಬುರಲಿ, ಶಿವಾನಂದ ಗಾಡಿಸಾಹುಕಾರ್, ಪ್ರಕಾಶ ಜಮಾ ದಾರ, ರಮೇಶ ಪೂಜಾರಿ ಉಡಚಣ ಹಾಗೂ ಫಲಾನುಭವಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಇನ್ನಿತರರು ಇದ್ದರು.