Advertisement

ಬಿದರಿ ಕಲಾವಿದರಿಗೆ ಸಾಲ ಸೌಲಭ್ಯ ಒದಗಿಸಿ: ಖಾಶೆಂಪೂರ

11:34 AM Sep 08, 2018 | |

ಬೀದರ: ನಗರದಲ್ಲಿರುವ ಬಿದರಿ ಕುಶಲಕರ್ಮಿಗಳ ಶ್ರಮದಿಂದಾಗಿ ಬಿದರಿ ಕಲೆಗೆ ಜಾಗತಿಕ ಮನ್ನಣೆ ಸಿಕ್ಕಿದೆ. ಜಾಗತಿಕ ನಕಾಶೆಯಲ್ಲಿ ಬೀದರ ಹೆಸರಾಗಿದೆ. ಇದಕ್ಕೆ ಕಾರಣರಾದ ಕುಶಲಕರ್ಮಿಗಳ ಆರ್ಥಿಕ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಅವರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ನಗರದ ಕಚೇರಿಯಲ್ಲಿ ಗುರುವಾರ ಬಿದರಿ ಕುಶಲಕರ್ಮಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬಿದರಿ ಕಲೆಯಿಂದಾಗಿ ಜಿಲ್ಲೆ ನಾಡಿನೆಲ್ಲೆಡೆ ಹೆಸರುವಾಸಿಯಾಗಿದೆ. ಈ ಕಲೆಯನ್ನು ನಂಬಿದ ಕಾರ್ಮಿಕರಿಗೆ ಅನುಕೂಲವಾಗುವ ದಿಶೆಯಲ್ಲಿ ತಲಾ 10 ಜನ ಸದಸ್ಯರನ್ನೊಳಗೊಂಡು ಒಂದು ಸ್ವಸಹಾಯ ಸಂಘ ರಚಿಸಿ, ತಲಾ 10 ಜನರ ಗುಂಪಿಗೆ 3 ಲಕ್ಷ ರೂ.ನಂತೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮತ್ತು ಡಿಸಿಸಿ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು. ಈ ಕಲೆ ನೆಚ್ಚಿಕೊಂಡಿರುವ ಮಹಿಳಾ ಕಾರ್ಮಿಕರಿಗೆ ಬಡ್ಡಿ ರಹಿತವಾಗಿ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕುಶಲಕರ್ಮಿಗಳು ತಯಾರಿಸುವ ವಸ್ತುಗಳನ್ನು ಮಾರಾಟ ಮಾಡಲು ಮಾರಾಟ ಸಹಕಾರ ಸಂಘ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು ಎಂದು ಇದೇ ವೇಳೆ ಬಿದರಿ ಕಲೆ ಕಾರ್ಮಿಕರು ಸಚಿವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಹಕಾರ ಇಲಾಖೆಯ ವಿಶ್ವನಾಥ ಮಲಕೋಡ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.