Advertisement

Kerala: ಶಬರಿಮಲೆ ಯಾತ್ರಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿಕೊಡಿ

12:42 AM Dec 13, 2023 | Team Udayavani |

ದೇಶದ ಇತಿಹಾಸ ಪ್ರಸಿದ್ಧ ಯಾತ್ರಾಸ್ಥಳವಾದ ಕೇರಳದ ಶಬರಿಮಲೆಯಲ್ಲಿ ಈಗಾಗಲೇ ಪ್ರಸಕ್ತ ಸಾಲಿನ ಯಾತ್ರಾ ಋತು ಆರಂಭಗೊಂಡಿದ್ದು ಯಾತ್ರಿಗಳಿಗೆ ಅಗತ್ಯ ಮೂಲಸೌಕರ್ಯಗಳ ಸಹಿತ ಸೂಕ್ತ ಸೌಲಭ್ಯಗಳನ್ನು ರಾಜ್ಯ ಸರಕಾರ ಕಲ್ಪಿಸಿಕೊಟ್ಟಿಲ್ಲ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಶಬರಿಮಲೆಯಲ್ಲಿನ ವಸ್ತುಸ್ಥಿತಿಯ ಅಧ್ಯಯನಕ್ಕಾಗಿ 12 ಮಂದಿ ತಜ್ಞರ ತಂಡವನ್ನು ಶಬರಿಮಲೆಗೆ ಕಳುಹಿಸಿಕೊಡಲು ನಿರ್ಧರಿಸಿದೆ.

Advertisement

ಇದೇ ಮೊದಲ ಬಾರಿಗೆ ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಇಷ್ಟೊಂದು ಅವಾಂತರ, ಗೊಂದಲಗಳು ಸೃಷ್ಟಿಯಾಗಿದ್ದು ರಾಜ್ಯ ಸರಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ದೂರದೂರುಗಳಿಂದ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ ಭಕ್ತರು ಸೌಕರ್ಯಗಳ ಅಲಭ್ಯತೆಯಿಂದಾಗಿ ಪಂದಳಂನಿಂದಲೇ ವಾಪಸು ಹೋಗುತ್ತಿದ್ದಾರೆ. ಮಲೆಯನ್ನೇರಿದ ಭಕ್ತರು ಕೂಡ ದೇವರ ದರ್ಶನಕ್ಕಾಗಿ 20 ತಾಸುಗಳಿಗೂ ಅಧಿಕ ಕಾಲ ಸರತಿಯಲ್ಲಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿಪಕ್ಷ ಒಕ್ಕೂಟ ಯುಡಿಎಫ್ ಆರೋಪಿಸಿದೆ. ಆದರೆ ಇದನ್ನು ತಳ್ಳಿಹಾಕಿರುವ ಆಡಳಿತಾರೂಢ ಎಲ್‌ಡಿಎಫ್ ಸರಕಾರ, ಯಾತ್ರೆಗೆ ಸಕಲ ಸಿದ್ಧತೆ ಮಾಡಲಾಗಿದ್ದು ಗೊಂದಲವೇನೂ ಇಲ್ಲ ಎನ್ನುತ್ತಿದೆ.

ವಾರ್ಷಿಕ ಯಾತ್ರಾ ಋತುವಿನ ಮೊದಲ ಚರಣವಾದ 19 ದಿನಗಳ ಮಂಡಲ ಪೂಜಾ ಯಾತ್ರೆಯು ಈಗ ನಡೆಯುತ್ತಿದ್ದು ಆರಂಭದಲ್ಲಿ ಸರಾಸರಿ 62 ಸಹಸ್ರಕ್ಕೂ ಅಧಿಕ ಮಂದಿ ಯಾತ್ರಿಗಳು ಶಬರಿಮಲೆಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದರು. ಈಗ, ಅಂದರೆ ಐದಾರು ದಿನಗಳಿಂದೀಚೆಗೆ ದೇಗುಲಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು 88,000ಕ್ಕೇರಿದೆ. ಹೀಗಾಗಿ ದೇವರ ದರ್ಶನದ ಅವಧಿಯನ್ನು ಒಂದು ತಾಸಿನಷ್ಟು ಹೆಚ್ಚಿಸಲಾಗಿದೆ. ಆದರೆ ಇದರಿಂದಲೂ ಸಮಸ್ಯೆ ಬಗೆಹರಿದಿಲ್ಲ.

