ಚಾಮರಾಜನಗರ/ಸಂತೆಮರಹಳ್ಳಿ: ಜಿಲ್ಲೆಯ ಪ್ರಸಿದ್ಧ ತಾಣ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದ್ದ ಕೇಂದ್ರ ವಿಜ್ಞಾನ, ತಂತ್ರಜ್ಞಾನ, ಪರಿಸರ ಹಾಗೂ ಅರಣ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ಸಂಸದ ಆರ್.ಧ್ರುವನಾರಾಯಣ ಶನಿವಾರ ಭೇಟಿ ಮಾಡಿ ಜಿಲ್ಲೆಯ ಅರಣ್ಯ ಸಂರಕ್ಷಣೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಹಣ ಒದಗಿಸುವಂತೆ ಮನವಿ ಮಾಡಿದರು.
ಕೆ.ಗುಡಿಯಲ್ಲಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿ ಸಮಾಲೋಚಿಸಿದ ಆರ್.ಧ್ರುವನಾರಾಯಣ ಅವರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶವು ಇದ್ದು, ಇದರ ಒಟ್ಟು ವಿಸ್ತಾರವು 574.83 ಚದರ ಕಿಮೀ ಇದೆ. ಈ ಪ್ರದೇಶವು ಹುಲಿಗಳ ಭರವಸೆದಾಯಕ ಆವಾಸ ತಾಣವಾಗಿದೆ. ಪ್ರಸ್ತುತ ಪ್ರತಿ 100 ಕಿಮೀ ಗೆ 10.21 ಹುಲಿ ಸಾಂದ್ರತೆ ಇದೆ. ಈ ಅಂಕಿಅಂಶಗಳು ಹುಲಿಗಳ ಆರೋಗ್ಯಕರ ಸಂಖ್ಯೆಯನ್ನು ಸೂಚಿಸುತ್ತದೆ. ಇದಕ್ಕೆ ಅನುಗುಣವಾಗಿ ಉತ್ತಮ ಸಂರಕ್ಷಣೆಗೆ ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಧ್ರುವನಾರಾಯಣ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಅರಣ್ಯ ರಕ್ಷಣೆಗೆ ಹೆಚ್ಚು ಆರ್ಥಿಕ ನೆರವು ಅಗತ್ಯ: ಹುಲಿ ಸಂರಕ್ಷಿತ ಪ್ರದೇಶ ನಿರ್ವಹಣೆಗೆ ಸಂಬಂಧಿಸಿದಂತೆ ಕಳ್ಳಬೇಟೆ, ಅಗ್ನಿ ಅನಾಹುತ, ಮಾನವ-ಪ್ರಾಣಿ ಸಂಘರ್ಷ ತಡೆ ಚಟುವಟಿಕೆಗಳಿಗೆ ಹೆಚ್ಚಿನ ನೆರವು ಬೇಕಿದೆ. ಹುಲಿಗಳ ಆವಾಸ ತಾಣವನ್ನು ಮತ್ತಷ್ಟು ಉತ್ತಮವಾಗಿ ನಿರ್ವಹಿಸಲು ಹೆಚ್ಚು ಅರ್ಥಿಕ ನೆರವು ಅವಶ್ಯವಿದೆ. ಆದರೆ ಪ್ರತಿ ವರ್ಷ ಹುಲಿ ಸಂರಕ್ಷಿತ ಪ್ರದೇಶ ನಿರ್ವಹಣೆ ಹಾಗೂ ಸಂರಕ್ಷಣೆಗೆ ಬಿಡುಗಡೆಯಾಗುತ್ತಿರುವ ಅನುದಾನ ಮತ್ತು ಮಂಜೂರಾತಿಯಲ್ಲಿ ಕಡಿಮೆಯಾಗುತ್ತಾ ಬರುತ್ತಿದೆ ಎಂದು ಲೋಕಸಬಾ ಸದಸ್ಯರು ಕೇಂದ್ರ ಸಚಿವರ ಗಮನ ಸೆಳೆದರು.
ಹುಲಿ ಸಂರಕ್ಷಿತ ಪ್ರದೇಶ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ನೆರವಾಗಲು ಅನುವಾಗುವಂತೆ ಸಾಕಷ್ಟು ಅನುದಾನ ನೀಡಬೇಕು. ಸಕಾಲಕ್ಕೆ ಅರ್ಥಿಕ ನೆರವು ಬಿಡುಗಡೆ ಮಾಡುವ ಮೂಲಕ ಪ್ರಾಕೃತಿಕ ಸಂಪತ್ತು ಸಂರಕ್ಷಣೆಗೆ ಅನುಕೂಲ ಕಲ್ಪಿಸಬೇಕೆಂದು ಕೋರಿ ಮನವಿ ಪತ್ರವನ್ನು ಕೇಂದ್ರ ಅರಣ್ಯ ಸಚಿವರಿಗೆ ಧ್ರುವನಾರಾಯಣ ಸಲ್ಲಿಸಿದರು.
ಬೆಳೆ ಪರಿಹಾರ ವೈಜ್ಞಾನಿಕವಾಗಿ ನಿಗದಿಯಾಗಲಿ: ಕಾಡುಪ್ರಾಣಿಗಳಿಂದ ಉಂಟಾಗುವ ಬೆಳೆಹಾನಿಗೆ ನೀಡಲಾಗುತ್ತಿರುವ ಪರಿಹಾರವು ವೈಜ್ಞಾನಿಕವಾಗಿ ನಿಗದಿಯಾಗಬೇಕು. ಪ್ರತಿವರ್ಷ ಕೃಷಿ ಚಟುವಟಿಕೆಗಳಗೆ ಬೇಕಿರುವ ರಸಗೊಬ್ಬರ, ಬಿತ್ತನೆಬೀಜ, ಇನ್ನಿತರ ಪರಿಕರಗಳ ಬೆಲೆಯು ಹೆಚ್ಚಾಗುತ್ತಲೇ ಇದೆ. ಕೃಷಿ ಉತ್ಪಾ$ದನಾ ವೆಚ್ಚವು ಏರಿಕೆಯಾಗುತ್ತಿದೆ. ಹೀಗಾಗಿ ಪ್ರತಿವರ್ಷ ರೈತರು ಕೃಷಿ ಚಟುವಟಿಕೆಗಳಿಗೆ ಮಾಡಲಾಗುವ ವೆಚ್ಚವನ್ನು ಪರಿಗಣಿಸಿ ಪರಿಹಾರ ದನವನ್ನು ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಹಾವಳಿ ತಡೆಗೆ ರೈಲ್ವೆಕಂಬಿಗಳನ್ನು ಬಳಸಿ ಬೇಲಿ, ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಕಿಮೀ ಗೆ 1.60 ಕೋಟಿ ರೂ. ನಷ್ಟು ರೈಲುಕಂಬಿಗಳು ಅಗತ್ಯವಿದೆ. ಇದನ್ನು ರಿಯಾಯಿತಿ ದರದಲ್ಲಿ ಪೂರೈಕೆ ಮಾಡಲು ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಡಲು ಸಹ ಧ್ರುವನಾರಾಯಣ ಅರಣ್ಯ ಸಚಿವರನ್ನು ಕೋರಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.