Advertisement

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ

12:29 PM May 01, 2019 | Team Udayavani |

ಗಜೇಂದ್ರಗಡ: ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾದರೂ ಸ್ಥಳೀಯ ಪುರಸಭೆ ಮತ್ತು ಜಿಲ್ಲಾಡಳಿತ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದ ಪರಿಣಾಮ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ನಿತ್ಯ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ನೀರಿನ ತೊಂದರೆ ದೂರ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ನಗರ ಘಟಕ ವತಿಯಿಂದ ಪುರಸಭೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕಳೆದ ಹಲವಾರು ತಿಂಗಳಿಂದ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಯುದ್ಧ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ದಿನದ ದುಡಿಮೆ ಬಿಟ್ಟು ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ನಿತ್ಯ ಸಾರ್ವಜನಿಕರು ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಮಾತ್ರ ನೀರಿನ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳದೇ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಸದ್ಯ 22 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ. ಪುರಸಭೆಯವರು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಯಾವೊಂದೂ ವೈಜ್ಞಾನಿಕ ಯೋಜನೆ ರೂಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪದೇ, ಪದೇ ಕುಡಿಯುವ ನೀರಿಗಾಗಿ ಬೀದಿಗಳಿದು ಹೋರಾಟ ಮಾಡುವಷ್ಟ ವ್ಯವಸ್ಥೆ ಹಳ್ಳ ಹಿಡಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಹಿಂದೆ ಬಿಜೆಪಿಯಿಂದ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ 8ರಿಂದ 10 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಭರವಸೆ ಈಡೇರಿಲ್ಲ. ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ ಕನಿಷ್ಠ ಮೂಲ ಹಕ್ಕಾದ ಕುಡಿಯುವ ನೀರು ಪಡೆಯಬೇಕಾದರೂ ಹೋರಾಟ ಮಾಡುವಂತಾಗಿರುವುದು ಖಂಡನೀಯ ಎಂದರು.

ಗಜೇಂದ್ರಗಡದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಬೇಕೆಂದರೆ ಈಗಾಗಲೇ ಸುತ್ತಲಿನ ಗ್ರಾಮಗಳಿಗೆ ನಿತ್ಯ ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ ಪಟ್ಟಣದಿಂದಲೇ ಹಾದು ಹೋಗಿವೆ. ಆ ಯೋಜನೆಗೆ ಪಟ್ಟಣವು ತಾತ್ಕಾಲಿಕವಾಗಿ ಸೇರ್ಪಡೆಗೊಳಿಸಿ, ಪೈಪ್‌ಲೈನ್‌ ಕಾಮಗಾರಿಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರತಿಭಟನಾ ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರ ಅಹವಾಲು ಆಲಿಸಿ ಮಾತನಾಡಿದ ಅವರು, ಗಜೇಂದ್ರಗಡದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪಟ್ಟಣಕ್ಕೂ ಒದಗಿಸುವ ನಿಟ್ಟಿನಲ್ಲಿ ಇನ್ನೊದು ವಾರದಲ್ಲಿ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪಟ್ಟಣದಲ್ಲಿನ ಖಾಸಗಿ ಬೋರವೆಲ್ ವಶಪಡಿಸಿಕೊಂಡು ನೀರು ಸಂಗ್ರಹಿಸಿ ಸರಬರಾಜು ಮಾಡಲಾಗುವುದು. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರುವುದಿಲ್ಲ ಎಂದರು.

Advertisement

ಜಿಲ್ಲಾ ಯೋಜನಾ ನಿರ್ದೇಶಕ ರವೀಂದ್ರ ಕರಲಿಂಗನವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ.ಎನ್‌. ಗೋನಾಳ, ತಹಶೀಲ್ದಾರ ಗುರುಸಿದ್ಧಯ್ಯ ಹಿರೇಮಠ, ಮುಖ್ಯಾಧಿಕಾರಿ ಎಸ್‌.ಎಂ. ಹಿರೇಮಠ, ಬಿಜೆಪಿ ಮುಖಂಡರಾದ ಬಿ.ಎಂ. ಸಜ್ಜನರ, ಪ್ರಭು ಚವಡಿ, ಶರಣಪ್ಪ ರೇವಡಿ, ಅಂಬರೀಶ ಅರಳಿ, ಸಿದ್ಧಪ್ಪ ಬಳಿಗೇರ, ಅಶೋಕ ವನ್ನಾಲ, ಬಸವರಾಜ ಬಂಕದ, ಶರಣಪ್ಪ ಚಳಗೇರಿ, ಸಂಜೀವಕುಮಾರ ಜೋಶಿ, ಪುರಸಭೆ ಸದಸ್ಯರಾದ ಯು.ಆರ್‌. ಚನ್ನಮ್ಮನವರ, ಮುದಿಯಪ್ಪ ಮುಧೋಳ, ಕನಕಪ್ಪ ಅರಳಿಗಿಡದ, ರುಪೇಶ ರಾಠೊಡ, ಲಕ್ಷ್ಮೀ ಮುಧೋಳ, ಶರಣಪ್ಪ ಉಪ್ಪಿನಬೆಟಗೇರಿ, ಮುತ್ತಣ್ಣ ಚಟ್ಟೇರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next