ಶಬರಿಮಲೆ ಯಾತ್ರೆ ವೇಳೆ ಪ್ರತೀ ವರ್ಷ ಲಕ್ಷಾಂತರ ಯಾತ್ರಿಕರು ಕಟ್ಟುನಿಟ್ಟಿನ ವ್ರತಾಚರಣೆ ನಡೆಸಿ ಅಯ್ಯಪ್ಪನ ದರ್ಶನ ಪಡೆಯಲು ಆಗಮಿಸುವುದು ವಾಡಿಕೆ. ಪ್ರತೀ ವರ್ಷ ದೇಗುಲಕ್ಕೆ ದೇಣಿಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೇ ವೇಳೆ ಶಬರಿಮಲೆ ದೇಗುಲದ ಆಡಳಿತ ಮತ್ತು ಯಾತ್ರೆಯ ನಿರ್ವಹಣೆ ಹೊಣೆ ತಿರುವಾಂಕೂರು ದೇವಸ್ವಂ ಬೋರ್ಡ್‌(ಟಿಡಿಬಿ)ನದ್ದಾಗಿದ್ದು ಯಾತ್ರೆಗೂ ಮುನ್ನ ಯಾತ್ರಿಕರಿಗೆ ಅಗತ್ಯ ಮೂಲ ಸೌಕರ್ಯ ಮತ್ತು ಅಗತ್ಯ ಸಿದ್ಧತೆಗಳನ್ನು ಮಾಡುವ ಹೊಣೆಗಾರಿಕೆಯೂ ಬೋರ್ಡ್‌ನದ್ದಾಗಿದೆ. ಕೋವಿಡ್‌ ಅವಧಿಯನ್ನು ಹೊರತುಪಡಿಸಿದಂತೆ ಪ್ರತೀವರ್ಷ ಶಬರಿಮಲೆ ಯಾತ್ರೆ ಕೈಗೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈ ಬಗ್ಗೆ ಟಿಡಿಬಿ ಮತ್ತು ರಾಜ್ಯ ಸರಕಾರಕ್ಕೆ ಅರಿವಿದ್ದರೂ ಯಾತ್ರಾ ಋತು ಆರಂಭಗೊಳ್ಳುವುದಕ್ಕೂ ಮುನ್ನ ಅಗತ್ಯ ಸಿದ್ಧತೆಗಳನ್ನು ಮತ್ತು ಯಾತ್ರಿಕರಿಗೆ ಅತ್ಯಗತ್ಯವಾಗಿರುವ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಎಡವಿರುವುದು ಬಲುದೊಡ್ಡ ಲೋಪವೇ ಸರಿ.

ಈ ಬಾರಿಯ ಯಾತ್ರಾ ಋತು ಕೊನೆಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಇನ್ನಾದರೂ ಸರಕಾರ ಮತ್ತು ಟಿಡಿಬಿ ಎಚ್ಚೆತ್ತುಕೊಂಡು ಯಾತ್ರಿಗ ಳಿಗೆ ಅತ್ಯಗತ್ಯ ಕುಡಿಯುವ ನೀರು, ಉಪಾಹಾರ, ಶೌಚಾಲಯ, ಪ್ರಾಥಮಿಕ ಚಿಕಿತ್ಸೆ, ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ದೇವರ ದರ್ಶನಕ್ಕೆ ಬರುವ ಯಾವೊಬ್ಬ ಭಕ್ತನೂ ದರ್ಶನ ಪಡೆಯಲಾಗದೆ ಹಿಂದಿರುಗುವ‌ ಸ್ಥಿತಿಯನ್ನು ಸರಕಾರ ತಂದೊಡ್ಡಬಾರದು. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಯಾತ್ರಿಗಳ ಸುರಕ್ಷೆಗೆ ಸರಕಾರ ಒತ್ತು ನೀಡಬೇಕು. ಈ ಪ್ರಾಥಮಿಕ ಹೊಣೆಗಾರಿಕೆಯಿಂದ ರಾಜ್ಯ ಸರಕಾರ ನುಣುಚಿಕೊಳ್ಳಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next