Advertisement

ಶವ ಸಂಸ್ಕಾರಕ್ಕೆ ಜಾಗ ಒದಗಿಸಿ

10:43 AM Jul 13, 2019 | Team Udayavani |

ಗದಗ: ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಮೃತರ ಕುಟಂಬಸ್ಥರು ತಾಲೂಕಿನ ಹಾತಲಗೇರಿ ಗ್ರಾಪಂ ಕಚೇರಿ ಎದುರು ಶವ ಸಂಸ್ಕಾರಕ್ಕೆ ಮುಂದಾಗುವ ಮೂಲಕ ಶುಕ್ರವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ ಅಂಬೇಡ್ಕರ್‌ ನಗರದ ನಿವಾಸಿ ಚಂದ್ರಪ್ಪ ಡಾವಣೆಗೆರೆ (65) ಎಂಬುವವರು ಗುರುವಾರ ರಾತ್ರಿ ನಿಧನರಾಗಿದ್ದರು. ಆದರೆ, ಗ್ರಾಮದಲ್ಲಿ ಸ್ಮಶಾನಕ್ಕೆ ಜಮೀನು ಇಲ್ಲದ ಕಾರಣ ಆಕ್ರೋಶಗೊಂಡ ಮೃತರ ಸಂಬಂಧಿಕರು ಗ್ರಾ.ಪಂ ಎದುರು ಶವ ಸಂಸ್ಕಾರಕ್ಕೆ ಮುಂದಾದರು. ಶವ ಸಂಸ್ಕಾರಕ್ಕಾಗಿ ಕಟ್ಟಿಗೆಗಳನ್ನು ಜೋಡಿಸಿದ್ದರಿಂದ ಗ್ರಾ.ಪಂ ಸಿಬ್ಬಂದಿ ಹಾಗೂ ಮೃತರ ಸಂಬಂಧಿಕರು ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಗ್ರಾ.ಪಂ ಕಚೇರಿ ಎದುರು ಅಂತ್ಯಕ್ರಿಯೆ ನೆರವೇರಿಸಲು ಅಡ್ಡಿಪಡಿಸುವುದಾದರೆ, ರುದ್ರಭೂಮಿ ತೋರಿಸುವಂತೆ ಸಾರ್ವಜನಿಕರು ಪಟ್ಟು ಹಿಡಿದರು. ಇದರಿಂದಾಗಿ ಗ್ರಾಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ಮುಂದುವರಿಯಿತು.

ತಹಶೀಲ್ದಾರ್‌ಗೆ ಗ್ರಾಮಸ್ಥರ ತರಾಟೆ: ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಕಳೆದ ಎರಡು ತಲೆ ಮಾರುಗಳಿಂದ ಗ್ರಾಮದ ದೇವಪ್ಪ ಮುರ್ಲಾಪುರ ಎಂಬುವವರ ಕುಟುಂಬಸ್ಥರು ತಮ್ಮ 3 ಎಕರೆ ಜಮೀನಿನ ಒಂದಿಷ್ಟು ಭಾಗವನ್ನು ಶವಗಳ ದಹನಕ್ಕೆಂದು ಬಿಟ್ಟುಕೊಟ್ಟಿದ್ದರು. ಇತ್ತೀಚೆಗೆ ಕುಟುಂಬಸ್ಥರು ಪಾಲು ಆಗಿದ್ದರಿಂದ ತಮಗೆ ಜಮೀನು ಸಾಲುತ್ತಿಲ್ಲವೆನ್ನುತ್ತಿದ್ದಾರೆ. ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಇತ್ತ ಗ್ರಾಮದಲ್ಲಿ ರುದ್ರಭೂಮಿಯೂ ಇದೇ, ಮೃತರ ಅಂತ್ಯಕ್ರಿಯೆ ನೆರವೇರಿಸಲು ಪರದಾಡುವಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಪಂ ಎದುರೇ ಶವ ದಹಿಸುವುದಾಗಿ ಪಟ್ಟು ಹಿಡಿದರು.

ಈ ವೇಳೆ ಮೃತರ ಸಂಬಂಧಿಕರನ್ನು ಸಮಾಧಾನ ಪಡಿಸಿದ ತಹಶೀಲ್ದಾರ್‌ ಗ್ರಾಮಸ್ಥರ ಅನುಕೂಲಕ್ಕಾಗಿ ಶವ ಸಂಸ್ಕಾರಕ್ಕೆ ಜಮೀನು ಬಿಟ್ಟುಕೊಟ್ಟಿದ್ದ ಹರ್ಲಾಪುರ ಕುಟುಂಬದವರ ಜಮೀನು ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅವರು ದುಬಾರಿ ಬೆಲೆ ಕಟ್ಟಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಇದೀಗ ಮತ್ತೂಂದು ಜಮೀನು ಗುರುತಿಸಲಾಗಿದ್ದು, ಸದ್ಯದಲ್ಲೇ ಅಂತಿಮಗೊಳ್ಳಲಿದೆ. ಮೂರು ತಿಂಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯಲಿದ್ದು, ಅಲ್ಲಿವರೆಗೆ ಸಹಕರಿಸುವಂತೆ ಗ್ರಾಮಸ್ಥರಿಗೆ ಮನವಿ ಮಾಡಿ, ಸಮೀಪದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯುವಂತೆ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆ ಪರಿಹರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next