ಮಂಡ್ಯ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ನಡೆಸುತ್ತಿ ರುವ ಮುಷ್ಕರ 9ನೇ ದಿನವೂ ಮುಂದುವರಿ ದಿದೆ. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಮನವಿ ಸಲ್ಲಿಸಿದರು.
ನಗರದ ಅಂಬೇಡ್ಕರ್ ಭವನ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಿ: ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಿ, ಸೇವಾ ಭದ್ರತೆ ಒದಗಿಸಬೇಕು. ಎಲ್ಲರನ್ನೂ ಕಾಯಂಗೊಳಿಸಬೇಕು. ಆರೋಗ್ಯ ಕ್ಷೇತ್ರದ ಬಜೆಟ್ ಅನ್ನು ಶೇಕಡಾವಾರು ಹೆಚ್ಚಿಸಬೇಕು. ಎಲ್ಲ ಹುದ್ದೆಗಳಿಗೆ ವೇತನ ಭತ್ಯೆ ಮತ್ತು ವೇತನ ಶ್ರೇಣಿ ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವೈದ್ಯಕೀಯ ಶಿಕ್ಷಣಇಲಾಖೆ ಜಾರಿಗೊಳಿಸಿರುವ ಏಕರೂಪ ವೇತನ ಮಾದರಿಯನ್ನು ಎಲ್ಲ ನೌಕರರಿಗೂ ಜಾರಿಗೊಳಿಸ ಬೇಕು. ಹೊರಗುತ್ತಿಗೆ ನೌಕರರಿಗೆ ಗುತ್ತಿಗೆದಾರರ ಮಧ್ಯವರ್ತಿ ಇಲ್ಲದೆ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.
ಸೌಲಭ್ಯ ಕಲ್ಪಿಸಲು ಆಗ್ರಹ: ಎನ್‌ಎಚ್‌ಎಂ ಅಡಿಯಲ್ಲಿಕೆಲಸ ಮಾಡುವ ನೌಕರರಿಗೆಕೇಂದ್ರ ಸರ್ಕಾರ ನೀಡುತ್ತಿರುವ ಬೋನಸ್ ಹೆಚ್ಚಳವನ್ನು ಕಾರ್ಯಗತಗೊಳಿಸಬೇಕು. ಮುಷ್ಕರದ ದಿನಗಳಲ್ಲಿ ಕಡಿತವಾದ ವೇತನವನ್ನು ಪಾವತಿಸಬೇಕು. ನೌಕರರ ಕಲ್ಯಾಣ ನಿಗಮ/ಮಂಡಳಿ ಸ್ಥಾಪಿಸಬೇಕು. ಆರೋಗ್ಯ ಭಾಗ್ಯ ಯೋಜನೆಯನ್ನು ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು. ಕೆಲಸದ ಸ್ಥಳದಲ್ಲಿ ಗುತ್ತಿಗೆ ನೌಕರರಿಗೆ ಮಾಡುವ ಶೋಷಣೆಯನ್ನು ತಡೆಗಟ್ಟ ಬೇಕು. ತಮ್ಮನ್ನು ಕೆಲಸದಿಂದ ತೆಗೆಯಬಾರದು. ಅನಗತ್ಯವಾಗಿ ಸ್ಥಳ ಬದಲಾವಣೆ ಮಾಡಬಾರದು. ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ್ದಲ್ಲಿ ಆದಿನದ ಪರ್ಯಾಯ ರಜೆ ಮತ್ತು ವೇತನವನ್ನು ನೀಡಬೇಕು. ಹೆರಿಗೆ ರಜೆ, ಪಿತೃತ್ವ ರಜೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಕೆಗೆ ಕ್ರಮ: ಮನವಿ ಸ್ವೀಕರಿಸಿದ ಸಚಿವ ನಾರಾಯಣಗೌಡ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ನಿಮ್ಮ ಸಮಸ್ಯೆಗಳಿಗೆ ಹಾಗೂ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ವೈ.ವಿಶ್ವಾ ರಾಧ್ಯ, ಜಿಲ್ಲಾಧ್ಯಕ್ಷ ಮಾದೇಗೌಡ, ಎಸ್.ಉಮೇಶ್, ಭಾನು, ಮಹೇಶ್, ಚಂದ್ರಕಲಾ, ಶಿವಕುಮಾರ್, ಅನಿಲ್ ನೇತೃತ್ವ ವಹಿಸಿದ್ದರು.