Advertisement

ನೊರೆ ಕೆರೆಗಳ ಅಭಿವೃದ್ಧಿಗೆ ಯೋಜನಾ ವರದಿ ಕೊಡಿ

12:38 PM Jun 09, 2017 | |

ಬೆಂಗಳೂರು: ಬೆಳ್ಳಂದೂರು ಕೆರೆ ಸೇರಿದಂತೆ ನಗರದಲ್ಲಿರುವ ಕೆರೆಗಳ ಅಭಿವೃದ್ಧಿಗೆ ” ಜಂಟಿ ಕ್ರಿಯಾ ಯೋಜನಾ ವರದಿ’ ಸಿದ್ಧಪಡಿಸುವಂತೆ ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ ಹಾಗೂ ಬಿಡಿಎಗೆ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ನಿರ್ದೇಶನ ನೀಡಿದ್ದಾರೆ.

Advertisement

ಬೆಳ್ಳಂದೂರು ಕೆರೆ ಮಲಿನತೆ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಲೋಕಾಯುಕ್ತರು, “ಕ್ರಿಯಾ ಯೋಜನೆಯಲ್ಲಿ ಇದುವರೆಗೂ ಕೆರೆಗಳ ಅಭಿವೃದ್ಧಿಗೆ ಯಾವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ? ಎಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲಾಗಿದೆ?

ಇದೀಗ ತಯಾರಿಸುವ ಕ್ರಿಯಾ ಯೋಜನೆಯಲ್ಲಿ ಕೆರೆಗಳ ಅಭಿವೃದ್ಧಿಗೆ ಯಾವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಮತ್ತು ಅಭಿವೃದ್ಧಿಗೆ ಬೇಕಾಗುವ ಸಮಯ ಎಷ್ಟು? ಎಂಬ ಸಮಗ್ರ ವಿವರಗಳನ್ನೊಳಗೊಂಡ ವರದಿಯನ್ನು ಸಿದ್ಧಪಡಿಸಿ ಜೂನ್‌ 20ರೊಳಗೆ ಸಲ್ಲಿಸಿ,’ ಎಂದು ತಾಕೀತು ಮಾಡಿದ್ದಾರೆ. 

ಕೆರೆಗಳನ್ನು ಪರಿಶೀಲಿಸಲಾಗುವುದು: “ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ವಸ್ತು ಸ್ಥಿತಿ ಅರಿಯುವ ಸಲುವಾಗಿ ಜೂನ್‌ 20 ರಂದು ಸ್ಥಳ ಪರಿಶೀಲನೆ ನಡೆಸಲಾಗುತ್ತದೆ,’ ಎಂದೂ ಲೋಕಾಯುಕ್ತರು ತಮ್ಮ ಆದೇಶದಲ್ಲಿ ಉಲ್ಲೇಖೀಸಿದ್ದಾರೆ. 

ಕೈಗೊಂಡ ಕ್ರಮಗಳ ಬಗ್ಗೆ ಲೋಕಾಕ್ಕೆ ವರದಿ 
ಹಸಿರು ನ್ಯಾಯಾಧಿಕರಣದ ಖಡಕ್‌ ಆದೇಶದ ಬಳಿಕ ಎಚ್ಚೆತ್ತು ಬೆಳ್ಳಂದೂರು ಕೆರೆ ಸ್ವತ್ಛತೆಗೆ ಮುಂದಾಗಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ, ಬಿಡಿಎ ಇದುವರೆಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಲೋಕಾಯುಕ್ತರಿಗೆ ವರದಿ ಸಲ್ಲಿಸಿವೆ. 

Advertisement

ಎನ್‌ಜಿಟಿ ಆದೇಶದಂತೆ ಬೆಳ್ಳಂದೂರು ಕೆರೆ ವ್ಯಾಪ್ತಿಯಲ್ಲಿರುವ 78 ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಲಾಗಿತ್ತು. ಕೆರೆಗಳಿಗೆ ಹರಿಯಬಿಡುತ್ತಿದ್ದ ತ್ಯಾಜ್ಯದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ ನಾಲ್ಕು ಕೈಗಾರಿಕಾ ಘಟಕಗಳ ಲೋಪ ಕಂಡು ಬಂದಿಲ್ಲ. ಹೀಗಾಗಿ ಆ ಘಟಕಗಳ ಕಾರ್ಯಾರಂಭಿಸಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. 

ಚರಂಡಿ ನೀರು ಹರಿಯುವುದು ನಿಲ್ಲದಿದ್ದರೆ 700 ಕೋಟಿ ರೂ. ನಷ್ಟ 
ಕೆರೆಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಡಿಎ ಬೆಳ್ಳಂದೂರು ಕೆರೆಯ ಹೂಳು ಹಾಗೂ ಕಳೆ ತೆಗೆಯುತ್ತಿರುವ ಕಾಮಗಾರಿ ಕುರಿತು ಸಲ್ಲಿಸಿರುವ ವರದಿಯಲ್ಲಿ ಕೆಲ ಆಕ್ಷೇಪಣೆಗಳನ್ನು ಎತ್ತಲಾಗಿದೆ. ಕಳೆ ತೆಗೆಯುವ ಕಾಮಗಾರಿಗೆ ಕೆರೆಗೆ ಹರಿದು ಬರುತ್ತಿರುವ ಚರಂಡಿ ನೀರು ಅಡ್ಡಿಯಾಗುತ್ತಿದೆ. ಹೀಗಾಗಿ ನೀರು ಹರಿಯುವುದನ್ನು ಜಲಮಂಡಳಿ ಹಾಗೂ ಬಿಬಿಎಂಪಿ ಕೆಲ ದಿನಗಳ ಮಟ್ಟಿಗೆ ತಡೆಯುವ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ಸುಮಾರು 600-700 ಕೋಟಿ ರೂಪಾಯಿ ಹಣ ಪೋಲಾಗಲಿದೆ ಎಂದು ಉಲ್ಲೇಖೀಸಲಾಗಿದೆ. 

