ತಿ.ನರಸೀಪುರ: ಮಹಿಳಾ ಕಾರ್ಮಿಕರ ರಕ್ಷಣೆ, ಅವರಿಗೆ ಸಿಗಬೇಕಾದ ಸವಲತ್ತು ಹಾಗೂ ಹಕ್ಕುಗಳನ್ನು ನೀಡುವತ್ತ ಕಾರ್ಖಾನೆಗಳ ಆಡಳಿತ ಮಂಡಳಿಗಳು ಗಮನಹರಿಸುವಂತೆ ಭಾರತೀಯ ಪ್ರಜಾಸತ್ತಾತ್ಮಕ ಯುವ ಒಕ್ಕೂಟ(ಡಿವೈಎಫ್ಐ)ಅಧ್ಯಕ್ಷ ಆಲಗೂಡು ಸಿ.ಪುಟ್ಟಮಲ್ಲಯ್ಯ ಆಗ್ರಹಿಸಿದರು.
ತಾಲೂಕಿನ ತಲಕಾಡು ಮುಖ್ಯ ರಸ್ತೆಯ ಚೌಹಳ್ಳಿ ಗ್ರಾಮ ಸಮೀಪದ ಶಾಹಿ ಗಾರ್ಮೆಂಟ್ಸ್‌ನ ಮುಂಭಾಗದಲ್ಲಿ ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಆಯೋಜಿಸಿದ್ದ ಮೇ 18 ನೆನಪು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ 8 ಗಂಟೆ ಅವಧಿ ಎಂದು ಸರ್ಕಾರಿ ನಿಯಮಗಳಿದ್ದರೂ ಹೆಚ್ಚು ಅವಧಿ ದುಡಿಸಿಕೊಳ್ಳುವ ದೂರುಗಳಿವೆ. ಇದು ನಿಲ್ಲಬೇಕು.
8 ಗಂಟೆ ಅವಧಿ ಕೆಲಸ, ಕನಿಷ್ಟ ವೇತನ 14, 680 ನಿಗದಿ ಮಾಡಬೇಕು, ಹೆಚ್ಚು ಮಹಿಳೆಯರು ಕಾರ್ಖಾನೆಯಲ್ಲಿ ದುಡಿಯುತ್ತಿರುವುದರಿಂದ ಅವರ ಸುರಕ್ಷತೆಗಾಗಿ ಮಹಿಳಾ ಎಎಸ್‌ಐ ನೇಮಕ ಮಾಡಬೇಕೆಂದು ಮನವಿ ಮಾಡಿದರು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದ ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯ ಬಂಡವಾಳಶಾಹಿಗಳ ನೀಡುವ ಹೆಚ್ಚುವರಿ ಹೊರೆ ಹಾಗೂ ಕೆಲಸ ಕಾರ್ಯಗಳಿಂದ ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡುವಂತಾಗುತ್ತಿದೆ. ಜತೆಗೆ ಸಾಮಾಜಿಕ ಭದ್ರತೆಯೂ ಇರುವುದಿಲ್ಲ.
ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೈಹಿಕ, ಮಾನಸಿಕ ದೌರ್ಜನ್ಯ, ತಡೆಗಟ್ಟಿ ಮಹಿಳೆಯರಿಗೆ ಸುರಕ್ಷಿತ ಭಾವನೆ ಮೂಡಿಸುವ ಕೆಲಸ ಕಂಪನಿ, ಕಾರ್ಖಾನೆಗಳಿಂದಾಗಬೇಕಿದೆ. ಕಾರ್ಮಿಕರು ಸಂಘಟಿತರಾದರೆ ಮಾತ್ರ ಸೌಲಭ್ಯ ಸವಲತ್ತುಗಳನ್ನು ಸಾಧ್ಯ. ಈ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕ ವಲಯ ಸಂಘಟಿತರಾಗಬೇಕು. ಕಾರ್ಮಿಕರು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ನಿಮ್ಮ ಹಕ್ಕು ಹಾಗೂ ಸೌಲಭ್ಯಗಳನ್ನು ಪಡೆಯಬಹುದು ಎಂದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಮಹದೇಶ್, ಅಕ್ಷರ ದಾಸೋಹ ನೌಕರರ ಸಂಘದ ಕಾಮಾಕ್ಷಮ್ಮ, ಶಾಹಿ ಗಾರ್ಮೆಂಟ್ಸ್‌ನ ಮಾನವ ಸಂಪನ್ಮೂಲಾಧಿಕಾರಿ(ಎಚ್ ಆರ್) ಅನಿಲ್, ಸಂಘಟನೆಯ ಮುಖಂಡರಾದ ಸಾವಿತ್ರಮ್ಮ, ಮಂಗಳಮ್ಮ, ಉಮಾ, ಮಹಾದೇವಮ್ಮ, ಸರಿತಾ, ಸವಿತಾ ಮಂಜುಳ, ಮತ್ತಿತರರು ಇದ್ದರು.