ಎಸ್‌ಟಿಪಿ ಅಳವಡಿಕೆಗೆ ಡಿಸೆಂಬರ್‌ವರೆಗೆ ಗಡುವು
ವಿಧಾನ ಪರಿಷತ್ತು:
ಬೆಂಗಳೂರಿನಲ್ಲಿ 2016ರ ಫೆ.25ರ ನಂತರ ನಿರ್ಮಾಣಗೊಂಡ 20 ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್‌ಗಳು ಹಾಗೂ 2016ರ ಫೆ.25ಕ್ಕೂ ಮೊದಲು ನಿರ್ಮಾಣಗೊಂಡ 50 ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್‌ಗಳಲ್ಲಿ ಕೊಳಚೆ ನೀರು ಸಂಸ್ಕರಣಾ (ಎಸ್‌ಟಿಪಿ) ಘಟಕ ಅಳವಡಿಸಿಕೊಳ್ಳಲು 2017ರ ಡಿಸೆಂಬರ್‌ವರೆಗೆ ಕಾಲಾವಕಾಶ ನೀಡಲಾಗಿದೆ. ಅಲ್ಲಿಯವರಿಗೆ ದಂಡ ವಿಧಿಸುವುದಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಜೆಡಿಎಸ್‌ನ ಆರ್‌.ಚೌಡರೆಡ್ಡಿ ತೂಪಲ್ಲಿ ಪ್ರಶ್ನೆಗೆ ಉತ್ತರಿಸಿದರು. “2016ರ ಫೆ.25ರ ನಂತರ ನಿರ್ಮಾಣವಾದ 20 ಮತ್ತು ಅದಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ಗಳು, 2000 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ವಾಣಿಜ್ಯ ಕಟ್ಟಡ ಹಾಗೂ 5000 ಮೀ.ಗಿಂತ ಹೆಚ್ಚು ನಿರ್ಮಾಣ ಪ್ರದೇಶದ ವಿದ್ಯಾಸಂಸ್ಥೆಗಳಲ್ಲಿ ಎಸ್‌ಟಿಪಿ ಅಳವಡಿಕೆ ಕಡ್ಡಾಯ’ ಎಂದು ಹೇಳಿದರು.

ಹಾಗೆಯೇ 2016ರ ಫೆ.25ಕ್ಕೂ ಮೊದಲು ನಿರ್ಮಾಣಗೊಂಡ 50 ಫ್ಲ್ಯಾಟ್‌ನ ಅಪಾರ್ಟ್‌ಮೆಂಟ್‌, 2000 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ವಾಣಿಜ್ಯ ಕಟ್ಟಡ ಹಾಗೂ 10,000 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ವಿದ್ಯಾಸಂಸ್ಥೆಗಳಲ್ಲೂ ಎಸ್‌ಟಿಪಿ ಅಳವಡಿಕೆ ಕಡ್ಡಾಯ. ಎಸ್‌ಟಿಪಿ ಅಳವಡಿಕೆಗೆ 2017ರ ಡಿಸೆಂಬರ್‌ವರೆಗೆ ಕಾಲಾವಕಾಶ ನೀಡಲಾಗಿದ್ದು, ಅಲ್ಲಿಯವರೆಗೆ ದಂಡ ಹಾಕುವಂತಿಲ್ಲ.

ಒಂದೊಮ್ಮೆ ದಂಡ ವಿಧಿಸಿದ್ದರೆ ಮುಂದಿನ ನೀರಿನ ಬಿಲ್‌ ಶುಲ್ಕದಲ್ಲಿ ಹೊಂದಾಣಿಕೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಹೊಸ ತಂತ್ರಜ್ಞಾನದಡಿ ಕಡಿಮೆ ವಿಸ್ತೀರ್ಣದಲ್ಲೇ ಅಳವಡಿಸಬಹುದಾದ ಎಸ್‌ಟಿಪಿಗಳು ರೂಪುಗೊಂಡಿವೆ. ಪ್ರತಿ ಕಟ್ಟಡದಲ್ಲೂ ಸೆಟ್‌ಬ್ಯಾಕ್‌ ಜಾಗವಿರಲಿದ್ದು, ಅಲ್ಲಿ ಕಡಿಮೆ ವೆಚ್ಚದಲ್ಲಿಯೇ ಅಳವಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಒಳಚರಂಡಿ ನಿರ್ವಹಣಾ ಶುಲ್ಕ ರದ್ದು: ಎಸ್‌ಟಿಪಿ ಅಳವಡಿಸಿಕೊಳ್ಳುವ ಕಟ್ಟಡಗಳಿಗೆ ನೀರು ಬಳಕೆ ಬಿಲ್‌ ಜತೆಗೆ ವಿಧಿಸಲಾಗುತ್ತಿದ್ದ ಶೇ.30ರಷ್ಟು ಒಳಚರಂಡಿ ನಿರ್ವಹಣಾ ಶುಲ್ಕ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next